ADVERTISEMENT

88 ಗ್ರಾಮಗಳ ಜನರಿಗೆ ನೈರ್ಮಲ್ಯ ಪಾಠ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 5:59 IST
Last Updated 22 ಸೆಪ್ಟೆಂಬರ್ 2014, 5:59 IST
ಹುಣಸೂರಿನಲ್ಲಿ ನವ್ಯ ದಿಶ ಟ್ರಸ್ಟ್ ಮತ್ತು ಟಿ. ಮುನಿಸ್ವಾಮಪ್ಪ ಟ್ರಸ್ಟ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ  ನೀರು ಮತ್ತು ನೈರ್ಮಲ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ನೈರ್ಮಲ್ಯ ಕಾಪಾಡುವ ಬಗ್ಗೆ ಮಾಹಿತಿ ನೀಡಲಾಯಿತು
ಹುಣಸೂರಿನಲ್ಲಿ ನವ್ಯ ದಿಶ ಟ್ರಸ್ಟ್ ಮತ್ತು ಟಿ. ಮುನಿಸ್ವಾಮಪ್ಪ ಟ್ರಸ್ಟ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನೀರು ಮತ್ತು ನೈರ್ಮಲ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ನೈರ್ಮಲ್ಯ ಕಾಪಾಡುವ ಬಗ್ಗೆ ಮಾಹಿತಿ ನೀಡಲಾಯಿತು   

ಹುಣಸೂರು:  ಕರ್ನಾಟಕ, ಮಹಾರಾಷ್ಟ್ರ ಮತ್ತು ಚೆನ್ನೈಗಳಲ್ಲಿ ನವ್ಯ ದಿಶ ಟ್ರಸ್ಟ್‌ 2005ರಿಂದ ನೈರ್ಮಲ್ಯ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸುತ್ತಿದೆ. ಈ ಮೂರು ರಾಜ್ಯಗಳಲ್ಲಿ ಒಂದು ಲಕ್ಷ ಶೌಚಾಲಯಗಳನ್ನು ಜನರ ಸಹಭಾಗಿತ್ವದಲ್ಲಿ ನಿರ್ಮಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಸಂಸ್ಥೆಯ ಕಾರ್ಯನಿರ್ವಹಣಾ ನಿರ್ದೇಶಕ ಆನಂದ್‌ ಯಾದವತ್‌ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕುಮಟ್ಟದ ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ್ದ 88 ಗ್ರಾಮಗಳ ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಭಾನುವಾರ ಅವರು ಮಾತನಾಡಿದರು.

ಹುಣಸೂರು ತಾಲ್ಲೂಕಿನಲ್ಲಿ ಈಗಾಗಲೇ 800 ಕುಟುಂಬಗಳನ್ನು ಗುರುತಿಸಿ, ಶೌಚಾಲಯ ನಿರ್ಮಿಸಿ­ಕೊಳ್ಳಲು ಪ್ರೇರಣೆ ನೀಡಲಾಗಿದೆ. ಶೌಚಾಲಯ ನಿರ್ಮಿಸಿಕೊಳ್ಳುವ ಫಲಾನುಭವಿಗೆ ಸರ್ಕಾರ ನೀಡುವ ರಿಯಾಯಿತಿ ಹಣ ರೂ 10 ಸಾವಿರ ನೀಡಲಾಗುವುದು. ಶುದ್ಧ ಕುಡಿಯುವ ನೀರು ಬಳಕೆಯಿಂದಾಗುವ ಲಾಭ ಹಾಗು ನಲ್ಲಿ ಸುತ್ತಲೂ ಕಾಪಾಡುವ ಬಗ್ಗೆ ಅರಿವು ಮೂಡಿಸಿ, ನೀರಿನ ಸಂಪರ್ಕ ನೀಡಲಾಗುತ್ತಿದೆ. ಫಲಾನುಭವಿಗೆ ಈ ಯೋಜನೆಯಲ್ಲಿ ರೂ 5 ಸಾವಿರ ಅನುದಾನ ನೀಡಲಾಗುತ್ತಿದೆ ಎಂದರು.

ನವ್ಯ ದಿಶ ಟ್ರಸ್ಟ್‌ ಮತ್ತು ಟಿ. ಮುನಿಸ್ವಾಮಪ್ಪ ಟ್ರಸ್ಟ್‌ ಸಂಸ್ಥೆ ಆಶ್ರಯದಲ್ಲಿ ರಾಜ್ಯದಲ್ಲಿ 24 ಜಿಲ್ಲೆ, ಮಹಾರಾಷ್ಟ್ರದಲ್ಲಿ 14 ಮತ್ತು ತಮಿಳಿನಾಡಿನಲ್ಲಿ 3 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು, ನೀರು ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಮಹಿಳೆಯರಿಗೆ ಅರಿವು ಮೂಡಿಸುವ ಮೂಲಕ ಶುಚಿತ್ವ ಹಾಗೂ ನೈರ್ಮಲ್ಯ ವೃದ್ಧಿಸುವ ಜತೆಗೆ ಮೈಕ್ರೋ ಫೈನಾನ್ಸ್‌ ಯೋಜನೆಯನ್ನು ಜಾರಿಗೆ ತಂದು ಮೂರು ರಾಜ್ಯಗಳಿಂದ ಒಟ್ಟು ರೂ 100 ಕೋಟಿ ಹಣಕಾಸು ವ್ಯವಹಾರ ನಡೆಸಿದೆ ಎಂದರು.

ಕಾರ್ಯಾಗಾರದಲ್ಲಿ ಸದಸ್ಯರಿಗೆ ಬೀದಿ ನಾಟಕ, ಜನಪದ ಹಾಡುಗಳ, ಭಿತ್ತಿಪತ್ರಗಳ ಮೂಲಕ ಅರಿವು ಮೂಡಿಸಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಹಣಾಧಿಕಾರಿ ಡಾ.ಪ್ರೇಮ್‌­ಕುಮಾರ್‌, ಶಿವ­ಕುಮಾರ್‌, ಉಮೇಶ್‌ ಮತ್ತು ಇತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.