ADVERTISEMENT

ಅಬ್ಬರಿಸಿದ ಮಳೆಗೆ ಬಾಯ್ಬಿಟ್ಟ ಗುಂಡಿಗಳು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 7:03 IST
Last Updated 1 ಸೆಪ್ಟೆಂಬರ್ 2014, 7:03 IST

ರಾಯಚೂರು: ಸತತವಾಗಿ 8–10 ದಿನಗಳಿಂದ ಸುರಿದ ಮಳೆಗೆ ನಗರದ ತ್ಯಾಜ್ಯ ಕೊಚ್ಚಿಕೊಂಡು ಹೋಗಿದ್ದು, ಒಳಚರಂಡಿ, ರಾಜಕಾಲುವೆಗಳು ಬಂದ್ ಆಗಿವೆ. ಈಗ ಮಳೆ ನೀರು ಚರಂಡಿ ನೀರು, ತ್ಯಾಜ್ಯದ ಜತೆಗೆ ರಸ್ತೆ ಮೇಲೆ ಹರಿಯಲು ಆರಂಭಿಸಿದೆ.

ಯಾವುದೇ ರಸ್ತೆಗೆ ಹೋದರೂ ತ್ಯಾಜ್ಯದ ಗುಡ್ಡೆ ಕಾಣುತ್ತದೆ. ಚರಂಡಿ ಯಾವುದು?, ರಸ್ತೆ ಯಾವುದು? ಎಂಬಂತಾಗಿದೆ. ಕೆಲಕಡೆ ನಗರಸಭೆ ಒಳಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡುತ್ತಿದ್ದರೂ ನಗರಸಭೆ ಪ್ರಯತ್ನ ಸಾಲದಾಗಿದೆ.
ಹೀಗೆ ಸ್ವಚ್ಛಗೊಳಿಸಿ ಮುಂದಿನ ಬಡಾವಣೆ, ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಷ್ಟ ರಲ್ಲಿ ಮತ್ತೆ ಚರಂಡಿಗಳು ತುಂಬಿ ಹರಿಯುತ್ತಿವೆ.

ಕೆಲವು ಕಡೆ ರಸ್ತೆಗಳು ಸಂಪೂರ್ಣ ತೊಳೆದ ಕಲ್ಲುಗಳಂತಾದರೂ ರಸ್ತೆಗಳ ನಡುವೆ ಬಿರುಕು ಬಿಟ್ಟು ಅನಾಹುತಕ್ಕೆ ಆಸ್ಪದ ನೀಡುವಂತಿದೆ.
ರಸ್ತೆಯಲ್ಲಿ ದಿಢೀರ್ ತಗ್ಗು ಗುಂಡಿಗಳು ಬೀಳುತ್ತಿವೆ. ಮಳೆ ಬರುವಾಗ, ರಾತ್ರಿ ಹೊತ್ತು ಈ ತಗ್ಗು ಗುಂಡಿಗಳು ಕಾಣದೇ ಜನತೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈ ಗಲೀಜು ನೀರು ರಸ್ತೆಗೆ ಹರಿದು ಹೋಗುವುದು ರಸ್ತೆಯ ಇಕ್ಕೆಲಗಳಲ್ಲಿನ ವ್ಯಾಪಾರಸ್ಥರ ವಹಿವಾಟಿಗೆ ತೊಂದರೆಯಾಗಿದೆ.

‘ನಾನು ದಿನಕ್ಕೆ ₨ 3,000 ದುಡಿಯುತ್ತೇನೆ. ಈಗ ಮಳೆಯಾಗಿ ನನ್ನ ಅಂಗಡಿಗೆ ಬರಲು ದಾರಿ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ನೀರು ನಿಂತಿದೆ. ಹೀಗಾಗಿ ಶೇ 50ರಷ್ಟು ವ್ಯಾಪಾರ ಕುಸಿದಿದೆ. ಪಂಚರ್, ಸಣ್ಣ ಮೆಕ್ಯಾನಿಕ್‌ಗಳು ಕೆಲಸ ಮಾಡ ದಂತಾಗಿದೆ. ರಸ್ತೆಯಲ್ಲಿ ನುಗ್ಗಿ ಬಂದ ನೀರು ಅಂಗಡಿ ಹೊಕ್ಕು ಅನಾಹುತ ಮಾಡುತ್ತಿದೆ. ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿ ಸಬೇಕು’ ಎಂದು ಪಾನ್‌ಶಾಪ್ ಅಂಗಡಿ ಮಾಲೀಕ ನರಸಿಂಹ ನಗರಸಭೆಗೆ ಮನವಿ ಮಾಡಿದರು.

‘ಮಳೆಯಿಂದ ಸಮಸ್ಯೆ ಉಲ್ಬಣ’
ಮೊದಲೇ ರಸ್ತೆಯಲ್ಲಿ ಸಾಕಷ್ಟು ತಗ್ಗು ಗುಂಡಿ ಇದ್ದವು. ಈಗ ಮಳೆಯಾಗಿ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗಿದೆ. ರಸ್ತೆಯಲ್ಲಿ ಜನ ಬೀಳುವುದೇ ಆಗಿದೆ. ರಾತ್ರಿ ವಿದ್ಯುತ್ ಸಮಸ್ಯೆ ಮೀತಿ ಮೀರಿದೆ. ಕರೆಂಟ್ ಇಲ್ಲದೇ ನಿದ್ರೆ ಇಲ್ಲ. ಸೊಳ್ಳೆ ಕಾಟ ಮೀತಿ ಮೀರಿದೆ. ರೋಗಗಳ ಭಯ ಆವರಿಸಿದೆ. ನಗರಸಭೆ ಇಂಥ ಸಮಸ್ಯೆ ತುರ್ತು ಪರಿಹರಿಸಬೇಕು. ಸಮರ್ಪಕ ವಿದ್ಯುತ್ ಕಲ್ಪಿಸಬೇಕು.
–ಮಹೆಬೂಬ್, ಎಲೆಕ್ಟ್ರಿಷಿಯನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT