ADVERTISEMENT

ಜಾಲಹಳ್ಳಿ: ಜಾನುವಾರು ಮಾರಾಟ ಕುಂಠಿತ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:27 IST
Last Updated 15 ಏಪ್ರಿಲ್ 2017, 9:27 IST

 ಜಾಲಹಳ್ಳಿ:  ಪಟ್ಟಣದಲ್ಲಿ ಏ.11ರಿಂದ ಪ್ರಾರಂಭವಾಗಿರುವ ರಂಗನಾಥ ಸ್ವಾಮಿ ಜಾತ್ರೆಯಲ್ಲಿ  ಕೃಷಿಕರು ತಮ್ಮಲ್ಲಿರುವ ದನಗಳನ್ನು ಮಾರಾಟ ಮಾಡಿ ಹೊಸ ಜಾನುವಾರುಗಳನ್ನು ಖರೀಸಬೇಕು ಎಂದು ಜಾತ್ರೆಯಲ್ಲಿ ತಂದರು ಸಹ ಮಾರಾಟ ನಿರೀಕ್ಷೆಯ ಮಟ್ಟದಲ್ಲಿ ಇಲ್ಲ ಎಂದು ರೈತರು ಮಾತನಾಡಿಕೊಳ್ಳುತ್ತಿರುವುದು ಶುಕ್ರವಾರ ಕಂಡು ಬಂತು.

‘ಜಾತ್ರೆಯಲ್ಲಿ ಜಾರುವಾರುಗಳನ್ನು ಕೊಂಡು ಕೊಳ್ಳುವುದಕ್ಕಿಂತ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.   ಮೇವಿನ ಸಮಸ್ಯೆಯಾಗಿದೆ. ಕೃಷಿಯನ್ನು ನಂಬಿ ಒಂದು ಜೊತೆ ಎತ್ತುಗಳನ್ನು ಸಾಕಿದರೆ, ಸುಮಾರು ₹50 ಸಾವಿರ ಬೆಲೆಯ ಮೇವು ಖರೀಸಬೇಕಾಗಿದೆ’ ಎಂದು ರೈತ ಅಂಜಳ ಗ್ರಾಮದ ರೈತ ಶಿವುಕುಮಾರ ಹೇಳುತ್ತಾರೆ.

ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿದ್ದು, ಕೃಷಿಗೆ ಮಾಡಿದ ಖರ್ಚು ಮರಳಿ ಬರುತ್ತಿಲ್ಲ. ಇದರಿಂದ ಎತ್ತುಗಳನ್ನು ಮಾರಾಟ ಮಾಡಿ  ಜೀವನ ಸಾಗಿಸಲು ನಗರಗಳಿಗೆ ಹೋಗಬೇಕೆಂದು ತಮ್ಮಲ್ಲಿರುವ ಜಾನುವಾರುಗಳನ್ನು ಮಾರಾಟಕ್ಕೆ ತಂದಿರುವದಾಗಿ  ರೈತರು ತಿಳಿಸಿದರು.  ಜಾನುವಾರುಗಳನ್ನು ಉಪವಾಸ ಕಟ್ಟುವುದಕ್ಕಿಂತ ಒಕ್ಕಲುತನ ಮಾಡುವುದನ್ನು ಕೈಬೀಡುವುದೇ ಲೇಸು ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ ಎನ್ನುತ್ತಾರೆ  ರೈತ ನಾಗಪ್ಪ.

ADVERTISEMENT

ಅನ್ನದಾಸೋಹ: ರಂಗನಾಥ ಸ್ವಾಮಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ಜಾತ್ರೆಯ ಅಂಗವಾಗಿ 5 ದಿನಅನ್ನದಾಸೋಹ ನಡೆಯುತ್ತೆ, ಗುರುವಾರ ದಿಂದ ಪ್ರಾರಂಭಗೊಂಡ ದಾಸೋಹ  ಸೋಮವಾರದ ವರೆಗೆ ನಡೆಯುತ್ತದೆ ಎಂದು ಸಮಿತಿ ಮುಖಂಡ ದುರಗಪ್ಪ ಪೂಜಾರಿ ತಿಳಿಸಿದರು. 

ಕಳೆದ ವರ್ಷಕ್ಕಿಂತ ಈ ವರ್ಷದ ಜಾತ್ರೆಗೆ ಅತಿ ಕಡಿಮೆ ಸಂಖ್ಯೆಯಲ್ಲಿ ಜಾನುವಾರುಗಳು ಬಂದಿದ್ದು, ₹20ರಿಂದ 50 ಸಾವಿರದ ಒಳಗೆ ದನಗಳು ಮಾರಾಟವಾಗುತ್ತಿವೆ. ಪಟ್ಟಣದಲ್ಲಿ ಸೋಮವಾರ ನಡೆಯುವ ವಾರದ ಸಂತೆಯ ನಂತರ ಜಾನುವಾರುಗಳ ಜಾತ್ರೆಯು ಕೂಡ ಮುಗಿಯುವ ಸಾಧ್ಯತೆ ಇದೆ. 
ಸಂಚಾರಕ್ಕೆ ತೊಂದರೆ:   ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ರೈತರು ಎತ್ತು, ದನಗಳನ್ನು ಕಟ್ಟುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸಂಚಾರ ಪೊಲೀಸ್‌ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು  ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.