ADVERTISEMENT

ಪಿಂಚಣಿದಾರರ ಪ್ರತಿಭಟನೆ

ಪಿಂಚಣಿ ಮೊತ್ತ ₹2 ಸಾವಿರಕ್ಕೆ ಹೆಚ್ಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 8:51 IST
Last Updated 31 ಡಿಸೆಂಬರ್ 2016, 8:51 IST

ರಾಯಚೂರು: ವಿಧವಾ, ದೇವದಾಸಿ, ಅಂಗವಿಕಲರು ಹಾಗೂ ವೃದ್ಧಾಪ್ಯ ಪಿಂಚಣಿಯನ್ನು ₹2 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಪಿಂಚಣಿ ಪರಿಷತ್ ನೇತೃತ್ವದಲ್ಲಿ ಪಿಂಚಣಿದಾರರು ₹500ನ್ನು  ಮನಿ ಆರ್ಡರ್ ಮೂಲಕ ಸರ್ಕಾರಕ್ಕೆ ವಾಪಸ್ ಕಳಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ಪಿಂಚಣಿ ಮೊತ್ತ ಹೆಚ್ಚಿಸಲು ಅನೇಕ ಸಲ ಹಲವು ಸಂಘಟನೆಗಳು ಪ್ರತಿಭಟನೆ  ನಡೆಸಿದರೂ, ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಶಾಸಕರ ಹಾಗೂ ಏಳನೇ ವೇತನ ಆಯೋಗದಲ್ಲಿ ಸರ್ಕಾರಿ ಅಧಿಕಾರಿಗಳ ವೇತನ ಹೆಚ್ಚಳ ಮಾಡಲಾಗಿದೆ. ಆದರೆ, ವಿವಿಧ ಯೋಜನೆಗಳ ಫಲಾನುಭವಿಗಳ ಪಿಂಚಣಿ ಹೆಚ್ಚಳ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಕೈದಿಗಳಿಗೆ ದಿನಕ್ಕೆ ₹100 ಖರ್ಚು ಮಾಡುವ ಸರ್ಕಾರ ಪಿಂಚಣಿದಾರರಿಗೆ ದಿನಕ್ಕೆ ₹17 ವೆಚ್ಚ ಮಾಡುತ್ತಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಪಿಂಚಣಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಹೆಚ್ಚಿನ ಪಿಂಚಣಿ ನೀಡಿ ದೇಶಕ್ಕೆ ಮಾದರಿಯಾಗಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಭಯ, ಶರಣಪ್ಪ, ಹನುಮಮ್ಮ, ಅಚ್ಚಮ್ಮ, ದುರ್ಗಮ್ಮ, ಸಲಮ್ಮ, ದುರ್ಗಪ್ಪ, ಮಲ್ಲಮ್ಮ, ಗಂಗಮ್ಮ, ವಿದ್ಯಾಪಾಟೀಲ್, ಹನುಮಂತಿ, ಅಂಬಮ್ಮ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.