ADVERTISEMENT

ತಡೆಗೋಡೆಯಾದ ಉಸುಕಿನ ಚೀಲ: ನೀರಿನ ಹರಿವಿಲ್ಲ

ಆರ್‌ಟಿಪಿಎಸ್‌: ನೀರಿನ ಕೊರತೆ ನೀಗಿಸಲು ಅಧಿಕಾರಿಗಳ ಹರಸಾಹಸ-– ರಾಜುಮುಡಿ ನೇತೃತ್ವದಲ್ಲಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 7:08 IST
Last Updated 13 ಫೆಬ್ರುವರಿ 2016, 7:08 IST

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ಆರ್‌ಟಿಪಿಎಸ್‌) ನೀರಿನ ಕೊರತೆ ನೀಗಿಸಲು ಕೃಷ್ಣಾ ನದಿಯಲ್ಲಿ ಉಸುಕಿನ ಚೀಲಗಳು ಅಡ್ಡಲಾಗಿ ಹಾಕಿ ನೀರು ಸಂಗ್ರಹ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರೂ ನೀರು ಸರಾಗವಾಗಿ ಹರಿಯುತ್ತಿಲ್ಲ.

ಇದರಿಂದ ಆರ್‌ಟಿಪಿಎಸ್‌ನಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ, ನಾರಾಯಣಪುರ ಅಣೆಕಟ್ಟೆಯಿಂದ ಒಂದು ಸಾವಿರ ಕ್ಯೂಸೆಕ್ ಮತ್ತು ಗೂಗಲ್ ಬ್ಯಾರೇಜ್‌ನಿಂದ 300 ಕ್ಯೂಸೆಕ್ ನೀರನ್ನು ಬಿಡಲಾಗಿದೆ.

ಈ ನೀರು ಆರ್‌ಟಿಪಿಎಸ್‌ ಪಂಪ್‌ಹೌಸ್‌ಗೆ ತಲುಪಬೇಕಾದರೆ ಕನಿಷ್ಠ ನಾಲ್ಕೈದು ದಿನಗಳು ಬೇಕಾಗುತ್ತದೆ. ಆರ್‌ಟಿಪಿಎಸ್‌ನ ಮುಖ್ಯ ಎಂಜಿನಿಯರ್ ರಾಜುಮುಡಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪಂಪ್‌ಹೌಸ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನದಿಯಲ್ಲಿ ಅಲ್ಲಲ್ಲಿ ನಿಂತಿದ್ದ ನೀರನ್ನು ಸರಾಗವಾಗಿ ಹರಿಯಲು ಜೆಸಿಬಿ ಮೂಲಕ ಸಮತಟ್ಟು ಮಾಡುವ ಕಾರ್ಯವನ್ನು ತಂಡ ವೀಕ್ಷಿಸಿತು. ಸ್ಥಾವರದ ಎಂಟು ಘಟಕಗಳು ಚಾಲನೆಯಲ್ಲಿರಬೇಕಾದರೆ ಪ್ರತಿ ಒಂದು ತಾಸುಗೆ 4 ಕ್ಯೂಬಿಕ್‌ ಮೀಟರ್ ನೀರು ಬೇಕಾಗುತ್ತದೆ.

ಒಂದನೇ ಘಟಕ ವಾರ್ಷಿಕ ದುರಸ್ತಿ ಹಾಗೂ  ನೀರಿನ ಕೊರತೆದಿಂದ 5ನೇ ಘಟಕ ಸ್ಥಗಿತಗೊಂಡಿರುವುದರಿಂದ ಒಟ್ಟು 420 ಮೆಗಾವಾಟ್ ಉತ್ಪಾದನೆ ಕಡಿತಗೊಂಡಿದೆ. ಮಾತ್ರವಲ್ಲದೆ, 6 ಘಟಕಗಳಲ್ಲೂ ಉತ್ಪಾದನೆ ಪ್ರಮಾಣ ತಗ್ಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.