ADVERTISEMENT

ಕಾಮಗಾರಿ ಜನರಿಗೆ ತೃಪ್ತಿ ಇಲ್ಲಾರಿ

ಹೊಸಪೇಟೆ – ಜೀಗರಕಲ್‌ ರಸ್ತೆ ಹಳ್ಳದ ನೀರು ಹಾಯಲು ಕಾಂಕ್ರಿಟ್‌ ಏರಿ

​ಪ್ರಜಾವಾಣಿ ವಾರ್ತೆ
Published 28 ಮೇ 2015, 7:20 IST
Last Updated 28 ಮೇ 2015, 7:20 IST

ರಾಯಚೂರು:  ಹೊಸಪೇಟೆ ಮತ್ತು ಜೇಗರಕಲ್ ಮಧ್ಯೆ ಒಂದು ಹಳ್ಳ ಹರಿಯುತ್ತದೆ. ಈ ಹಳ್ಳದಲ್ಲಿ ಜಾಲಿಗಿಡ, ಮುಳ್ಳುಗಂಟಿಗಳು ಬೆಳೆದು, ಹೂಳು ತುಂಬಿಕೊಂಡಿದೆ. ಮಳೆಗಾಲದಲ್ಲಿ ಹಳ್ಳತುಂಬಿದಾಗ ನೀರು ಸರಾಗವಾಗಿ ಹರಿಯಲು ಸ್ಥಳ ಇಲ್ಲದೆ ಹಳ್ಳದ ಆಸುಪಾಸಿನ ತಗ್ಗಿಗೆ ನುಗ್ಗಿ ರಸ್ತೆ ದಾಟುತ್ತದೆ. ಆಗ ಆಳೆತ್ತರದ ನೀರು ಇರುವುದರಿಂದ ಜೇಗರಕಲ್ ಮತ್ತು ಇನ್ನಿತರ ಹಳ್ಳಿಗಳಿಗೆ ಸಂಪರ್ಕ ಕಡಿತವಾಗುತ್ತದೆ.

ಇದರಿಂದ ಕಾಲೇಜು ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ತಾಲ್ಲೂಕು ಕೇಂದ್ರಕ್ಕೆ ಬರುವ ರೋಗಿಗಳಿಗೆ ಬಲು ತೊಂದರೆ. ಪ್ರತಿ ವರ್ಷ ಈ ಹಳ್ಳದ ಸೇತುವೆಯ ಪಕ್ಕದಲ್ಲಿನ ತಗ್ಗಿಗೆ ಮಣ್ಣು ತುಂಬಿ ತಾತ್ಕಾಲಿಕ ಏರಿ ಕಟ್ಟುತ್ತಾರೆ. ಮಳೆನೀರಿನ ರಭಸಕ್ಕೆ ಡಂಬಾರು ಕೊಚ್ಚಿ ಹೋಗಿ ಬಹಳ ಕಾಲವೇ ಆಗಿದೆ.

ಈಗ ಬವಣೆಯನ್ನು ಶಾಶ್ವತವಾಗಿ ದೂರ ಮಾಡಲು ಲೋಕೋಪಯೋಗಿ ಇಲಾಖೆ ₹ 78 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್‌ ಏರಿ ನಿರ್ಮಾಣ ಕಾರ್ಯ ಮಾಡುತ್ತಿದೆ. ಈ ಏರಿಗೆ ಎರಡೂ ಬದಿಗಳಲ್ಲಿ ಬೆಡ್ಡಿಂಗ್‌ ಮಾಡಿ ರಸ್ತೆ ಮಾಡುವುದರಿಂದ ರಭಸವಾಗಿ ನೀರು ಹರಿದರೂ ರಸ್ತೆಗೆ ಏನು ಆಗುವುದಿಲ್ಲ ಎಂದು ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್‌ ಶಂಕರಪ್ಪ ಹೇಳುತ್ತಾರೆ.

ಈ ಕಾಮಗಾರಿ ಒಂದು ತಿಂಗಳಿಂದ ನಡೆಯುತ್ತಿದ್ದು, ಮಳೆಗಾಲ ಆರಂಭವಾಗುವಷ್ಟರಲ್ಲಿ ಮುಗಿಯುತ್ತದೆ ಎನ್ನುತ್ತಾರೆ ಶಂಕರಪ್ಪ. ಆದರೆ, ಜೇಗರಕಲ್‌ ಗ್ರಾಮದ ಬಹುತೇಕರು ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ದೂರುತ್ತಾರೆ.

ಅಲ್ಲದೆ, ಈ ಏರಿಯನ್ನು ಇನ್ನೂ ಎತ್ತರಿಸಿ ಕಟ್ಟಬೇಕಿತ್ತು. ಆಗ ಆಳೆತ್ತರ ನೀರು ಹರಿದರೂ ರಸ್ತೆ ಸಂಪರ್ಕ ಕಡಿತವಾಗುತ್ತಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ‘ಗಣೇಕಲ್‌ ಸಮತೋಲನ ಅಣೆಕಟ್ಟೆಯ ಹೆಚ್ಚುವರಿ ಹಿನ್ನೀರು ಈ ಹಳ್ಳದಲ್ಲಿ ಹರಿಯುತ್ತದೆ. ಹಳ್ಳ ಹರಿಯುವ ಪ್ರದೇಶದಲ್ಲಿ ವಿಪರೀತ ಜಾಲಿ ಗಿಡಗಳು ಬೆಳೆದುಕೊಂಡಿವೆ ಮತ್ತು ಹೂಳು ತುಂಬಿದೆ. ಹಾಗಾಗಿ ಈ ನೀರು ತಗ್ಗಿನ ನುಗ್ಗುತ್ತದೆ. ಮೊದಲು ಜಾಲಿಗಿಡಗಳನ್ನು ತೆಗೆಯಿಸಿ, ಹೊಳೆತ್ತಿಸಬೇಕು. ಆಗ ತಗ್ಗಿನ ಕಡೆಗೆ ನೀರು ಬರುವುದಿಲ್ಲ’ ಎಂದರು ಜೇಗರಕಲ್‌ನ ದೇವಪ್ಪ.

‘ಈಗ ಕಟ್ಟುತ್ತಿರುವ ಏರಿ ವೈಜ್ಞಾನಿಕವಾಗಿಲ್ಲ, ಕೆಲಸವೂ ಸರಿಯಲ್ಲ. ಮಳೆನೀರಿನ ರಭಸಕ್ಕೆ ಅದು ಕೊಚ್ಚಿಹೋಗುತ್ತೆ ನೋಡ್ತಿರಿ. ಮತ್ತೆ ಯಥಾಪ್ರಕಾರ ಆಳೆತ್ತರದ ನೀರು ಹರಿದು ಜೇಗರಕಲ್‌, ಮಲ್ಲಿಪೂರ, ಎಂಬರಾಳ, ಹನುಮಾಪೂರ, ಮೀರಾಪೂರ, ತಿಮ್ಮಾಪುರ ಮುಂತಾದ 12 ಹಳಿಗಳಿಗೆ ರಸ್ತೆ ಸಂಪರ್ಕ ತಪ್ಪುತ್ತದೆ’ ಎಂದರು ಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.