ADVERTISEMENT

ನಗರ ಮಾಲಿನ್ಯ ಹೆಚ್ಚಿಸಿದ ಚರಂಡಿಗಳು

ದೂಳು ಗೋಳು ಚರಂಡಿ ಕಾಮಗಾರಿ ಅಪೂರ್ಣ

ನಾಗರಾಜ ಚಿನಗುಂಡಿ
Published 13 ಮಾರ್ಚ್ 2017, 5:48 IST
Last Updated 13 ಮಾರ್ಚ್ 2017, 5:48 IST
ಲೋಹರವಾಡಿ ಬಡಾವಣೆಯಲ್ಲಿ ಕಲುಷಿತಗೊಂಡಿರುವ ಚರಂಡಿ
ಲೋಹರವಾಡಿ ಬಡಾವಣೆಯಲ್ಲಿ ಕಲುಷಿತಗೊಂಡಿರುವ ಚರಂಡಿ   

ರಾಯಚೂರು: ನಗರದ ಚರಂಡಿಗಳಲ್ಲಿ ಕೊಳಚೆ ನೀರು ಹರಿದು ಹೋಗಲು ಸಮರ್ಪಕ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಚರಂಡಿ ಸಮಸ್ಯೆಗಳನ್ನು ಸೃಷ್ಟಿಸುವ ತಾಣಗಳಾಗಿ ಮಾರ್ಪಟ್ಟಿವೆ.

ಅನೇಕ ತಿಂಗಳುಗಳಿಂದ ಚರಂಡಿಗಳು ತುಂಬಿಕೊಂಡಿವೆ. ಪ್ರತಿ ಬಡಾವಣೆಗಳಲ್ಲಿ ಹಾಗೂ ಮುಖ್ಯರಸ್ತೆಗಳ ಅಕ್ಕಪಕ್ಕದಲ್ಲಿ ಕಪ್ಪು ಕೊಳಚೆ ದರ್ಶನ ಸಾಮಾನ್ಯವಾಗಿದೆ. ನಿಂತಿರುವ ಕೊಳಚೆಯಲ್ಲೆ ಘನತ್ಯಾಜ್ಯ ಬೀಳುವುದರಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ದುರ್ವಾಸನೆ ಬೀರುತ್ತಿದೆ.

ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೊಳಚೆ ಪ್ರದೇಶ ರಾಮನಗರ ಹಾಗೂ ಸುಸಜ್ಜಿತ ಮನೆಗಳಿರುವ ನಿಜಲಿಂಗಪ್ಪ ಕಾಲೊನಿ ಎರಡೂ ಪ್ರದೇಶಗಳಲ್ಲಿ ಚರಂಡಿಗಳದ್ದು ಒಂದೇ ರೀತಿಯ ಸಮಸ್ಯೆ. ಸುಸಜ್ಜಿತ ಕಾಲೊನಿಯಲ್ಲಿ ಆರೋಗ್ಯಕ್ಕೆ ಹಾನಿಯಾಗದಂತೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಬಡವರಿರುವ ಕೊಳಚೆ ಪ್ರದೇಶದಲ್ಲಿ ಮಲೀನ ಪರಿಸರಕ್ಕೆ ಹೊಂದಿಕೊಂಡು ಬದುಕುತ್ತಿರುವ ಅನಿವಾರ್ಯತೆ ಎದ್ದು ಕಾಣುತ್ತದೆ.

ಪ್ರಮುಖವಾಗಿ ತಿಮ್ಮಾಪುರ ಪೇಟೆ, ಅಶೋಕನಗರ, ಮಡ್ಡಿಪೇಟೆ, ಹರಿಜನವಾಡಾ, ಜಹೀರಾಬಾದ್‌, ಬ್ರೆಸ್ತವಾರಪೇಟೆ, ಉಪ್ಪಾರವಾಡಿ, ಆಜಾದನಗರ ಪ್ರದೇಶಗಳಲ್ಲಿ ಚರಂಡಿಗಳು ಅಧೋಗತಿಯಲ್ಲಿವೆ. ಚರಂಡಿಗಳಿಂದ ಆಗಾಗ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಚರಂಡಿ ಕೊಳಚೆ ಹರಿದು ಹೋಗಲು ಸುಗಮ ವ್ಯವಸ್ಥೆಯಿಲ್ಲ. ಚರಂಡಿ ಕಾಮಗಾರಿಗಳನ್ನು ತುಂಡುತುಂಡಾಗಿ ಗುತ್ತಿಗೆ ಕೊಟ್ಟು ಮಾಡಿಸುವುದರಿಂದ ಚರಂಡಿಗಳ ಮಧ್ಯೆ ಸಂಪರ್ಕ ಕಲ್ಪಿಸುವ ಬಗ್ಗೆ ನಗರಸಭೆ ಗಂಭೀರವಾಗಿ ಪರಿಗಣಿಸಿಲ್ಲ.

‘ನಗರದ ಚರಂಡಿಗಳ ಮಧ್ಯೆ ಸಂಪರ್ಕವಿಲ್ಲ ಎನ್ನುವ ಸಮಸ್ಯೆ ನಿಜ. ಆದರೆ ಇತ್ತೀಚೆಗೆ ಒಂದೊಂದಾಗಿ ಚರಂಡಿಗಳನ್ನು ಸಂಪರ್ಕಿಸುವ ಕಾಮಗಾರಿಗಳನ್ನು ಮಾಡಲಾಗುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಯೋಜನೆಗಳು
ನಗರೋತ್ಥಾನ ಯೋಜನೆ, ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾಮಗಾರಿಗಳು, ಲೋಕೋಪಯೋಗಿ ಇಲಾಖೆಯ ಕೆಲಸಗಳು ಹಾಗೂ ವಿಶೇಷ ಅಭಿವೃದ್ಧಿ ನಿಧಿ (ಎಸ್‌ಎಫ್‌ಸಿ) ಕಾಮಗಾರಿಗಳು ಏಕಕಾಲದಲ್ಲಿ ಪ್ರಗತಿಯಲ್ಲಿವೆ. ಕಾಮಗಾರಿಗಳ ಅನುಷ್ಠಾನಕ್ಕಾಗಿ ವಿವಿಧ ಕಡೆಗಳಲ್ಲಿ ರಸ್ತೆ, ಚರಂಡಿಗಳನ್ನು ಅಗೆದು ಹಾಕಿರುವುದರಿಂದ ಸಮಸ್ಯೆ ಆಗಿರಬಹುದು ಎನ್ನುವುದು ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅವರ ಅಭಿಮತ.

ಸಮಗ್ರ ಯೋಜನೆ ಇಲ್ಲ
ನಗರದಲ್ಲಿ ಚರಂಡಿಗಳನ್ನು ನಿರ್ಮಿಸುವುದಕ್ಕೆ ನಗರಸಭೆ ಸಮಗ್ರ ಯೋಜನೆ ಮಾಡಿಕೊಂಡಿಲ್ಲ. ಪ್ರತಿ ವಾರ್ಡ್‌ ಸದಸ್ಯರಿಗೆ ಅನುದಾನ ಹಂಚಿಕೆ ಮಾಡಿ ಕ್ರಿಯಾಯೋಜನೆ ಮಾಡಲಾಗುತ್ತದೆ.

ADVERTISEMENT

ಹೀಗಾಗಿ ಆಯಾ ವಾರ್ಡ್‌ಗಳಲ್ಲಿ ಚರಂಡಿ ನಿರ್ಮಿಸಿದರೂ ವಾರ್ಡ್‌ನಿಂದ ವಾರ್ಡ್‌ಗೆ ಅವುಗಳ ಸಂಪರ್ಕಿಸುವ ಕೆಲಸವಾಗಿಲ್ಲ. ಎಲ್ಲಿ ನೋಡಿದರೂ ಚರಂಡಿಗಳು ಕಲ್ಮಶ ತುಂಬಿಕೊಂಡು ನಿಂತಿರುವುದು ಸಾಮಾನ್ಯ ದೃಶ್ಯ.

ಉದ್ದೇಶಪೂರ್ವಕವಾಗಿ ಕಾಮಗಾರಿ ಅಪೂರ್ಣಗೊಂಡಿಲ್ಲ. ಪ್ರಗತಿಯಲ್ಲಿರುವ ಕಾಮಗಾರಿ  ಮುಗಿದ ಬಳಿಕ ಚರಂಡಿ ಸರಿಪಡಿಸಲಾಗುವುದು
- ಕೆ.ಗುರುಲಿಂಗಪ್ಪ, ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.