ADVERTISEMENT

ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂಭ್ರಮ

ರಾಯಚೂರು: ಚುರುಗುಟ್ಟುವ ಬಿಸಿಲಿನಲ್ಲೂ ರಂಗೇರಿದ ಓಕುಳಿಯಾಟ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2016, 7:14 IST
Last Updated 25 ಮಾರ್ಚ್ 2016, 7:14 IST
ರಾಯಚೂರಿನ ಉಪ್ಪರವಾಡಿಯಲ್ಲಿ ಬುಧವಾರ ರಾತ್ರಿ ನಡೆದ ಕಾಮದಹನದ ಸಂದರ್ಭದಲ್ಲಿ ಗುಂಪು ನರ್ತನಗಳು ನಡೆದವು.
ರಾಯಚೂರಿನ ಉಪ್ಪರವಾಡಿಯಲ್ಲಿ ಬುಧವಾರ ರಾತ್ರಿ ನಡೆದ ಕಾಮದಹನದ ಸಂದರ್ಭದಲ್ಲಿ ಗುಂಪು ನರ್ತನಗಳು ನಡೆದವು.   

ರಾಯಚೂರು: ಚುರುಗುಟ್ಟುವ ಬಿಸಿಲಿನಲ್ಲೂ ಜಿಲ್ಲೆಯ ವಿವಿಧೆಡೆ ಗುರುವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಯಚೂರು ಪಟ್ಟಣದಲ್ಲಿ ಬುಧವಾರ ಸಂಜೆಯಿಂದಲೇ ಬೀದಿಗಳಲ್ಲಿ ಓಕುಳಿಯಾಟ ಆರಂಭವಾಗಿತ್ತು. ನಗರದ ವಿವಿಧೆಡೆ ಕಾಮದಹನಗಳು ಮಧ್ಯರಾತ್ರಿ ಹೊತ್ತಿಗೆ ನಡೆಯಿತು. ಈ ಸಂದರ್ಭದಲ್ಲಿ ಡಮ್ಸ್‌, ತಮಟೆಗಳ ಮೇಳದಲ್ಲಿ ನರ್ತನಗಳು ನಡೆದವು.

ಗುರುವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಓಕುಳಿಯಾಟ ರಂಗು ಏರಿತು. ಓಣಿಗಳು, ಬಡಾವಣೆಗಳಲ್ಲಿ ಹಬ್ಬದ ರಂಗು ಹಬ್ಬಿತ್ತು. ಮಕ್ಕಳು, ಮಹಿಳೆಯರು ಪಿಚ್ಕಾರಿಯಲ್ಲಿ ಓಕುಳಿಯಾಟ ಆಡಿದರು. ಮಹಿಳೆಯರು ಗುಂಪುಗೂಡಿ ನರ್ತಿಸಿ ಸಂಭ್ರಮಿಸಿದರು.

ಜನರು ಗುಂಪು ಗುಂಪಾಗಿ ತೆರಳಿ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಬಣ್ಣ ಹಚ್ಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಯುವಕರು ಬೈಕ್‌ಗಳಲ್ಲಿ ಬಣ್ಣ ಮಿಶ್ರಿತ ನೀರಿನ ಬಾಟಲ್, ಸಿಲ್ವರ್‌ ಕಲರ್‌ನ ಚಿಕ್ಕ ಡಬ್ಬಿಗಳನ್ನು ತೆಗೆದುಕೊಂಡು ಕೇಕೆ ಹಾಕುತ್ತ ಓಡಾಡುತ್ತಿದ್ದರು. ಮನೆಯಿಂದ ಹೊರಗೆ ಬಾರದ ಸ್ನೇಹಿತರನ್ನು ಹುಡುಕಿ, ಹೊರೆಗೆ ಎಳೆದು ಬಣ್ಣ ಹಾಕಿದರು.

ವಿವಿಧ ಶಾಲಾ– ಕಾಲೇಜುಗಳ ಬಳಿ ಹೋಳಿ ಸಂಭ್ರಮ ಇತರೆಡೆಗಳಿಗಿಂತ ತುಸು ಹೆಚ್ಚೇ ಇತ್ತು.  ಹೋಳಿ ಹಬ್ಬದ ಪ್ರಯುಕ್ತ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು ರಜೆ ಘೋಷಿಸಿದ್ದವು. ಇದರಿಂದ ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿತ್ತು.

ಜವಾಹರನಗರ, ಸರಾಫ ಬಜಾರ್ ಮುಂತಾದ ಕಡೆಗಳಲ್ಲಿ ನೀರು ತುಂಬಿದ್ದ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಯುವಕರು ಪಾಲ್ಗೊಂಡು ಓಕುಳಿಗೆ ಮತ್ತಷ್ಟು ರಂಗು ನೀಡಿತು. ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಯ ನಂತರ ಓಕುಳಿಯಾಡಿ ಸುಸ್ತಾದ ಯುವ ಪಡೆ ಮನೆ ಸೇರುತ್ತಿದ್ದುದು ಕಂಡು ಬಂತು.

ಉಪ್ಪರವಾಡಿಯಲ್ಲಿ ಹೋಲಿ ಸಡಗರ: ಬೇಸ್ತವಾರಪೇಟೆಯ ಉಪ್ಪರವಾಡಿಯಲ್ಲಿ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಜಿಲ್ಲಾ ಉಪ್ಪಾರ ಸಮಾಜ, ಉಪ್ಪರವಾಡಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿ, ಉಪ್ಪಾರ ಸಮಾಜದ ಮಹಿಳಾ ಮತ್ತು ಯುವಕ ಸಂಘಗಳು ಹಾಗೂ ಬಡಾವಣೆ ನಿವಾಸಿಗಳು ಸೇರಿಕೊಂಡು ಬಣ್ಣದ ಹಬ್ಬಕ್ಕೆ ಸಂಭ್ರಮದ ಮೆರುಗು ತಂದರು.

ಬುಧವಾರ ರಾತ್ರಿ ಕಾಮ ದಹನ ನಿಮಿತ್ತ ಬಡಾವಣೆಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಭಜನೆ ಕಾರ್ಯಕ್ರಮ ಜರುಗಿತು.ನಂತರ ಕಾಮ ದಹನ ಮಾಡಲಾಯಿತು. ಗುರುವಾರ ಬೆಳಿಗ್ಗೆ ರಂಗಿನಾಟದಲ್ಲಿ ಮಹಿಳೆಯರು, ಮಕ್ಕಳು ಮಿಂದೆದ್ದರು. ಬಳಿಕ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಬಣ್ಣದ ನೀರು ತುಂಬಿದ ಗಡಿಗೆ ಒಡೆಯುವ ಸ್ಪರ್ಧೆ ನಡೆಯಿತು.

ಗಡಿಗೆ ಒಡೆಯಲು ಉತ್ಸಾಹ ಹಿಂದೂ ಜಾಗರಣ ವೇದಿಕೆ ವತಿಯಿಂದ ನಗರದ ರಾಮಲಿಂಗಶ್ವೇರ ದೇವಾಸ್ಥಾನ ಮೈದಾನದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.