ADVERTISEMENT

ಕೃಷಿ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ

ಕೃಷಿ ಇಲಾಖೆಯ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಪರಿಗಣಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:38 IST
Last Updated 16 ಫೆಬ್ರುವರಿ 2017, 6:38 IST
ರಾಯಚೂರು: ಕೃಷಿ ಇಲಾಖೆಯ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕೃಷಿ ತಾಂತ್ರಿಕ ಶಿಕ್ಷಣ (ಎಂಜಿನಿಯರಿಂಗ್‌) ಪದವೀಧರರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಂಘವು ಮಂಗಳವಾರ ಪ್ರತಿಭಟನೆ ನಡೆಸಿತು.
 
ವಿಶ್ವವಿದ್ಯಾಲಯದ ಪ್ರವೇಶ್ವದಾರದಲ್ಲಿ ಧರಣಿ ನಡೆಸಿದ ವಿದ್ಯಾರ್ಥಿಗಳು ಈ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
 
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡ ಮಲ್ಲಿಕಾರ್ಜುನ್‌, 2000, 2013, 2014ರ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕೃಷಿ ಎಂಜಿನಿಯರಿಂಗ್‌ ಪದವಿಯನ್ನು ವಿದ್ಯಾರ್ಹತೆ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ, 2016ರ ನವೆಂಬರ್‌, ಮತ್ತೆ ಡಿ. 8 ಹೊರಡಿಸಿರುವ ರಾಜ್ಯಪತ್ರದಲ್ಲಿ  ಕೃಷಿ ತಾಂತ್ರಿಕ ಶಿಕ್ಷಣ ಪದವೀಧರರನ್ನು ಕೈಬಿಡಲಾಗಿದೆ. 2017ರ ಫೆ. 9ರಂದು  ಕೃಷಿ ಇಲಾಖೆಯ ಹುದ್ದೆಗಳ ನೇಮಕಾತಿಯ ಅಧಿಸೂಚನೆಯಲ್ಲೂ ತಾಂತ್ರಿಕ ಪದವಿಯ ಅರ್ಹತೆಯನ್ನು ಸೇರಿಸಿಲ್ಲ ಎಂದು ದೂರಿದರು.
 
2011ರಲ್ಲಿ 25 ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿಯಲ್ಲಿ ಕೃಷಿ ತಾಂತ್ರಿಕ ಶಿಕ್ಷಣ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗಿದೆ ಮತ್ತು 2012ರಲ್ಲಿ 11 ಕೃಷಿ ಎಂಜಿನಿಯರ್‌ಗಳ ನೇಮಕಾತಿ ನಡೆದಿದೆ. ಈಗ ಏಕೆ ಕಡೆಗಣಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. 
 
ಕೃಷಿ ತಾಂತ್ರಿಕ ಶಿಕ್ಷಣ ಪದವೀಧರರನ್ನು ಕೃಷಿ ಇಲಾಖೆಯ ಅಧಿಕಾರಿಗಳ ಹುದ್ದೆಗೆ ಪರಿಗಣಿಸಬೇಕು ಎಂಬ ಮನವಿಗೆ  ಕೃಷಿ ಸಚಿವರು ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
 
ಕೃಷಿ ತಾಂತ್ರಿಕ ಪದವೀಧರರಿಗೆ ಆಗುತ್ತಿರುವ ಈ ಅನ್ಯಾಯವನ್ನು ಖಂಡಿಸಿ ರಾಜಸ್ತಾನದಲ್ಲಿ ನಡೆಯುವ ಯೂಥ್‌ ಫೆಸ್ಟಿವಲ್‌ನಲ್ಲಿ ರಾಯಚೂರು ಕೃಷಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸುತ್ತಿಲ್ಲ ಎಂದರು.
 
ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಪಂಜಾಬ್‌, ಪಶ್ಚಿಮ ಬಂಗಾಳಗಳಲ್ಲಿ ಕೃಷಿ ಎಂಜಿನಿಯರಿಂಗ್ ಇಲಾಖೆ ಇದೆ. ಅದೇ ರೀತಿ ರಾಜ್ಯದಲ್ಲೂ ಪ್ರತ್ಯೇಕವಾದ ಕೃಷಿ ಎಂಜಿನಿಯರಿಂಗ್‌ ಇಲಾಖೆಯನ್ನ ರಚಿಸಿ ಕೃಷಿ ತಾಂತ್ರಿಕತೆಗೆ ಸಂಬಂಧಪಟ್ಟ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಈ ಇಲಾಖೆಗೆ ಕೃಷಿ ತಾಂತ್ರಿಕ ಶಿಕ್ಷಣ ಪದವೀಧರರನ್ನೆ ನೇಮಿಸಬೇಕು ಎಂದು ಮನವಿ ಮಾಡಿದರು.
 
ಪ್ರತಿಭಟನೆಯಲ್ಲಿ  ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಯೋಗೀಶ, ಮಡಿವಾಳಪ್ಪ, ಮಹಾದೇವಿ, ಶ್ರೀಕಾಂತ, ಮಲ್ಲಿಕಾ, ಅಭಿಷೇಕ, ಸಂಕೇತ್‌, ತಿಪ್ಪೆರುದ್ರಮ್ಮ, ದತ್ತಾತ್ರೇಯ, ಕೃಷ್ಣ , ವಿದ್ಯಾ, ಸಂಗ್ರಾಮ ಪಾಟೀಲ್‌, ಸೌಮ್ಯ, ವಿಜಯಕುಮಾರ್‌, ಪ್ರೇಮಾ, ನೀರಜಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
 
* ಸಹಾಯಕ ಕೃಷಿ ಅಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಶೇ 40ರಷ್ಟು ಹುದ್ದೆಗಳನ್ನು ಕೃಷಿ ತಾಂತ್ರಿಕ ಪದವೀಧರರಿಗೆ ಮೀಸಲು ಇರಿಸಬೇಕು
- ಮಲ್ಲಿಕಾ, ಕೃಷಿ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.