ADVERTISEMENT

ಕಾಲಿಲ್ಲದವರಿಗೆ ವರ ಜೈಪುರ ಕಾಲು

ರಾಯಚೂರಿನ ಒಪೆಕ್‌ ಆಸ್ಪತ್ರೆಯಲ್ಲಿ ಕೃತಕ ಕಾಲು ತಯಾರಿಕಾ ಕೇಂದ್ರ ಕಾರ್ಯಾರಂಭ

ಶಶಿಧರ ಗರ್ಗಶ್ವೇರಿ
Published 6 ಜುಲೈ 2015, 6:53 IST
Last Updated 6 ಜುಲೈ 2015, 6:53 IST

ರಾಯಚೂರು: ನಗರದ ಒಪೆಕ್‌ ಆಸ್ಪತ್ರೆಯಲ್ಲಿ ಈಗ ಕೈ– ಕಾಲು ಕಳೆದುಕೊಂಡವರಿಗೆ ಕೃತಕ ಕೈಕಾಲಗಳನ್ನು ಜೋಡಿಸುವ ಭಗವಾನ್‌ ಮಹಾವೀರ ವಿಕಲಾಂಗ ಸಹಾಯತಾ ಸಮಿತಿ (ಜೈಪುರ ಕೃತಕ ಕಾಲು) ಕೇಂದ್ರ ಆರಂಭವಾಗಿರುವುದು ಜಿಲ್ಲೆಯ ಅಂಗವಿಕಲರಲ್ಲಿ ಭರವಸೆಯ ಮಂದಹಾಸ ಮೂಡಿಸಿದೆ.

ಭಗವಾನ್‌ ಮಹಾವೀರ ವಿಕಲಾಂಗ ಸಹಾಯತಾ ಸಮಿತಿಯ ಸಹಯೋಗದಲ್ಲಿ ರಾಯಚೂರಿನ ರಾಜ್‌ಮಲ್‌ ಖೆಮ್ರಾಜ್‌ ಭಂಡಾರಿ ಪ್ರತಿಷ್ಠಾನದ ಮೂಲಕ ಈ ಕೇಂದ್ರಕ್ಕೆ ಚಾಲನೆ ಸಿಕ್ಕಿದೆ. ಇಲ್ಲಿ ಬರೀ ಕೇಂದ್ರ ಮಾತ್ರಲ್ಲ. ಕೃತಕ ಕೈ– ಕಾಲುಗಳನ್ನು ತಯಾರು ಮಾಡುವ ತಯಾರಿಕಾ ಘಟಕವನ್ನು  ₹7.50 ಲಕ್ಷ ವೆಚ್ಚ ಮಾಡಿ ತೆರೆಯಲಾಗಿದೆ.  ಈ ಕೇಂದ್ರಕ್ಕೆ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರು ಕಳೆದ ಏಪ್ರಿಲ್‌ 29ರಂದು ಚಾಲನೆ ನೀಡಿದ್ದಾರೆ.

ಕೈ–ಕಾಲು ಊನವಾದವರಿಗೆ ಕೆಲವು ಸಾರಿ ಸರಿಪಡಿಸುವ (ಕರೆಕ್ಷನಲ್‌) ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಸ್ಥಿತಿವಂತರಾದವರು ಅದನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸುತ್ತಾರೆ. ಆದರೆ ಬಡವರು? ಈ ಪ್ರಶ್ನೆಗೆ ಉತ್ತರವಾಗಿಯೇ ಒಪೆಕ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಕೇಂದ್ರವನ್ನು ತೆರೆಯಲಾಗಿದೆ.

ಕೃತಕ ಕೈ– ಕಾಲು ಜೋಡಣೆಗೆ ಮೊದಲು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ ಇಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ನಂತರ ಜೈಪುರ ಕೃತಕ ಕಾಲು ಜೋಡಣೆ ಮೂಲಕ ಅವರಿಗೆ ನಡೆದಾಡುವಂತಹ ಅವಕಾಶ ಕಲ್ಪಿಸಲಾಗುತ್ತದೆ. ಊರುಗೋಲು ಅವಶ್ಯ ಇದ್ದವರಿಗೆ ಅದನ್ನು ನೀಡಲಾಗುತ್ತದೆ.

‘ಚಿಕಿತ್ಸೆಯ/ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸಬಾರದು’ ಎಂಬ ಧ್ಯೇಯದೊಂದಿಗೆ ರಾಜ್‌ಮಲ್‌ ಖೆಮ್ರಾಜ್‌ ಭಂಡಾರಿ ಪ್ರತಿಷ್ಠಾನ 1994ರಲ್ಲಿ ಆರಂಭವಾಯಿತು. ಆರ್ಥಿಕವಾಗಿ ಹಿಂದುಳಿದವರಿಗೆ ಜೈಪುರ ಕೈ– ಕಾಲುಗಳನ್ನು ಉಚಿತವಾಗಿ ಜೋಡಣೆ ಮಾಡವು ಈ ಪ್ರತಿಷ್ಠಾನ, ಇತರೆ ರೋಗಿಗಳಿಗೆ ಕಡಿಮೆ ದರದಲ್ಲಿ ಈ ಸೌಲಭ್ಯ ನೀಡುತ್ತಿದೆ.

‘ಒಂದು ಕೃತಕ ಕಾಲು ತಯಾರಿಕೆಯು ಅಂಗವೈಕಲ್ಯದ ಪ್ರಮಾಣವನ್ನು ಅನುಸರಿಸಿ ಇರುತ್ತದೆ. ಸಾಮಾನ್ಯವಾಗಿ ₨2,500ರಿಂದ 15 ಸಾವಿರದವರೆಗೂ ತಗಲುತ್ತದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಸೌಭಾಗ್ಯ ರಾಜ್‌ ಭಂಡಾರಿ ಹೇಳಿದರು. ‘ಒಪೆಕ್‌ ಆಸ್ಪತ್ರೆಯಲ್ಲಿ ಇಬ್ಬರು ತಂತ್ರಜ್ಞರು ಮತ್ತು ಒಬ್ಬರು ಆಡಳಿತಾಧಿಕಾರಿ ಕಾರ್ಯನಿರ್ವಹಿಸುತ್ತಾರೆ. ಅಗತ್ಯವಿದ್ದಾಗ ನಮ್ಮ ಪ್ರತಿಷ್ಠಾನದ ವೈದ್ಯರು ಭೇಟಿ ನೀಡಿ ಸಲಹೆ– ಸೂಚನೆ ನೀಡುತ್ತಾರೆ. ಇಲ್ಲದಿದ್ದರೆ ಒಪೆಕ್‌ ಆಸ್ಪತ್ರೆಯ ವೈದ್ಯರು ಆ ಕೆಲಸ ಮಾಡುತ್ತಾರೆ’ ಎಂದರು.

‘ಬಡವರು ಉಚಿತ ಸೌಲಭ್ಯ ಪಡೆಯಬೇಕಾದರೆ ಆಧಾರ್‌, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತರಬೇಕು ಜೊತೆಗೆ ನಾಲ್ಕು ಭಾವಚಿತ್ರಗಳನ್ನು ತರಬೇಕು’ ಎಂದು ಹೇಳಿದರು. ಕಳೆದ ಬುಧವಾರ ಈ ಪ್ರತಿಷ್ಠಾನ ವತಿಯಿಂದ ಕೃತಕ ಕಾಲು ಜೋಡಣೆಯ ಮೊದಲ ಶಿಬಿರ ಒಪೆಕ್‌ ಆಸ್ಪತ್ರೆಯಲ್ಲಿ ನಡೆಯಿತು. 75 ಅಂಗವಿಕಲರಿಗೆ ಕಾಲುಗಳನ್ನು ವಿತರಿಸಲಾಯಿತು.

ಸಿಂಧನೂರು ಬಂದ ಗೋಪಾಕ ಕೃಷ್ಣ ಅವರಿಗೆ ಅತಿ ಮಧುಮೇಹದ ಕಾರಣ ಎರಡೂ ಕಾಲುಗಳನ್ನು ಕತ್ತರಿಸಲಾಗಿದೆ. ‘ಪತ್ರಿಕೆ ಮೂಲಕ ಇಲ್ಲಿ ಕಟ್ಟಿಗೆ ಕಾಲು ಕೊಡುತ್ತಾರೆ ಅಂತ ತಿಳಿಯಿತು ಬಂದೆ’ ಎಂದರು ಗೋಪಾಲ ಕೃಷ್ಣ. ಗಟ್ಟು ಬಿಚ್ಚಾಲಿ ಗ್ರಾಮದಿಂದ ಬಂದ ಈರಣ್ಣ ಅವರಿಗೆ ಹುಟ್ಟಿನಿಂದಲೇ ಎಡಗಾಲುು ಇಲ್ಲ. ಅವರೂ ಸಹ ಇಲ್ಲಿ ಕೃತಕ ಕಾಲನ್ನು ಹಾಕಿಸಿಕೊಳ್ಳಲು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.