ADVERTISEMENT

ಏರುತ್ತಿರುವ ಬಿಸಿಲು; ಹೈರಾಣಾದ ಜನ

ಬಿಕೋ ಎನ್ನುತ್ತಿರುವ ಜನದಟ್ಟಣೆಯ ಕೇಂದ್ರಗಳು, ರಸ್ತೆಗಳು, ಜಾನುವಾರುಗಳಿಗೂ ಸಂಕಷ್ಟ

ನಾಗರಾಜ ಚಿನಗುಂಡಿ
Published 19 ಏಪ್ರಿಲ್ 2017, 4:43 IST
Last Updated 19 ಏಪ್ರಿಲ್ 2017, 4:43 IST
ಏರುತ್ತಿರುವ ಬಿಸಿಲು; ಹೈರಾಣಾದ ಜನ
ಏರುತ್ತಿರುವ ಬಿಸಿಲು; ಹೈರಾಣಾದ ಜನ   
ರಾಯಚೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಮನೆ ಹಾಗೂ ಉದ್ಯೋಗ ಸ್ಥಳದಿಂದ ಹೊರಗಡೆ ಇತರೆ ಕೆಲಸಗಳಿಗೆ ಹೋಗಲು  ಜನರು ಹಿಂದೇಟು ಹಾಕುತ್ತಿದ್ದಾರೆ.
 
ನೀರು, ನೆರಳು ಹಾಗೂ ಗಾಳಿ ಸಿಗುವ ಒಂದು ನೆಲೆಯಲ್ಲಿ ದಿನಪೂರ್ತಿ ಕಳೆಯುವ ಅನಿವಾರ್ಯತೆಯನ್ನು ಬೇಸಿಗೆ ಕಾಲ ನಿರ್ಮಾಣ ಮಾಡಿದೆ. ತೀರಾ ಅನಿವಾರ್ಯವಾಗಿ ಹೊರಗೆ ಹೋಗಬೇಕಾದವರು ಮಾತ್ರ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. 
 
ಕಾಲ್ನಡಿಗೆಯಲ್ಲಿ ಸಂಚರಿಸುವವರು ತೀರಾ ವಿರಳರಾಗಿದ್ದಾರೆ. ಬೈಕ್‌, ಕಾರು ಹಾಗೂ ಇತರೆ ವಾಹನಗಳು ಬಿಸಿಲಿನ ತಾಪಕ್ಕೆ ಕಾದ ಹೆಂಚಿನಂತೆ ಆಗುತ್ತಿವೆ. ಇದರಿಂದ ವಾಹನಗಳಲ್ಲಿ ಸಂಚರಿಸುವವರು ಕೂಡಾ ಸಾಮಾನ್ಯ ದಿನಗಳಲ್ಲಿ ಕಾಣುತ್ತಿದ್ದ ಪ್ರಮಾಣದಲ್ಲಿ ಹೊರಗೆ ಬರುತ್ತಿಲ್ಲ.
 
‘ಮದುವೆ ಮತ್ತು ಇತರೆ ಸಮಾರಂಭಕ್ಕೆ ಆಮಂತ್ರಣಗಳು ಬಂದಿವೆ. ಕೆಲವು ಸಮಾರಂಭಕ್ಕೆ ತಪ್ಪಿಸಲು ಆಗುವುದಿಲ್ಲ. ಅನಿವಾರ್ಯ ಎಂದುಕೊಂಡು ಒಂದು ಸಮಾರಂಭಕ್ಕೆ ಹೋಗಿ ಬಂದರೆ ದಿನವಿಡೀ ಆಯಾಸ ಪಡುವಂತಾಗುತ್ತದೆ.

ಬೇರೆ ಊರುಗಳಲ್ಲಿ ನಡೆಯುವ ಸಮಾರಂಭಕ್ಕೆ ಹೋಗಿ ಬರುವುದು ಅಸಾಧ್ಯ ಆಗಿಬಿಟ್ಟಿದೆ. ಸ್ನೇಹಿತರು, ಸಂಬಂಧಿಕರು ಸಮಾರಂಭಕ್ಕಾಗಿ ಕರೆದರೂ ಬಿಸಿಲಿನ ಕಾರಣದಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್‌, ಮೇ ತಿಂಗಳಲ್ಲಿ ಮನೆಯಲ್ಲೇ ಉಳಿದು ಕೊಂಡರೆ ಸ್ವಲ್ಪ ನೆಮ್ಮದಿ ಸಿಗುತ್ತದೆ’ ಎನ್ನುತ್ತಾರೆ ಮಧ್ಯೆ ವಯಸ್ಸಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಅವರು.
 
ರಸ್ತೆಗಳು ಖಾಲಿ: ನಗರದ  ಸ್ಟೇಷನ್‌ ರಸ್ತೆ, ಗೋಶಾಲಾ ರಸ್ತೆ, ರೈಲ್ವೆ ಕೆಳಸೇತುವೆ, ರೈಲ್ವೆ ಮೇಲ್ಸೆತುವೆ ಮಾರ್ಗಗಳು, ಮಾರ್ಕೆಟ್‌, ಗಂಜ್‌ ಹಾಗೂ ಜಿಲ್ಲಾಧಿ ಕಾರಿ ಕಚೇರಿ, ಕೋರ್ಟ್‌ ಆವರಣ ಸೇರಿ ದಂತೆ ಅನೇಕ ಕಡೆ ಸಾಮಾನ್ಯ ದಿನಗಳಲ್ಲಿ ವಾಹನ ದಟ್ಟಣೆ ಮತ್ತು ಜನದಟ್ಟಣೆ ಕಂಡು ಬರುತ್ತಿತ್ತು.

ಆದರೆ ಪ್ರಮುಖ ರಸ್ತೆಗ ಳು ಮತ್ತು ಸರ್ಕಾರಿ ಕಚೇರಿಗಳ ಎದುರು ಜನರಿಲ್ಲದೆ ಈಗ ಖಾಲಿ ಖಾಲಿ ಕಾಣುತ್ತಿವೆ. ಮಧ್ಯಾಹ್ನ 1.30 ಕ್ಕೆ ಸರ್ಕಾರಿ ಕಚೇರಿಗಳ ಅವಧಿ ಮುಗಿದ ನಂತರದಲ್ಲಿ ಸಂಪೂರ್ಣ ಮೌನ ಆವರಿಸುತ್ತಿದೆ. ರಸ್ತೆ ಅಕ್ಕಪಕ್ಕದಲ್ಲಿ ಹಾಗೂ ಹೋಟೆಲ್‌ಗಳಲ್ಲಿ ನೆರೆಯುವ   ಜನರೆಲ್ಲರೂ ಬಿಸಿಲಿನ ಪರಿಣಾಮವನ್ನೆ ಚರ್ಚಿಸು ತ್ತಿದ್ದಾರೆ.
 
ಬಿಸಿಲಿಗೆ ಆಪೋಶನ: ಕುಡಿದ ನೀರೆ ಲ್ಲವೂ ಬಿಸಿಗಾಳಿಗೆ ಬೇಗನೆ ಆಪೋಶನ ಆಗುತ್ತಿದೆ. ಮೇಲಿಂದ ಮೇಲೆ ಬಾಯಾ ರಿಕೆ ತಣಿಸಲು ನೀರು, ಹಣ್ಣು–ಹಂಪ ಲುಗಳ ಮೊರೆ ಹೋಗುತ್ತಿದ್ದಾರೆ. ಇತರೆಲ್ಲ ವ್ಯಾಪಾರ ಕ್ಕಿಂತಲೂ ನೀರು ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಕಲ್ಲಂಗಡಿ, ತಾಳೆಹಣ್ಣು, ಎಳನೀರು, ಮಜ್ಜಿಗೆ, ಲಸ್ಸಿ, ಮಜ್ಜಿಗೆ ಹಾಗೂ ಶರಬತ್‌ ಮಾರಾಟ ಕೂಡಾ ಜೋರಾಗಿದೆ.
 
ಜಾನುವಾರುಗಳಿಗೆ ಸಂಕಟ: ಮನೆಗಳಲ್ಲಿ ಸಾಕಿದ ಜಾನುವಾರುಗಳಿಗೇ ಸಮರ್ಪಕ ನೀರು ಒದಗಿಸುವುದು ದುಸ್ತರವಾಗಿದೆ. ಬಿಡಾಡಿ ಜಾನುವಾರುಗಳು ನೀರು, ನೆರಳಿಗಾಗಿ ಸಂಕಷ್ಟ ಅನುಭವಿಸುತ್ತಿವೆ.
***
ತೆಳುವಾದ ಹತ್ತಿ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ತಲೆ ಮೇಲೆ ಬಟ್ಟೆ ಹಾಕಿಕೊಳ್ಳಬೇಕು. ಐದು ವರ್ಷದೊಳಗಿನ ಮಕ್ಕಳನ್ನು ತಂಪಿನ ಜಾಗದಲ್ಲಿ ಇರಿಸಬೇಕು
ನಾರಾಯಣಪ್ಪ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.