ADVERTISEMENT

ನನೆಗುದಿಗೆ ಬಿದ್ದ ಮಚ್ಚಿಬಜಾರ್‌ ರಸ್ತೆ ನಿರ್ಮಾಣ

ನಾಗರಾಜ ಚಿನಗುಂಡಿ
Published 25 ಡಿಸೆಂಬರ್ 2017, 5:58 IST
Last Updated 25 ಡಿಸೆಂಬರ್ 2017, 5:58 IST
ರಾಯಚೂರಿನ ಮಚ್ಚಿ ಬಜಾರ್‌ ರಸ್ತೆ ಅಭಿವೃದ್ಧಿಗಾಗಿ ತೆರವುಗೊಳಿಸುವ ಕಟ್ಟಡಗಳನ್ನು ನಗರಸಭೆ ಸಿಬ್ಬಂದಿ ಕಳೆದ ತಿಂಗಳು ಗುರುತಿಸಿದರು
ರಾಯಚೂರಿನ ಮಚ್ಚಿ ಬಜಾರ್‌ ರಸ್ತೆ ಅಭಿವೃದ್ಧಿಗಾಗಿ ತೆರವುಗೊಳಿಸುವ ಕಟ್ಟಡಗಳನ್ನು ನಗರಸಭೆ ಸಿಬ್ಬಂದಿ ಕಳೆದ ತಿಂಗಳು ಗುರುತಿಸಿದರು   

ರಾಯಚೂರು: ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಮಚ್ಚಿಬಜಾರ್‌ ರಸ್ತೆ ನಿರ್ಮಾಣಕ್ಕೆ ನಗರಸಭೆಯಿಂದ ಯೋಜನೆ ರೂಪುಗೊಂಡಿದೆ. ಆದರೆ ಅನುಷ್ಠಾನ ಮಾತ್ರ ಸಾಧ್ಯವಾಗುತ್ತಿಲ್ಲ!

ರಸ್ತೆ ನಿರ್ಮಿಸುವಂತೆ ಕಟ್ಟಡ ತೆರವಿಗೆ ಒಪ್ಪಿಕೊಂಡು 15 ಕ್ಕೂ ಹೆಚ್ಚು ಜನರು ನಗರಸಭೆಗೆ ಪತ್ರ ನೀಡಿದ್ದಾರೆ. ಅಲ್ಲದೆ, ನಗರಸಭೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಒತ್ತಾಯ ಕೂಡಾ ಮಾಡಿದ್ದಾರೆ. ಆದರೆ ರಸ್ತೆ ನಿರ್ಮಿಸುವ ಕೆಲಸ ಮಾತ್ರ ತಾಂತ್ರಿಕ ಅಡಚಣೆಗಳಿಂದ ತೊಳಲಾಡುತ್ತಿದೆ. ರಸ್ತೆಯ ಎಡಬಲಕ್ಕೆ ಸುಮಾರು 55 ಕಟ್ಟಡಗಳು ತೆರವು ಆಗಬೇಕಿದೆ. ಇದನ್ನು ಪ್ರಶ್ನಿಸಿ ಕೆಲ ಕಟ್ಟಡಗಳ ಮಾಲೀಕರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ತಾಂತ್ರಿಕ ಅಡಚಣೆಯಿಂದಾಗಿ ರಸ್ತೆ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.

ರಸ್ತೆ ನಿರ್ಮಿಸುವುದಕ್ಕೆ ಸಿದ್ಧತೆ ಮಾಡಿಕೊಂಡು ಹಲವು ವರ್ಷಗಳಾಗಿವೆ. ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ಪ್ರಕಾರ ಮಚ್ಚಿ ಬಜಾರ್ ರಸ್ತೆಯ ಅಗಲ 60 ಅಡಿ. ಸಿಡಿಪಿ ಪ್ರಕಾರ ರಸ್ತೆ ನಿರ್ಮಿಸಿದರೆ ಅನೇಕ ಜನವಸತಿಗಳನ್ನು ಸಂಪೂರ್ಣ ತೆರವು ಮಾಡಬೇಕಾಗುತ್ತದೆ. ಹೀಗಾಗಿ ರಸ್ತೆ ವಿಸ್ತರಣೆ ಕಡಿಮೆ ಮಾಡುವುದಕ್ಕೆ ಯೋಜಿಸಲಾಗಿದೆ. ರಸ್ತೆ ವಿಸ್ತರಣೆ ವಿಷಯಕ್ಕೆ ಸಂಬಂಧಿಸಿದಂತೆ ಕಟ್ಟಡಗಳ ಮಾಲೀಕರು ಮತ್ತು ನಗರಸಭೆ ಅಧಿಕಾರಿಗಳ ಮಧ್ಯೆ ಸಾಕಷ್ಟು ಸಲ ಚೌಕಾಸಿ ನಡೆದಿದೆ.  50 ಅಡಿ ವಿಸ್ತೀರ್ಣದ ರಸ್ತೆ ನಿರ್ಮಿಸಲು ನಗರಸಭೆ ಉದ್ದೇಶಿಸಿದ್ದರೆ, ಅಲ್ಲಿನ ಕೆಲ ನಿವಾಸಿಗಳು 40 ಅಡಿ ವಿಸ್ತೀರ್ಣದ ರಸ್ತೆ ಸಾಕು ಎನ್ನುತ್ತಾರೆ. ಈ ಎರಡು ವಾದಗಳ ಸಾಧಕ–ಬಾಧಕ ಗಮನಿಸಿ, 45 ಅಡಿ ರಸ್ತೆ ವಿಸ್ತೀರ್ಣದ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ತೆರವು ಮಾಡಬೇಕಿರುವ ಕಟ್ಟಡಗಳಿಗೆ ಈಗಾಗಲೇ ಗುರುತು (ಮಾರ್ಕಿಂಗ್‌) ಹಾಕಲಾಗಿದೆ. ಕಟ್ಟಡದ ಎಷ್ಟು ಅಡಿ ತೆರವು ಮಾಡಬೇಕು ಎನ್ನುವುದನ್ನು ಬರೆಯಲಾಗಿದೆ. ಮಾರ್ಕಿಂಗ್‌ ಮಾಡುವುದನ್ನು ನೋಡಿದ್ದ ಜನರು, ಕೊನೆಗೂ ರಸ್ತೆ ನಿರ್ಮಾಣ ಆರಂಭಿಸುತ್ತಿದ್ದಾರೆ ಎಂದು ನಿಟ್ಟುಸಿರು ಬಿಟ್ಟಿದ್ದರು. ವಾಹನಗಳ ಸಂಚಾರದಿಂದ ಈ ರಸ್ತೆಯಲ್ಲಿ ಬರುವ ದೂಳು ಇಡೀ ಬಡಾವಣೆ ಜನರಿಗೆ ಸಮಸ್ಯೆ ಉಂಟು ಮಾಡಿದೆ.

ತಿನ್‌ ಕಂದಿಲ್‌ನಿಂದ ಅಶೋಕ ಡಿಪೋ ವೃತ್ತದವರೆಗಿನ ಈ ಮಾರ್ಗದಲ್ಲಿ ಸಾಕಷ್ಟು ವ್ಯಾಪಾರ ಮಳಿಗೆಗಳಿವೆ. ಪ್ರಮುಖವಾಗಿ ಮೀನು, ಕೋಳಿ, ಕುರಿ ಮಾಂಸ ಮಾರಾಟ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಗ್ರಾಮೀಣ ಭಾಗದಿಂದ ಬರುವ ಜನರು ಈ ಮಾರ್ಗದಲ್ಲಿ ಸಂತೆಗೆ  ನೆರೆಯುತ್ತಾರೆ.

ಮಾವಿನಕೆರೆ ಮತ್ತು ಆರ್‌ಟಿಒ ಕ್ರಾಸ್‌ ಕಡೆಗೆ ವಾಹನದಲ್ಲಿ ಹೋಗುವವವರಿಗೆ ಇದು ಪ್ರಮುಖ ರಸ್ತೆ ಮಾರ್ಗ.ಜನದಟ್ಟಣೆ ಮತ್ತು ವಾಹನದಟ್ಟಣೆ ಎಲ್ಲ ಸಮಯದಲ್ಲೂ ಕಂಡು ಬರುತ್ತದೆ. ಸದಾ ದೂಳಿನಿಂದ ಕೂಡಿದ ಈ ರಸ್ತೆಯಲ್ಲಿ ಶುಚಿತ್ವ ಎನ್ನುವುದು ಗಗನಕುಸುಮ.

‘ರಸ್ತೆ ಮಾಡುವುದಕ್ಕೆ ಈಗಾಗಲೇ ಯೋಜನೆ ಮಾಡಿದ್ದೇವೆ. ಅಲ್ಲಿನ ವ್ಯಾಪಾರಿಗಳೊಂದಿಗೆ ಈಚೆಗೆ ಮಾತುಕತೆ ಆಗಿದೆ. ಹಬ್ಬ ಹರಿದಿನಗಳು ಮುಗಿಯಲಿಯೆಂದು ಕಾಮಗಾರಿ ಆರಂಭಿಸಿರಲಿಲ್ಲ. ಈಗ ರಸ್ತೆ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದು ನಗರಸಭೆ ಪ್ರಭಾರಿ ಅಧ್ಯಕ್ಷ ಜಯಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರಿಗೆ ಅನುಕೂಲ ಮಾಡುವುದಕ್ಕೆ ರಸ್ತೆಗಳನ್ನು ಮಾಡಬೇಕು. ನಿಯಮಾನುಸಾರ ಕಟ್ಟಡ ತೆರವು ಮಾಡುವುದಕ್ಕೆ ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕೋರ್ಟ್ ಕೇಸ್‌ಗಳನ್ನು ಬೇಗನೆ ಮುಗಿಸುವುದಕ್ಕೆ ಮೊದಲು ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸುತ್ತಾರೆ ಸೈಕಲ್‌ ದುರಸ್ತಿ ಮಾಡುವ ಖಾದರ್‌.

* *

ಮಚ್ಚಿ ಬಜಾರ್‌ ರಸ್ತೆಗೆ ಚರಂಡಿ ನಿರ್ಮಾಣ ಮತ್ತು ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕೆ ಈಗಾಗಲೇ ಟೆಂಡರ್‌ ವಹಿಸಲಾಗಿದೆ. ಕೆಲವರು ಕೋರ್ಟ್‌ಗೆ ಅರ್ಜಿ ಹಾಕಿರುವುದರಿಂದ ರಸ್ತೆ ಕೆಲಸ ನಡೆಯುತ್ತಿಲ್ಲ.
ಶಫಿಯೂದ್ದೀನ್‌
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.