ADVERTISEMENT

ಗೊಂಡ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 11:31 IST
Last Updated 14 ಜನವರಿ 2017, 11:31 IST
ಜಾಲಹಳ್ಳಿ: ಗೊಂಡ ಹಾಗೂ ರಾಜಗೊಂಡ  ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕೆಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.
 
 ವೀರಗೋಟ ಗ್ರಾಮದ ಕನಕಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವದ  ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ಅಖಿಲ ಭಾರತೀಯ ಗೊಂಡ ಮಹಾಸಭಾದ 11ನೇ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
 
 ರಾಜ್ಯ ಸರ್ಕಾರ ಗೊಂಡ ಹಾಗೂ ರಾಜಗೊಂಡ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಸೂಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ವಿಳಂಬಕ್ಕೆ ರಾಷ್ಟ್ರ ಮಟ್ಟದಲ್ಲಿ ಹಾಲುಮತ ಸಮಾಜ ಸಂಘಟಿತರಾಗಿ ಹೋರಾಟ ನಡೆಸಲು ಸಿದ್ದ ಎಂದು ಹೇಳಿದರು. 
 
 ಅಹಿಂದ ಹೆಸರಲ್ಲಿ  3 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳು ಹೇಳಿಕೊಳ್ಳವಂತಹ ಯಾವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನೆಸಿದರು.  ಜನಸಂಖ್ಯೆ ಅದರಲ್ಲಿ ಮೀಸಲಾತಿ ಜಾರಿಗೆ ತರಲು ತಮ್ಮ ಬೆಂಬಲವಿದೆ ಎಂದರು.
 
 ತಮ್ಮ ಕೊನೆಯ ಉಸಿರು ಇರುವವರೆಗೆ ಬಿಜೆಪಿಯಲ್ಲಿಯೇ ಇರುವುದಾಗಿ ಹೇಳಿದ ಅವರು, ಚುನಾವಣೆಯಲ್ಲಿ ಬಿ.ಪಾರಂ ಪಡೆಯಲು ಕಾಲಿಗೆ ಬೀಳುವುದನ್ನು ಬಿಟ್ಟು, ನಾವು ಹಂಚಿಕೆ ಮಾಡುವ ಶಕ್ತಿ ಪಡೆದುಕೊಳ್ಳಬೇಕು. ರಾಜ್ಯದ 35 ಸ್ವಾಮಿಗಳ ಬೆಂಬಲ ತಮ್ಮಗೆ ಇದೆ. ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಠಗಳಿಗೆ ₹10 ಸಾವಿರ ಕೋಟಿ  ಅನುದಾನ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.    
 
ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕೆ.ಆರ್‌ ನಗರದ ಕನಕಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಕೆಲ್ಲೋಡದ ಕನಕಗುರು ಪೀಠದ ಈಶ್ವರನಂದಪುರಿ ಸ್ವಾಮೀಜಿ, ಬಾಗಲಕೋಟೆಯ ಸಿದ್ದರಾಮೇಶ್ವರ ಗುರುಪೀಠದ ಇಮ್ಮಡಿ ಸಿದ್ದರಾಮ ಸ್ವಾಮಿಜೀ, ವೀರಗೋಟ ಕನಕಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 
 
ಗೊಂಡ ಸಮಾಜ ರಾಷ್ಟ್ರೀಯ ಮಹಾಸಭಾ ಅಧ್ಯಕ್ಷ ಶಿಶುಪಾಲ್‌,  ಪೌರಡಳಿತ ಸಚಿವ ಈಶ್ವರ ಖಂಡ್ರೆ, ಛತ್ತೀಸ್‌ಗಡ ರಾಜ್ಯ ಮಾಜಿ ಸಂಸದ ಸೋಹನ್‌ ಪೊಟಾಯಿ, ಮಹಾರಾಷ್ಟ್ರದ ರಾಜ್ಯ ಸಂಸದ ಡಾ. ವಿಕಾಸ ಮಹಾತ್ಮೆ, ಬಂಡೆಪ್ಪ ಖಾಶೆಂಪುರ, ಶಾಸಕರಾದ ಕೆ.ಶಿವನಗೌಡ ನಾಯಕ, ಮನಪ್ಪ ವಜ್ಜಲ, ದೊಡ್ಡನಗೌಡ ಪಾಟೀಲ್‌, ರಾಜುಗೌಡ, ಅಮರೇಗೌಡ ಬಯ್ಯಪುರ,  ಮಾಜಿ ಸಂಸದ ವಿರೂಪಾಕ್ಷಪ್ಪ, ಇದ್ದರು. ಅಮೃತರಾವ್‌ ಚಿಮ್ಮಕೋಡೆ ಕಾರ್ಯಕ್ರಮ ನಿರ್ವಹಿಸಿದರು.  
 
ರಾಜುಗೌಡ: ಹಾಲುಮತ ಸಮಾಜ ಜನಾಂಗ ರಾಜ್ಯದಲ್ಲಿ ಸದೃಢ ಹಾಗೂ ಶಕ್ತಿ ಶಾಲಿಯಾಗಿ ಬೆಳೆದಿದೆ, ರಾಜ್ಯದ ಆಡಳಿತ ನಡೆಸುವ ಹಾಗೂ ವಿರೋಧ ಪಕ್ಷದಲ್ಲಿ ಇದ್ದು, ಇನ್ನೂ ಶಿಕ್ಷಣಕ್ಕೆ ನೀಡುತ್ತಿರುವ ಆಧ್ಯತೆಯಂತೆ ಕುರಿ ಸಾಕಣೆಯಲ್ಲಿ ತೊಡಗಿ ಆರ್ಥಿಕವಾಗಿ ಬೆಳೆಯಬೇಕು, ಪರಿಶಿಷ್ಟ ಪಂಗಡ ಮೀಸಲಾತಿ ಪಡೆಯಲು ಯಾವುದೇ ವಿರೋಧ ಇಲ್ಲವಾದರೂ ಈಗಿರುವ ಶೇ 3 ರಷ್ಟು ಮೀಸಲಾತಿಯಲ್ಲಿ ಸೇರಿಸುವದರಿಂದ ಕಚ್ಚಾಡಬೇಕಾಗುತ್ತದೆ ಮೊದಲು ಪರಿಶಿಷ್ಟ ಪಂಗಡಕ್ಕೆ ಶೇ 7.5 ನೀಡಿ ಮೀಸಲಾತಿ ಪಡೆಯಲು ಮುಂದಾದರೆ ಒಳಿತು ಎಂದರು.
 
ಬಂಡೆಪ್ಪ ಕಾಶೆಂಪುರ: ಮೀಸಲಾತಿ ಪಡೆಯುವುದು ಸಂವಿಧಾನದ ಹಕ್ಕು, ರಾಜ್ಯದಲ್ಲಿ ಎಲ್ಲ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ಗೊಂಡಾ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶ ನೀಡಲಿ, ನಾವು ಯಾರ ಮೀಸಲಾತಿಯನ್ನು ಕಸಿದುಕೊಳ್ಳುತ್ತಿಲ್ಲ, ಹಿರಿಯರ ಕಾಯಕವನ್ನು ಮರೆತು ನಾವು ಆಧುನಿಕ ಬದುಕನ್ನು ನಡೆಸುತ್ತಿದ್ದೇವೆ, ಕುರಿ ಸಾಕಾಣೆಯಲ್ಲಿ ಅಪಾರ ಲಾಭ ವಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.