ADVERTISEMENT

ತಹಶೀಲ್ದಾರ್ ಕಚೇರಿ ಸೇರಿದ ಶಿವಲಿಂಗ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:22 IST
Last Updated 15 ಏಪ್ರಿಲ್ 2017, 9:22 IST

ಬೀದರ್: ಇಲ್ಲಿನ ತಹಶೀಲ್ದಾರ್‌ ಕಚೇರಿಯ ಸಿಬ್ಬಂದಿ ಹಾಜರಾಗುತ್ತಿದ್ದಂತೆ ಶಿವಲಿಂಗಕ್ಕೆ ವಿಭೂತಿ ಹಚ್ಚಿ, ಕರ್ಪೂರದ ಆರತಿ ಬೆಳಗುತ್ತಾರೆ! ಹೀಗೆ ಮಾಡುವ ಮೂಲಕ ಜಿಲ್ಲಾಡಳಿತದ ಆದೇಶವನ್ನು ಪಾಲಿಸುತ್ತಿದ್ದಾರೆ.ಸುಮಾರು ಮೂರೂವರೆ ಅಡಿ ಎತ್ತರವಿರುವ ಶಿವಲಿಂಗ 10 ವರ್ಷಗಳಿಂದ ಸಿಬ್ಬಂದಿಯಿಂದ ಪೂಜಿಸಲ್ಪಡುತ್ತಿದೆ. ಹಾಳು ಬಿದ್ದ ಪುರಾತನ ಮಂದಿರದ ಶಿವಲಿಂಗವನ್ನು ಪ್ರಾಚ್ಯವಸ್ತು ಇಲಾಖೆಯವರು ಸಂರಕ್ಷಣೆಯ ದೃಷ್ಟಿಯಿಂದ ಇಲ್ಲಿ ತಂದಿಟ್ಟಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಶಿವಲಿಂಗವು ಜಮೀನು ವಿವಾದದಿಂದಾಗಿ ತಹಶೀಲ್ದಾರ್ ಕಚೇರಿ ಸೇರಿದೆ.

ತಾಲ್ಲೂಕಿನ ಅಲಿಯಾಬಾದ್‌ (ಬಾಗೆ ಕಾರಂಜಾ) ಗ್ರಾಮದ ಸರ್ವೇ ನಂ. 45ರ  70 ಎಕರೆ 30 ಗುಂಟೆ ಜಮೀನನಲ್ಲಿ ಎಂಟು ಎಕರೆ ಜಮೀನನ್ನು ತುಕಾರಾಮ ಮರೆಪ್ಪ ಅವರಿಗೆ ಹಂಚಿಕೆ ಮಾಡಲಾಗಿದೆ. ಸಾಗುವಳಿಗೆ ಅನುಪಯುಕ್ತವಾದ ಭೂಮಿಯಲ್ಲಿದ್ದ ಒಂದು ಕಟ್ಟೆಯ ಮೇಲೆ ಶಿವಲಿಂಗ, ದತ್ತಾತ್ತ್ರೇಯ ಪಾದುಕೆ ಇದ್ದವು. ತುಕಾರಾಮ ಅವರು ಜಮೀನನ್ನು ಶಾಂತಾಬಾಯಿ ಅವರಿಗೆ ಮಾರಾಟ ಮಾಡಿದ್ದರು.

ನ್ಯಾಯಾಲಯದ ಮೊರೆ: ವ್ಯಕ್ತಿಯೊಬ್ಬರು ಶಿವಲಿಂಗವನ್ನು ತೆರವುಗೊಳಿಸಿದ ನಂತರ ಶಿವಭಕ್ತರು ನ್ಯಾಯಾಲಯದ ಮೊರೆ ಹೋದರು.ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಶಿವಲಿಂಗವನ್ನು ತಹಶೀಲ್ದಾರ್ ಕಚೇರಿಯಲ್ಲಿ ಇರಿಸುವಂತೆ ಆದೇಶ ನೀಡಿದ್ದರು.

ADVERTISEMENT

2005ರ ಏಪ್ರಿಲ್‌ 25ರಂದು ಮುಕ್ತಿ ಲಿಂಗೇಶ್ವರ ದೇವಸ್ಥಾನ ಸಮಿತಿ ಸಲ್ಲಿಸಿದ ಮನವಿ ಪರಿಶೀಲಿಸಿ ಅಂದಿನ ಜಿಲ್ಲಾಧಿಕಾರಿ ಜಮೀನು ನೋಂದಣಿ ಅಕ್ರಮವಾಗಿದೆ. ಆದ್ದರಿಂದ  ಅದನ್ನು  ವಶಕ್ಕೆ ತೆಗೆದುಕೊಳ್ಳುವಂತೆ ಬೀದರ್ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಆದೇಶ ನೀಡಿದ್ದರು.

ಜಮೀನು ಖರೀದಿದಾರರು ಜಿಲ್ಲಾಧಿಕಾರಿ ಆದೇಶದ ವಿರುದ್ಧ 2008ರ ಆಗಸ್ಟ್‌ 12ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿ ತಿರಸ್ಕರಿಸಿತು. ಹೈಕೋರ್ಟ್‌ ವಿಭಾಗೀಯ ಪೀಠವು ಜಿಲ್ಲಾಧಿಕಾರಿ ಆದೇಶ ಎತ್ತಿ ಹಿಡಿಯಿತು. ವಿವಾದ 2009ರಲ್ಲಿ ಸುಪ್ರೀಂ ಕೋರ್ಟ್‌ ತಲುಪಿದರೂ ಈವರೆಗೆ ವಿಚಾರಣೆಗೆ ಬಂದಿಲ್ಲ. ಆದರೆ ಶಿವಲಿಂಗದ ಪೂಜೆ  ಮುಂದುವರಿದಿದೆ.

‘ಅಲಿಯಾಬಾದ್‌ನಲ್ಲಿ  ಸರ್ಕಾರ ವಶಪಡಿಸಿಕೊಂಡಿರುವ ಜಾಗದಲ್ಲಿ ಹಿಂದೆ ಇದ್ದ ಕಟ್ಟೆಯ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಬೇಕು. ಶಿವ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು’ ಎಂದು ಮಂದಿರ ಸಮಿತಿಯ ಅಧ್ಯಕ್ಷ ಶಿವಶರಣಪ್ಪ ವಾಲಿ ಜಿಲ್ಲಾಡಳಿತವನ್ನು ಆಗ್ರಹಿಸುತ್ತಾರೆ.

‘ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿರುವ ಕಾರಣ ವಿಷಯವನ್ನು ಚರ್ಚಿಸಲಾಗದು. ಆದರೆ ಜಿಲ್ಲಾಧಿಕಾರಿ ಆದೇಶದಂತೆ ತಹಶೀಲ್ದಾರ್‌ ಕಚೇರಿಯ ಚುನಾವಣಾ ವಿಭಾಗದಲ್ಲಿ  ಶಿವಲಿಂಗವನ್ನು  ಸುರಕ್ಷಿತವಾಗಿ ಇಡಲಾಗಿದೆ. ನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತಿದೆ’ ಎಂದು  ತಹಶೀಲ್ದಾರ್‌ ಜಗನ್ನಾಥ ರೆಡ್ಡಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.