ADVERTISEMENT

ಆರೋಪಿಗಳ ಸಂಚು ತಿರುವು ಮುರುವು!

ನಾಗರಾಜ ಚಿನಗುಂಡಿ
Published 15 ಮಾರ್ಚ್ 2017, 5:42 IST
Last Updated 15 ಮಾರ್ಚ್ 2017, 5:42 IST
ರಾಯಚೂರು ಜಿಲ್ಲೆ ಮಾನ್ವಿಯಲ್ಲಿರುವ ಕಳಿಂಗ ಪದವಿ ಪೂರ್ವ ಕಾಲೇಜು
ರಾಯಚೂರು ಜಿಲ್ಲೆ ಮಾನ್ವಿಯಲ್ಲಿರುವ ಕಳಿಂಗ ಪದವಿ ಪೂರ್ವ ಕಾಲೇಜು   

ರಾಯಚೂರು: ಪ್ರತಿಸ್ಪರ್ಧಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೇಂದ್ರದಲ್ಲಿ ಮೇಲ್ವಿಚಾರಣೆ ಬಿಗಿಯಾದರೆ ಫಲಿತಾಂಶ ಇಳಿಮುಖ ವಾಗುತ್ತದೆ. ಇದರಿಂದ ಮುಂದಿನ ವರ್ಷ ತಮ್ಮ ಕಾಲೇಜಿಗೆ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವುದಕ್ಕೆ  ಬರುತ್ತಾರೆ ಎನ್ನುವ ಸಂಚು ರೂಪಿಸಿ ವಾಟ್ಸ್‌ಆ್ಯಪ್‌ ಮೂಲಕ ದ್ವಿತೀಯ ಪಿಯು ಅಕೌಂಟೆನ್ಸಿ ಪ್ರಶ್ನೆಪತ್ರಿಕೆಯನ್ನು ಹರಿಬಿಟ್ಟಿದ್ದ ಮೂವರು ಆರೋಪಿಗಳ ಲೆಕ್ಕಾಚಾರ ಅವರಿಗೇ ಮುಳುವಾಗಿದೆ.

ಮೂರು ವರ್ಷಗಳಿಂದ ಕಳಿಂಗ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ತಮ್ಮ ಕಾಲೇಜಿನತ್ತ ವಿದ್ಯಾರ್ಥಿಗಳನ್ನು ಹೇಗಾದರೂ ಮಾಡಿ ಸೆಳೆಯಬೇಕು ಎನ್ನುವುದೇ ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು. ಇದನ್ನು ವಿಚಾರಣೆ ವೇಳೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಲೊಯೊಲಾ ಪದವಿ ಪೂರ್ವ ಕಾಲೇಜಿನಲ್ಲಿ ಕಳಿಂಗ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಅಲ್ಲಿ ನಕಲಿಗೆ ಅವಕಾಶವಿರಲಿಲ್ಲ. ಅಲ್ಲದೆ, ಆರೋಪಿಗಳು ಲೊಯೊಲಾ ಕಾಲೇಜು ಪ್ರವೇಶಿಸಲು ನಿರಾಕರಿಸಲಾಗಿತ್ತು. ಇದರಿಂದಲೂ ಮೂವರೂ ಅಸಮಾಧಾನಗೊಂಡಿದ್ದರು.

ADVERTISEMENT

ಸಂಖ್ಯಾಶಾಸ್ತ್ರದ ಅತಿಥಿ ಉಪನ್ಯಾಸಕ ಸಿದ್ದನಗೌಡ ಅಧಿಕಾರಿಯ ಸೋಗಿನಲ್ಲಿ ಗಾಂಧಿ ಮೆಮೊರಿಯಲ್‌ ಕಾಲೇಜು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿ ಪ್ರಶ್ನೆಪತ್ರಿಕೆಯ ಛಾಯಾಚಿತ್ರವನ್ನು ಮೊಬೈಲ್‌ ನಲ್ಲಿ ತೆಗೆದುಕೊಂಡು ವಾಟ್ಸ್‌ ಆ್ಯಪ್‌ ಮೂಲಕ ಹರಿಬಿಟ್ಟನು. ಪ್ರಶ್ನೆಪತ್ರಿಕೆ ಬಯಲಾಗಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದರೆ ಈ ಕೇಂದ್ರದಲ್ಲಿ ಭದ್ರತೆ ಬಿಗಿಯಾಗುತ್ತದೆ ಬಿಗಿಯಾಗುತ್ತದೆ ಎಂದು ಆರೋಪಿಗಳು ಅಂದಾಜಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಆರೋಪಿಗಳು ತಮ್ಮ ಪ್ರತಿಸ್ಪರ್ಧಿ ಕಾಲೇಜು ಎಂದು ಭಾವಿಸಿದ್ದ ಕಲ್ಮಠ ಕಾಲೇಜಿನ ವಿದ್ಯಾರ್ಥಿಗಳು ಗಾಂಧಿ ಮೆಮೊರಿಯಲ್‌ ಕಾಲೇಜು ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಈ ಕೇಂದ್ರದ ಮೇಲ್ವಿಚಾರಣೆಯನ್ನು ಬಿಗಿ ಮಾಡಿಸಲು ಹೋಗಿ ತಾವೇ ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಿದರು.

**

ಕಾಲೇಜುಗಳ ನಡುವೆ ಸ್ಪರ್ಧೆ

ಮಾನ್ವಿಯಲ್ಲಿ ಎಂಟು ಖಾಸಗಿ ಅನುದಾನ ರಹಿತ ಹಾಗೂ ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಕಳಿಂಗ ಪದವಿಪೂರ್ವ ಕಾಲೇಜು, ಲೊಯೊಲಾ ಹಾಗೂ ಕಲ್ಮಠ ಪದವಿ ಪೂರ್ವ ಕಾಲೇಜುಗಳು ಅನುದಾನ ರಹಿತ ವಿಜ್ಞಾನ ಕಾಲೇಜುಗಳಾಗಿವೆ.

‘ಫಲಿತಾಂಶ ಹೆಚ್ಚಿಸಿ ಪ್ರವೇಶಾತಿ ಹೆಚ್ಚಿಸಿಕೊಳ್ಳಬೇಕು ಎನ್ನುವ ಆಸೆ ಖಾಸಗಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳ ಮಧ್ಯೆ ಅನಾರೋಗ್ಯಕರ ಸ್ಪರ್ಧೆಯನ್ನು ಹುಟ್ಟುಹಾಕಿದೆ. ಈ ಪೈಪೋಟಿಯ ಕಾರಣದಿಂದಲೇ ಪ್ರಶ್ನೆಪತ್ರಿಕೆ ಅವಾಂತರವಾಗಿದೆ’ ಎಂದು ಹೆಸರು ಹೇಳಲು ಬಯಸದ ಉಪನ್ಯಾಸಕರೊಬ್ಬರು ತಿಳಿಸಿದರು.

ಕಳಿಂಗ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ, ಆರೋಪಿ ಶರಣಬಸವ ಬೆಟ್ಟದೂರು ಸೇರಿದಂತೆ ಏಳು ಜನರು ಕೂಡಿ ಕಾಲೇಜು ಸ್ಥಾಪಿಸಿದ್ದರು. ಶರಣಬಸವ ಬೆಟ್ಟದೂರು ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಿದ್ದರು.

**

ಪ್ರಶ್ನೆ ಪತ್ರಿಕೆ ಅಕ್ರಮಕ್ಕೆ ಖಂಡನೆ

ಮಾನ್ವಿ: ಪಟ್ಟಣದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಪ್ರಕರಣ ಖಂಡಿಸಿ ಸ್ಟೂಡೆಂಟ್ಸ್‌ ಇಸ್ಲಾಮಿಕ್ ಆರ್ಗನೈಜೇಶನ್‌ ಆಫ್‌ ಇಂಡಿಯಾ (ಎಸ್‌ಐಒ) ಮತ್ತು ಸಾಲಿಡಾರಿಟಿ ಯೂತ್‌ ಮೂವ್‌ ಮೆಂಟ್‌(ಎಸ್‌ವೈಎಮ್‌)  ಸಂಘಟನೆ ಪದಾಧಿಕಾರಿಗಳು ಮತ್ತು ಸದಸ್ಯರು ಮಂಗಳವಾರ ಪ್ರತ್ಯೇಕವಾಗಿ ತಹಶೀಲ್ದಾರ್‌ ಪರಶುರಾಮ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರಶ್ನೆಪತ್ರಿಕೆ ಅಕ್ರಮ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಭರವಸೆಯ ವಾತಾವರಣ ಕಲ್ಪಿಸಬೇಕು ಎಂದು ಮನವಿ ಪತ್ರಗಳಲ್ಲಿ ಒತ್ತಾಯಿಸಲಾಯಿತು.

ಎಸ್‌ವೈಎಮ್‌ ಸಂಘಟನೆಯ ಹುಸೇನ್‌ ಬಾಷಾ, ಸೈಯದ್‌ ಫರ್ಹಾನ್ ಯಮನಿ, ಹಬೀಬ್‌ ಖಾನ್‌, ಸೈಯದ್‌ ರಬ್ಬಾನಿ ಖಾದ್ರಿ, ಅಬ್ದುಲ್‌ ಕರೀಮ್‌, ರಿಯಾಜ್‌ ಖಾನ್, ಬಾಬಾ ಖಾನ್‌, ಎಸ್‌ಐಒ ಸಂಘಟನೆಯ  ಮುಖಂಡರಾದ ಅಬ್ದುಲ್‌ ಖಯ್ಯುಮ್‌,  ನಾಸಿರ್‌ ಅಲಿ, ಇರ್ಶಾದ್‌ ಖಾನ್‌, ಜುಬೇರ್‌ ಖಾನ್‌, ಅಬ್ದುಲ್‌ ಜಬ್ಬಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.