ADVERTISEMENT

ಪಡಿತರಕ್ಕಾಗಿ ಗುಡ್ಡ ಹತ್ತಿದ ಗ್ರಾಮಸ್ಥರು...

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:05 IST
Last Updated 24 ನವೆಂಬರ್ 2017, 6:05 IST

ಮುದಗಲ್ (ರಾಯಚೂರು ಜಿಲ್ಲೆ): ಸಮೀಪದ ಕನಸಾವಿ, ಕೋಮಲಾಪುರ, ಆದಾಪುರ ಗ್ರಾಮದ ಜನರು ಪಡಿತರ ಧಾನ್ಯಕ್ಕಾಗಿ ಪರದಾಡಬೇಕಾಗಿದೆ. ಇಂಟರ್ನೆಟ್ ಸಿಗ್ನಲ್ ಕೊರತೆಯಿಂದಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಡಾಟಾ ಕಾರ್ಡ್‌, ಲ್ಯಾಪ್‌ಟಾಪ್‌ನೊಂದಿಗೆ ದಿನವೂ ಊರ ಗುಡ್ಡ ಏರಬೇಕಾಗಿದೆ. 900 ಮಂದಿ ಪಡಿತರ ಚೀಟಿದಾರರು ಅಂಗಡಿ ಸಂಚಾಲಕರನ್ನು ಹಿಂಬಾಲಿಸುತ್ತಿದ್ದಾರೆ. ಇಂಟರ್ನೆಟ್ ಸಿಗ್ನಲ್‌ಗಾಗಿ ಆಗಾಗ ಹತ್ತಿಂದಿತ್ತ, ಇತ್ತಿಂದತ್ತ ಓಡಾಟ ಸಾಮಾನ್ಯವಾಗಿದೆ. ಸಿಗ್ನಲ್ ಸಿಗುವವರೆಗೂ ಕಾದು ಕುಳಿತು ಬೆರಳು ಗುರುತು ನೀಡಬೇಕಿದೆ.

ಕನಸಾವಿ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಕೋಮಲಾಪುರ, ಆದಾಪುರ, ಚಿಕ್ಕ ಲಕ್ಕಿಹಾಳ ಹಾಗೂ ಹಿರೇಲಕ್ಕಿಹಾಳ ಗ್ರಾಮಗಳನ್ನು ಜೋಡಿಸಿದ್ದಾರೆ. ನೂರಾರು ಪಡಿತರದಾರರು ಕಳೆದ ಒಂದು ವರ್ಷದಿಂದ ಐದಾರು ಕಿ.ಮೀ ದೂರ ಹೋಗಿ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಈ ತಿಂಗಳು ಪಡಿತರ ಚೀಟಿದಾರರು ಆಹಾರಧಾನ್ಯ ಪಡೆಯಲು ತಮ್ಮ ಹೆಬ್ಬೆಟ್ಟಿನ ಗುರುತು ನೀಡಬೇಕು. ಇಲ್ಲವಾದರೆ ಆಹಾರಧಾನ್ಯ ವಿತರಣೆ ಸ್ಥಗಿತಗೊಳಿಸಲಾಗುವುದು ಎಂದು ಅಂಗಡಿ ಮಾಲೀಕರು ಹೇಳಿದ್ದರಿಂದ ಫಲಾನುಭವಿಗಳು ಬಿಸಿಲು ಲೆಕ್ಕಿಸದೆ ಹೆಬ್ಬೆಟ್ಟಿನ ಗುರುತು ಹಾಕಲು ಕಾಯ್ದು ಕುಳಿತಿದ್ದಾರೆ.

‘ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕ ಸರಿ ಇಲ್ಲ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಪಡಿತರ ಚೀಟಿದಾರರು ಗುಡ್ಡ ಹತ್ತಿ ಸಿಗ್ನಲ್ ಬರುವವರೆಗೂ ಕಾದು ಹೆಬ್ಬೆಟ್ಟು ಗುರುತು ನೀಡಬೇಕಿದೆ. ಪ್ರತಿದಿನ ಕೂಲಿ ಕೆಲಸ ಬಿಟ್ಟು ಗುಡ್ಡ ಗುಡ್ಡ ಅಲೆದಾಡಬೇಕಿದೆ. ಧಾನ್ಯಕ್ಕಾಗಿ ಎಷ್ಟೊಂದು ಬಹಳ ತ್ರಾಸು ಪಡಬೇಕಿದೆ’ ಎಂದು ಹನುಮಂತ, ಗದ್ದೆಪ್ಪ, ನಿಂಗಪ್ಪ, ಸದ್ದಪ್ಪ, ಮಾನಪ್ಪ, ದುರುಗಮ್ಮ, ಸಹದೇವಪ್ಪ, ಹುಲುಗಪ್ಪ, ಯಂಕಪ್ಪ, ಶರಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

* * 

ಕೆಲ ಗ್ರಾಮಗಳಲ್ಲಿ ಇಂಟರ್ನೆಟ್ ಸಂಪರ್ಕ ಬರುತ್ತಿಲ್ಲ. ಆಹಾರ ಧಾನ್ಯ ಪಡೆಯಲು ತೊಂದರೆ ಪಡುತ್ತಿರುವುದು ಗಮನಕ್ಕೆ ಬಂದಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರ ಮಾಡುತ್ತೇನೆ.
ಚಾಮರಾಜ ಪಾಟೀಲ,
ತಹಶೀಲ್ದಾರ್, ಲಿಂಗಸುಗೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.