ADVERTISEMENT

ಕೆಲಸ ನಿರ್ವಹಿಸದವರ ವಿರುದ್ಧ ಕ್ರಮ

ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 7:37 IST
Last Updated 11 ಜುಲೈ 2017, 7:37 IST
ಕೆಲಸ ನಿರ್ವಹಿಸದವರ ವಿರುದ್ಧ ಕ್ರಮ
ಕೆಲಸ ನಿರ್ವಹಿಸದವರ ವಿರುದ್ಧ ಕ್ರಮ   

ರಾಯಚೂರು: ‘ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೊಳಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದುದನ್ನು ಸೂಚ್ಯವಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲೆಯ ವಿವಿಧ ಇಲಾಖೆಯಿಂದ ಜಾರಿಯಾಗುವ ಯೋಜನೆಗಳ ಮಾಹಿತಿ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬಡವರಿಗಾಗಿ ಸರ್ಕಾರವು ರೂಪಿಸಿದ ಕಾರ್ಯಕ್ರಮಗಳು ಜಾರಿಯಾಗಬೇಕು. ಇದಕ್ಕಾಗಿ ಲೋಕಾಯುಕ್ತ ಅಧಿಕಾರ ಉಪಯೋಗಿಸಿ ಯೋಜನೆಗಳನ್ನು ಜಾರಿಮಾಡುವ ಉದ್ದೇಶ ನನ್ನದು. ಯೋಜನೆಗಳು ಜನರಿಗೆ ತಲುಪುವುದು ಮುಖ್ಯ. ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ತಪ್ಪು ಮಾಡಿದರೆ ಸುಪ್ರೀಂಕೋರ್ಟ್‌ಗೆ ದೂರು ನೀಡುವ ಅಧಿಕಾರ ಕೂಡಾ ಲೋಕಾಯುಕ್ತರಿಗೆ ಇದೆ’ ಎಂದು ತಿಳಿಸಿದರು.

ADVERTISEMENT

‘ಭ್ರಷ್ಟಾಚಾರದ ದೂರು ಸರಿಯಾಗಿದೆ ಎಂದು ನಮಗೆ ವಿಶ್ವಾಸ ಮೂಡಿದರೆ ಆ ಕುರಿತು ಯಾವ ಅಧಿಕಾರಿಯಿಂದ ಬೇಕಾದರೂ ತನಿಖೆ ಮಾಡಿಸಬಹುದಾಗಿದೆ. ಭ್ರಷ್ಟಾಚಾರ ನಿಗ್ರಹ ದಳ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಥವಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ತನಿಖೆ ನಡೆಸಿ ವರದಿ ಕಳುಹಿಸುವಂತೆ ಕೇಳಬಹುದಾಗಿದೆ’ ಎಂದು ಹೇಳಿದರು.

‘ಲೋಕಾಯುಕ್ತದಲ್ಲಿ ಬೇಕಾದಷ್ಟು ಕೆಲಸವಿದೆ. ಕೆಲಸ ಮಾಡದವರಿಗೆ ಏನೂ ಇರುವುದಿಲ್ಲ. ನಾನು ಕೆಲಸ ಮಾಡುವ ಮನೋಭಾವದವನು. ತನಿಖೆಗಾಗಿ ಸರ್ಕಾರಕ್ಕೆ ಕಳುಹಿಸಿದ್ದ ಎಲ್ಲ ವರದಿಗಳು ನಿಗದಿತ ಸಮಯದಲ್ಲಿ ಮರಳಿ ಬರುತ್ತಿವೆ. ದಾಳಿ ನಡೆಸುವುದರಲ್ಲಿ ಒಳ್ಳೆಯ ಹಾಗೂ ಕೆಟ್ಟದ್ದು ಎರಡೂ ರೀತಿಯ ಪರಿಣಾಮಗಳಿವೆ. ಯಾರದೊ ಮೂಲಕ ಯಾರ ಮೇಲೆಯೂ ದಾಳಿ ನಡೆಸುವುದು ಸರಿಯಾಗುವುದಿಲ್ಲ’ ಎಂದು ಹೇಳಿದರು.

‘ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ದಾಳಿ ನಡೆಸುವ ಅಧಿಕಾರವನ್ನು ಲೋಕಾಯುಕ್ತದಿಂದ ತೆಗೆದುಹಾಕಲಾಗಿದೆ. ಆದರೆ ಭ್ರಷ್ಟಾಚಾರದ ದೂರಿನ ಬಗ್ಗೆ ಸ್ಪಷ್ಟತೆಯಿದ್ದರೆ ಆ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಎಸಿಬಿಗೆ ವಹಿಸುವ ಅಧಿಕಾರ ಇದೆ. ಭ್ರಷ್ಟಾಚಾರ ದೂರಿನ ಬಗ್ಗೆ ಸ್ಪಷ್ಟತೆ ಅಥವಾ ಗೊಂದಲವಿದ್ದರೆ ಅವುಗಳನ್ನು ಎಸಿಬಿಗೆ ವಹಿಸುತ್ತೇವೆ’ ಎಂದು ಹೇಳಿದರು.

‘ದೂರುಗಳ ಬಗ್ಗೆ ವಿಮರ್ಶೆ ಮಾಡದೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಸರ್ಕಾರದಲ್ಲಿ ಅಧಿಕಾರಿಗಳು ಮುಖ್ಯ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೋಡಬೇಕಾಗಿರುವುದು ಲೋಕಾಯುಕ್ತರ ಜವಾಬ್ದಾರಿ. ಒಳ್ಳೆಯ ಅಧಿಕಾರಿಯನ್ನು ರಕ್ಷಿಸಬೇಕಾಗುತ್ತದೆ ಹಾಗೂ ಸರಿಯಾಗಿ ಕೆಲಸ ಮಾಡದ ಅಧಿಕಾರಿಯನ್ನು ಶಿಕ್ಷೆಗೆ ಗುರಿ ಮಾಡಬೇಕಾಗುತ್ತದೆ. ಶಿಸ್ತು ಕ್ರಮ ಕೈಗೊಂಡು ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕುವ ಅಧಿಕಾರ ಲೋಕಾಯುಕ್ತರಿಗೆ ಇನ್ನೂ ಇದೆ’ ಎಂದು ತಿಳಿಸಿದರು.

‘ಎಸಿಬಿ ಅಗತ್ಯ ಇದೆಯೋ ಇಲ್ಲವೋ ಎನ್ನುವ ವಿಷಯ ನ್ಯಾಯಾಲಯದಲ್ಲಿ ಇದೆ. ಲೋಕಾಯುಕ್ತರಿಗೆ ಹೆಚ್ಚು ಅಧಿಕಾರ ಇರುವುದು ಒಳ್ಳೆಯದು. ಆದರೆ ಲೋಕಾಯುಕ್ತ ಸ್ಥಾನಕ್ಕೆ ಎಷ್ಟು ಅಧಿಕಾರ ಇದೆ ಎಂಬುದನ್ನು ಮೊದಲೇ ತಿಳಿದುಕೊಂಡು ಜವಾಬ್ದಾರಿ ವಹಿಸಿಕೊಂಡಿದ್ದೇನೆ.

ಹೀಗಾಗಿ ಇಲ್ಲದೆ ಇರುವ ಅಧಿಕಾರ ಕೊಡಿ ಎಂದು ಕೇಳಿವುದಕ್ಕೆ ನನ್ನಿಂದ ಆಗುವುದಿಲ್ಲ. ಇದ್ದ ಸ್ಥಾನದಲ್ಲೆ ಸಮರ್ಥವಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಈ ಸ್ಥಾನದಲ್ಲಿದ್ದೇನೆ’ ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್‌ ಇದ್ದರು.

***

ವಹಿಸಿದ ಕೆಲಸವನ್ನು ಸರಿಯಾಗಿ ಮಾಡದ ಅಧಿಕಾರಿಗಳ ವಿರುದ್ಧ ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಅಧಿಕಾರವನ್ನು ಲೋಕಾಯುಕ್ತರಿಗೆ ಸರ್ಕಾರವು ನೀಡಿದೆ
ನ್ಯಾ. ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.