ADVERTISEMENT

ಕಿಡಿಗೇಡಿಗಳ ಕೃತ್ಯಕ್ಕೆ 1,900 ಬಾಳೆ ಗಿಡ ನಾಶ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 5:41 IST
Last Updated 2 ಜನವರಿ 2018, 5:41 IST

ಬನ್ನೂರು: ಸಮೀಪದ ಅತ್ತಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳ ಕೃತ್ಯಕ್ಕೆ ಸುಮಾರು ಒಂದೂವರೆ ಎಕರೆ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ರೈತ ರಾಮಪ್ರಸಾದ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನೀರಿನ ಕೊರತೆ ನಡುವೆಯೂ ಕಷ್ಟಪಟ್ಟು 1,900 ಗಿಡ ಬೆಳೆದ್ದರು.

ಇನ್ನೇನು ಕೆಲವೇ ದಿನಗಳಲ್ಲಿ ಫಸಲು ಕೈಸೇರುತ್ತಿತ್ತು. ಆದರೆ, ದುಷ್ಕರ್ಮಿಗಳು ಸಂಪೂರ್ಣವಾಗಿ ಕತ್ತರಿಸಿಹಾಕಿದ್ದಾರೆ. ರಾಮಪ್ರಸಾದ್ ಅವರ ಮಕ್ಕಳು ಸೋಮವಾರ ಬೆಳಿಗ್ಗೆ ತೋಟದ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿತು.

ಕುಂತನಹಳ್ಳಿ ಗ್ರಾಮಕ್ಕೆ ಹೊಂದಿ ಕೊಂಡಂತಹ ಜಮೀನಿನಲ್ಲಿ ಬಾಳೆ ಬೆಳೆದಿ ದ್ದರು. ಇದರ ಸಮೀಪದಲ್ಲಿಯೇ ಜನರ ಓಡಾಟ ಇದೆ. ಆದರೂ ಕಿಡಿಗೇಡಿಗಳು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ.

ADVERTISEMENT

ರಾಮಪ್ರಸಾದ್ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದರು. ಪುತ್ರರಾದ ವಿನಯಪ್ರಸಾದ್ ಮತ್ತು ವಿಜಯಪ್ರಸಾದ್ ಎಂಬುವರು ಮೈಸೂರಿಗೆ ತೆರಳಿದ್ದರು. ಈ ಸಂದರ್ಭ ನೋಡಿಕೊಂಡ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜು ಮಾತನಾಡಿ, ಕಿಡಿಗೇಡಿ ಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು. ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಂಗೂರು ಶಂಕರ್ ಮಾತನಾಡಿ, ಸುಮಾರು ₹ 3 ಲಕ್ಷ ಖರ್ಚು ಮಾಡಿ ಬೆಳೆದ ಬೆಳೆ ನಾಶವಾಗಿದೆ. ಪೊಲೀಸರು ಕಿಡಿಗೇಡಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಬ್ಬು, ಬಾಳೆ ಬೆಳೆಗೂ ಫಸಲ್ ಬಿಮಾ ಯೋಜನೆ ತಂದಾಗ ಇಂತಹ ಪ್ರಕರಣ ನಡೆದಾಗ ಉಪಯೋಗಕ್ಕೆ ಬರುತ್ತದೆ. ಈಗಾಗಲೇ ತಹಶೀಲ್ದಾರ್, ತೋಟಗಾರಿಕೆ ಇಲಾಖೆಗೆ ವಿಚಾರ ತಿಳಿಸಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ನಷ್ಟಕ್ಕೆ ಒಳಗಾದ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಗದ್ದೆಮೋಳೆ ಶಿವಣ್ಣ , ಕುಂತನಹಳ್ಳಿ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.