ADVERTISEMENT

ಎನ್‌ಪಿಎಸ್‌ ಯೋಜನೆ ರದ್ದುಪಡಿಸಲು ಪ್ರಯತ್ನ: ಶಾಸಕ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 9:47 IST
Last Updated 20 ನವೆಂಬರ್ 2017, 9:47 IST

ರಾಯಚೂರು: ‘ಸರ್ಕಾರಿ ನೌಕರರಿಗೆ ಭದ್ರತೆಯಿಲ್ಲದ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಲು ಬಿಜೆಪಿ ರಾಜ್ಯ ನಾಯಕರ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಶಾಸಕ ತಿಪ್ಪರಾಜು ಹವಾಲ್ದಾರ ಹೇಳಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಜಿಲ್ಲಾ ಘಟಕ, ಕೃಷಿ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ನೌಕರರ ಸಂಘದಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎನ್‌ಪಿಎಸ್‌ ನೌಕರರ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕ್‌ ಅವರಿಗೆ ಎನ್‌ಪಿಎಸ್‌ ರದ್ದುಪಡಿಸಲು ಮನವಿ ಮಾಡಲಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್‌ ರದ್ದುಪಡಿಸಲಿದೆ’ ಎಂದು ಭರವಸೆ ನೀಡಿದರು.

ADVERTISEMENT

ಎನ್‌ಪಿಎಸ್ ನೌಕರರ ಸಂಘದ ಮಾನ್ವಿ ತಾಲ್ಲೂಕು ಅಧ್ಯಕ್ಷ ರಾಜಾಸಾಬ್ ಪ್ರಾಸ್ತಾವಿಕ ಮಾತನಾಡಿ, ‘ಸರ್ಕಾರಿ ನೌಕರರು ನಿವೃತ್ತಿ ಜೀವನದಲ್ಲಿ ಹೊಸ ಪಿಂಚಣಿ ಯೋಜನೆಯಿಂದ ನಿಶ್ಚಿತ ಪಿಂಚಣಿ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇದರಿಂದ ನಿವೃತ್ತಿಯಾದ ನಂತರ ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ಜನವರಿಯಲ್ಲಿ ರಾಜ್ಯ ಮಟ್ಟದ ಹೋರಾಟ ಜನವರಿಯಲ್ಲಿ ನಡೆಯಲಿದ್ದು, ರಾಜ್ಯದ ಎಲ್ಲ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ಬಸವನಗುಡಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಎಚ್.ಎಸ್ ಸತ್ಯನಾರಾಯಣ ಉಪನ್ಯಾಸ ನೀಡಿದರು. ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಮಹಾಂತೇ ಬಿರಾದರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಎನ್.ಶಂಕರಪ್ಪ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೇಶವ ರೆಡ್ಡಿ, ಮಹಾಂತೇಶ ಪಾಟೀಲ ಅತ್ತನೂರು, ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ಶಾಂತರಾಮ, ಪ್ರಧಾನ ಕಾರ್ಯದರ್ಶಿ ನಾಗನಗೌಡ, ಸಹ ಕಾರ್ಯದರ್ಶಿ ಮಹೇಶ ಹೊಸೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.