ADVERTISEMENT

ಪೆಟ್ರೋಲ್ ಅಕ್ರಮ ಮಾರಾಟ ದಂಧೆ ಜೋರು

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:18 IST
Last Updated 17 ಮೇ 2017, 6:18 IST
ಶಕ್ತಿನಗರದ ರಾಷ್ಟ್ರೀಯ ಹೆದ್ದಾರಿ 167 ರಲ್ಲಿ  ಕಿರಾಣಿ ಅಂಗಡಿಗಳಲ್ಲಿ  ಪೆಟ್ರೋಲ್ ಮಾರಾಟ ಮಾಡುತ್ತಿರುವುದು
ಶಕ್ತಿನಗರದ ರಾಷ್ಟ್ರೀಯ ಹೆದ್ದಾರಿ 167 ರಲ್ಲಿ ಕಿರಾಣಿ ಅಂಗಡಿಗಳಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತಿರುವುದು   

ಶಕ್ತಿನಗರ: ಶಕ್ತಿನಗರದಲ್ಲಿ ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡಿ ಜನರಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ರಸ್ತೆ ಮಧ್ಯೆ ಬೈಕ್‌ಗಳು ಕೈ ಕೊಟ್ಟಾಗ ಅನಿವಾರ್ಯವಾಗಿ  ಸವಾರರು ಕಿರಾಣಿ ಅಂಗಡಿ, ಪಂಕ್ಚರ್ ಶಾಪ್, ಪಾನ್‌ಶಾಪ್ ಅಂಗಡಿಗಳಲ್ಲಿ ಮಾರಾಟ ಮಾಡುವ ಪೆಟ್ರೋಲ್‌ಗೆ ಮೊರೆ ಹೋಗುತ್ತಾರೆ.

‘ಅರ್ಧ ಲೀಟರ್‌ಗೆ ಪೆಟ್ರೋಲ್‌ನ್ನು ₹45 ಕ್ಕೆ ಮಾರಾಟ ಮಾಡಲಾಗುತ್ತಿದೆ. ಅದಕ್ಕೆ   ಸೀಮೆಎಣ್ಣೆ ಬೆರೆಸಲಾಗುತ್ತಿದೆ’ ಎಂದು ವಾಹನ ಸವಾರ ಮುನಿಸ್ವಾಮಿ, ಆಂಜನೇಯ ಆರೋಪಿಸಿದರು.

‘ನೀರಿನ ಖಾಲಿ ಬಾಟಲಿಯಲ್ಲಿ ಅಂಗಡಿಗಳ ಮಾಲೀಕರು ಪೆಟ್ರೋಲ್ ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಿದ್ದು, ಅಳತೆಯಲ್ಲಿನ ವ್ಯತ್ಯಾಸದ ಬಗ್ಗೆ ಕೇಳಿದರೆ, ಪೆಟ್ರೋಲ್ ನೀಡಲು ನಿರಾಕರಿಸುತ್ತಾರೆ. ಹೀಗಾಗಿ, ಬೇರೆ ದಾರಿ ಇಲ್ಲದೆ  ಪೆಟ್ರೋಲ್ ಹಾಕಿಸಿಕೊಳ್ಳಬೇಕಾಗುತ್ತದೆ’ ಎಂದು  ದ್ವಿಚಕ್ರವಾಹನ ಸವಾರರು ಹೇಳುತ್ತಾರೆ.

ADVERTISEMENT

‘ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟ ಮಾಡುವ ಪೆಟ್ರೋಲ್‌ಗೆ ನಿಗದಿತ ಬೆಲೆ ಇಲ್ಲ. ಮಾಲೀಕರು ನಿಗದಿಪಡಿಸಿದ್ದೇ  ದರ.  ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್‌ ಹಾಕುವುದರಿಂದ ಬೈಕ್‌ಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತವೆ.  ಹಲವು ದಿನಗಳಿಂದ ಈ ವ್ಯಾಪಾರ ನಡೆಯುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂಬ ದೂರುಗಳು ಕೇಳಿಬರುತ್ತಿವೆ.

‘ಕಿರಾಣಿ ಅಗಂಡಿ, ಪಾನ್‌ಶಾಪ್ ಸೇರಿದಂತೆ ಇತರೆ ಅಂಗಡಿಗಳ ಮಾಲೀಕರು, ವಾಹನಗಳಿಗೆ ಪೆಟ್ರೋಲ್ ಹಾಕಿ  ಕೈ ಸ್ವಚ್ಛಗೊಳಿಸದೆ  ಹಾಗೆಯೇ ಇತರ ವಸ್ತುಗಳನ್ನು ಗ್ರಾಹಕರಿಗೆ ನೀಡುತ್ತಾರೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಈ ರೀತಿ ಪೆಟ್ರೋಲ್ ಮಾರಾಟ ಮಾಡುವ ದಂಧೆಗೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು’ ಎಂದು  ವಾಹನ ಸವಾರ ಬಸವರಾಜ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.