ADVERTISEMENT

ಪಶುಸಂಗೋಪನಾ ಇಲಾಖೆ: ಸಿಬ್ಬಂದಿ ಕೊರತೆ

81 ಪಶುವೈದ್ಯರ ಹುದ್ದೆಗೆ 16 ಹುದ್ದೆ ಮಾತ್ರ ಭರ್ತಿ, ಹೆಚ್ಚಿನ ಪ್ರಭಾರ ಹೊಣೆಗಾರಿಕೆ

ಶಶಿಧರ ಗರ್ಗಶ್ವೇರಿ
Published 5 ಜನವರಿ 2017, 9:09 IST
Last Updated 5 ಜನವರಿ 2017, 9:09 IST

ರಾಯಚೂರು: ಜಿಲ್ಲೆಯಲ್ಲಿ 18 ಲಕ್ಷಕ್ಕೂ ಹೆಚ್ಚು ಸಾಕುಪ್ರಾಣಿಗಳಿವೆ. ಇವುಗಳ ಯೋಗಕ್ಷೇಮ ನೋಡಿಕೊಳ್ಳಬೇಕಾದ ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಹೆಚ್ಚಿದೆ. ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇರುವ ಕಾರಣ ಒಬ್ಬರಿಗೆ 5–6 ಹುದ್ದೆಗಳ ಪ್ರಭಾರ ಹೊಣೆ ನೀಡಲಾಗಿದೆ.

ಜಿಲ್ಲಾ ಆಸ್ಪತ್ರೆ, ಪಾಲಿ ಕ್ಲಿನಿಕ್‌, ಒಂದು ಕೋಳಿ ಸಾಕಣೆ ಘಟಕ, 27 ಪಶು ಆಸ್ಪತ್ರೆಗಳು, 47 ಪಶು ಚಿಕಿತ್ಸಾಲಯ, 26 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಸೇರಿ 107 ಪಶು ಆಸ್ಪತ್ರೆಗಳಿವೆ. ಜೊತೆಗೆ ಐದು ಸಂಚಾರಿ ಘಟಕಗಳೂ ಇವೆ. ಒಟ್ಟಾರೆ 441 ಹುದ್ದೆಗಳಿದ್ದು, ಇದರಲ್ಲಿ 176 ಹುದ್ದೆಗಳು ಭರ್ತಿಯಾಗಿವೆ. 265 ಹುದ್ದೆಗಳು ಖಾಲಿ ಇವೆ.

ಎ ಶ್ರೇಣಿಯಲ್ಲಿ 88 ಹುದ್ದೆಗಳಿದ್ದು, 20 ಮಾತ್ರ ಭರ್ತಿಯಾಗಿವೆ. ಎರಡು ಉಪನಿರ್ದೇಶಕರ ಹುದ್ದೆ ಇದ್ದು, ಪಾಲಿಕ್ಲಿನಿಕ್‌ನಲ್ಲಿ ಒಂದು ಉಪ ನಿರ್ದೇಶಕರ ಹುದ್ದೆ ಖಾಲಿ ಇದೆ.ಐದು ತಾಲ್ಲೂಕು ಕೇಂದ್ರಗಳಲ್ಲಿ ಸಹಾಯಕ ನಿರ್ದೇಶಕರ ಹುದ್ದೆ ಇದ್ದು, ಮಾನ್ವಿ, ರಾಯಚೂರು ಮತ್ತು ಸಿಂಧನೂರುಗಳಲ್ಲಿ ಸಹಾಯಕ ನಿರ್ದೇಶಕರು ಇದ್ದಾರೆ (ಈಗ ಮಾನ್ವಿ ತಾಲ್ಲೂಕಿನ ಸಹಾಯಕ ನಿರ್ದೇಶಕರಿಗೂ ವರ್ಗಾವಣೆ ಆಗಿದೆ). 81 ಪಶು ವೈದ್ಯಾಧಿಕಾರಿಗಳ ಹುದ್ದೆಗಳಲ್ಲಿ 16 ಮಾತ್ರ ಭರ್ತಿ ಇದ್ದು, 65 ಹುದ್ದೆಗಳು ಖಾಲಿ ಇವೆ.

ಬಿ ಗುಂಪಿನ ಹುದ್ದೆಯಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿ ಏಳು ಹುದ್ದೆಗಳಿದ್ದು, ಇತ್ತೀಚೆಗಷ್ಟೆ ಕೆಲವು ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲಾಗಿದೆ. ಸಿ ಗುಂಪಿನಲ್ಲಿ ಹಿರಿಯ ಪಶು ಪರೀಕ್ಷಕರು ಮತ್ತು ಸಹಾಯಕ ಪಶು ಪರೀಕ್ಷಕರ 163 ಹುದ್ದೆಗಳಿಗೆ 84 ಭರ್ತಿಯಾಗಿವೆ. 79 ಖಾಲಿ ಇವೆ. ಡಿ ಗುಂಪಿನ 184 ಹುದ್ದೆಗಳಲ್ಲಿ 68 ಮಾತ್ರ ಭರ್ತಿಯಾಗಿದ್ದು, 116 ಖಾಲಿ ಇವೆ.

ಭಾರತೀಯ ಪಶುವೈದ್ಯಕೀಯ ಮಂಡಳಿಯ ಮಾರ್ಗಸೂಚಿಯಂತೆ 5 ಸಾವಿರ ಜಾನುವಾರಿಗೆ ಒಂದು ಆಸ್ಪತ್ರೆ ಅಥವಾ ಪಶು ಚಿಕಿತ್ಸಾಲಯ ಇರಬೇಕು. ಇಂತಹ ಒಂದು ಆಸ್ಪತ್ರೆಯಲ್ಲಿ ಒಬ್ಬರು ಪಶುವೈದ್ಯಾಧಿಕಾರಿ ಸೇರಿದಂತೆ ಕನಿಷ್ಠ 6ರಿಂದ 8 ಸಿಬ್ಬಂದಿ ಇರಬೇಕು. ಆದರೆ, ಜಿಲ್ಲೆಯಲ್ಲಿರುವ 107 ಪಶು ಆಸ್ಪತ್ರೆಗಳಲ್ಲಿ ದೊಡ್ಡ ಮಟ್ಟದಲ್ಲಿ ಸಿಬ್ಬಂದಿ ಕೊರತೆ ಇದೆ.

‘ಸಿಬ್ಬಂದಿ ಕೊರತೆ ಹೆಚ್ಚಿನ ಮಟ್ಟದಲ್ಲಿರುವ ಕಾರಣ ಪ್ರತಿಯೊಬ್ಬರು ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಆಯುಕ್ತರಿಗೂ ಪತ್ರದ ಮೂಲಕ ತಿಳಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಪ್ರಕಾಶ ಹೇಳಿದರು.

‘ಈ ಸಿಬ್ಬಂದಿ ಕೊರತೆಯ ಮಧ್ಯೆ ಕಾಲು– ಬಾಯಿ ರೋಗ ತಡೆಯುವ ಉದ್ದೇಶದ 11ನೇ ಸುತ್ತಿನ ರಾಷ್ಟ್ರೀಯ ಉಚಿತ ಲಸಿಕೆ ಅಭಿಯಾನವನ್ನು ಅ. 24ರಿಂದ ನ. 15ರವರೆಗೆ ಯಶಸ್ವಿಯಾಗಿ ನಡೆಸಲಾಗಿದೆ’ ಎಂದರು.

ಈ ಭಾಗಕ್ಕೆ (ರಾಯಚೂರು ಜಿಲ್ಲೆ) ವರ್ಗವಾದರೆ ಪಶುವೈದ್ಯಾಧಿಕಾರಿಗಳು ಬರುವುದಿಲ್ಲ. ಹೇಗಾದರೂ ಮಾಡಿ ವರ್ಗಾವಣೆ ರದ್ದು ಮಾಡಿಸಿಕೊಳ್ಳುತ್ತಾರೆ. ಒಂದೊಮ್ಮೆ ಬಂದರೂ 2 ವರ್ಷದೊಳಗೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಈ ಪ್ರಮಾಣ ಸಿಬ್ಬಂದಿ ಕೊರತೆ  ಬೇರೆ ಜಿಲ್ಲೆಗಳಲ್ಲಿ ಇಲಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.