ADVERTISEMENT

‘ಉತ್ತರ ಕಾಶಿ’ ಅಣೇಮಲ್ಲೇಶ್ವರ ದೇಗುಲ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:22 IST
Last Updated 21 ಮೇ 2017, 6:22 IST
ದೇವದುರ್ಗ ತಾಲ್ಲೂಕಿನ ಅಣೇಮಲ್ಲೇಶ್ವರ ದೇವಸ್ಥಾನದ ಮೇಲಭಾಗದಲ್ಲಿರುವ ಸುರಂಗ ಮಾರ್ಗ
ದೇವದುರ್ಗ ತಾಲ್ಲೂಕಿನ ಅಣೇಮಲ್ಲೇಶ್ವರ ದೇವಸ್ಥಾನದ ಮೇಲಭಾಗದಲ್ಲಿರುವ ಸುರಂಗ ಮಾರ್ಗ   

ದೇವದುರ್ಗ: ಪುರಾಣಗಳಲ್ಲಿ ಶ್ವೇತಶೃಂಗೆ ಎಂದು ಕರೆಯುತ್ತಿದ್ದ  ತಾಲ್ಲೂಕಿನ ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣೇಮಲ್ಲೇಶ್ವರ ಇಂದು ಉತ್ತರ ಕಾಶಿ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೃಷ್ಣಾ ನದಿಯು ದಕ್ಷಿಣದಿಂದ ಉತ್ತರ ಮುಖವಾಗಿ ಹರಿಯುತ್ತಿದೆ. ಇದನ್ನು ಉತ್ತರಕಾಶಿ, ಪುಣ್ಯ ಸ್ಥಳ ಎಂದು ಕರೆಯಲಾಗುತ್ತದೆ.

ಶ್ವೇತಶೃಂಗೆ ಎಂಬ ಮಹಾ ರಾಜನು ತಪಸ್ಸು ಮಾಡಿದ ಸ್ಥಳವಾಗಿರುವುದರಿಂದ ಪುರಾಣಗಳಲ್ಲಿ ಶ್ವೇತಶೃಂಗೆ ಎಂದು ಖ್ಯಾತಿ ಕರೆಯಲಾಗುತ್ತದೆ. ಋಷಿ ಮಹಾ ಮುನಿಗಳು ತಪಸ್ಸು ಮಾಡಿದ ದೊಡ್ಡ, ದೊಡ್ಡ, ಗುಹೆಗಳು ಇಂದಿಗೂ ಇಲ್ಲಿ ಕಾಣಬಹುದಾಗಿದೆ.

ನದಿಯೊಳಗೆ ಈಶ್ವರ ಲಿಂಗವಿದ್ದು, ನದಿ ದಂಡೆಯಲ್ಲಿ ಲಕ್ಷ್ಮಿ ಮತ್ತು ಭೂದೇವಿ ಜತೆ ಕೇಶವ ದೇವರ ಸುಂದರ ವಿಗ್ರಹವಿರುವ ಪುರಾತನ ಹಳೆಯ ಗರ್ಭ ಗುಡಿ ಇದೆ. ಎದುರಿಗೆ ಸುಂದರವಾದ ಗರುಡವಾಹನನ ಮೂರ್ತಿ ಜೊತೆಗೆ ಹಾಲಗಂಬ ಸಹ ಇದೆ.

ADVERTISEMENT

ಪಂಚಕೋಶ:  ಶ್ವೇತಶೃಂಗದಿಂದ ಕೊಪ್ಪರ ಗ್ರಾಮದ ಉಗ್ರ ನರಸಿಂಹ ದೇವಸ್ಥಾನದವರೆಗೂ ಸುಮಾರು 5 ಕಿ.ಮೀವರೆಗೂ ಸುರಂಗ ಇದ್ದು. ಈ ಹಿಂದೆ ಋಷಿ ಮುನಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರು ಎಂದು ಪುರಣಾಗಳಲ್ಲಿ ಉಲ್ಲೇಖವಿದೆ.

ಶ್ವೇತ ಶೃಂಗದ ಸುತ್ತಲೂ 8 ತೀರ್ಥಗಳಾದ ಮಲ್ಲಿಕಾರ್ಜುನ ತೀರ್ಥ, ಸೀತಾರಾಯ ತೀರ್ಥ, ಶೃಂಗಿ ತೀರ್ಥ, ಶ್ವೇತ ತೀರ್ಥ, ಕಲ್ಮಷಹರ ತೀರ್ಥ, ರುದ್ರ ತೀರ್ಥ, ಹಾಗೂ ನರಸಿಂಹ ತೀರ್ಥ ಇವೆ.ಪಟ್ಟಣದಿಂದ 12ಕಿ.ಮೀ ದೂರದ ಈ ಸ್ಥಳಕ್ಕೆ ಹೋಗಲು ಒಳ್ಳೆಯ ರಸ್ತೆ ಮತ್ತು ಬಸ್ಸಿನ ವ್ಯವಸ್ಥೆ ಇದೆ.

ಸಂಕ್ರಾತಿ ಹಬ್ಬ ಸೇರಿದಂತೆ ವರ್ಷ  ಪೂರ್ತಿ ಪುಣ್ಯ ಸ್ನಾನಕ್ಕಾಗಿ ಇಲ್ಲಿಗೆ ದೂರದಿಂದ ಅನೇಕ ಜನರು ಬರುತ್ತಾರೆ. ಆದರೆ, ನದಿಯಲ್ಲಿ ಮೊಸಳೆಗಳ ಕಾಟದಿಂದ ಸ್ನಾನಕ್ಕೆ ಭಕ್ತರು ಪರದಾಡುವಂತಾಗಿದೆ. ಪಕ್ಕದಲ್ಲಿಯೇ ಇರುವ ದೊಂಡಂಬಳಿ ಗ್ರಾ.ಪಂ ಇತ್ತಕಡೆ ಗಮನ ಹರಿಸಿ ಸ್ನಾನಘಟ್ಟ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
 

* * 

ಮಹಾತ್ಮ ಗಾಂಧಿ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸ್ನಾನಘಟ್ಟ ನಿರ್ಮಾಣಕ್ಕೆ  ಪ್ರಸ್ತಾವ ಸಲ್ಲಿಸಲಾಗಿದೆ                            
ಶಿವರಾಜ,
ಪ್ರಭಾರ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.