ADVERTISEMENT

ಬರ ಪರಿಹಾರ ವಿತರಿಸದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:04 IST
Last Updated 17 ಮೇ 2017, 6:04 IST

ರಾಯಚೂರು: ಕೇಂದ್ರ ಸರ್ಕಾರವು ಬರ ಪರಿಹಾರವೆಂದು ಬಿಡುಗಡೆ ಮಾಡಿರುವ ಹಣದಲ್ಲಿ ಇನ್ನೂ ₹580.62 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರ ರೈತರಿಗೆ ವಿತರಿಸಿಲ್ಲ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬರ ಪರಿಹಾರ ಕಾಮಗಾರಿ ಪರಿಶೀಲನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ರಾಜ್ಯ ಸರ್ಕಾರದ ಮನವಿ ಮತ್ತು ತನಿಖಾ ತಂಡದ ವರದಿ ಆಧರಿಸಿ ಕೇಂದ್ರ ಸರ್ಕಾರವು 2017 ಜನವರಿ 6ರಂದು ₹1782.44 ಮಂಜೂರು ಮಾಡಿತ್ತು. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಮಾರ್ಚ್‌ 31ರಂದು ₹1685.52 ಕೋಟಿ ಹಣವನ್ನು ಕೇಂದ್ರ ಬಿಡುಗಡೆ ಮಾಡಿದೆ. ಅದರಲ್ಲಿ ಕೇವಲ ₹1104.6 ಕೋಟಿ ಮಾತ್ರ ವಿತರಣೆಯಾಗಿದೆ’ ಎಂದು ಹೇಳಿದರು.

‘ರಾಯಚೂರು ಜಿಲ್ಲೆಯ 40,542 ರೈತರ ಪೈಕಿ 28,149 ರೈತರಿಗೆ ಪರಿಹಾರ ಸಿಕ್ಕಿದೆ. ಇನ್ನೂ 12,403 ರೈತರಿಗೆ ಪರಿಹಾರ ವಿತರಿಸಿಲ್ಲ. ಜಿಲ್ಲೆಗೆ ಒಟ್ಟು ₹30 ಕೋಟಿ ಪರಿಹಾರ ಬಂದಿದೆ. ಅದರಲ್ಲಿ ₹16.18 ಕೋಟಿ ಮಾತ್ರ ವಿತರಿಸಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ವಿಡಿಯೊ ಕಾನ್ಫರೆನ್ಸ್‌ ಮಾಡುವುದರಿಂದ ಕೆಲಸಗಳಾಗುವುದಿಲ್ಲ. ಅಧಿಕಾರಿಗಳಿಗಿಂತ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ತಿಳಿಸಿದರು.

ADVERTISEMENT

‘ರೈತರ ಬಗ್ಗೆ ಕಾಂಗ್ರೆಸ್‌ ಸರ್ಕಾರಕ್ಕೆ ಕಾಳಜಿ ಇಲ್ಲ. ದಲಿತರ ಪರ ಮತ್ತು ಹಿಂದುಳಿದವರ ಪರ ಎನ್ನುವ ಭಾಷಣ ಮಾಡುವುದಷ್ಟೆ ಕಾಂಗ್ರೆಸ್‌ ನಾಯಕರಿಗೆ ಗೊತ್ತು. ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣ ಕೂಡಾ ಸಂಪೂರ್ಣ ವೆಚ್ಚ ಮಾಡಿಲ್ಲ. ದಲಿತರಿಗೂ ಮತ್ತು ಹಿಂದುಳಿದವರಿಗೂ ಸರ್ಕಾರ ಅನ್ಯಾಯ ಮಾಡಿದೆ’ ಎಂದರು.

‘ಕೇಂದ್ರ ಸರ್ಕಾರವು ಕೊಟ್ಟಿರುವ ಪರಿಹಾರ ವಿತರಿಸುವುದಕ್ಕೂ ವಿಳಂಬ  ಮಾಡಲಾಗುತ್ತಿದೆ. ಲೋಕಸಭೆಯಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮಸೂದೆ ಅನುಮೋದನೆ ಗೊಂಡಿದೆ. ರಾಜ್ಯಸಭೆಯಲ್ಲಿ ಅನು ಮೋದನೆ ಬಾಕಿ ಇದೆ.  ರಾಜ್ಯ ಸರ್ಕಾರವು ಹಿಂದುಳಿದವರ ಪರ ಕಾಯ್ದೆ ಜಾರಿಗೊಳಿಸಬೇಕು’  ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಾಲ ಮನ್ನಾ ಹೇಗಾ ಗಿದೆ ಎಂಬುದನ್ನು ನೋಡಿಕೊಂಡು ಬರಲಿ. ಕನಿಷ್ಠ ಪಕ್ಷ ರಾಜ್ಯ ಸರ್ಕಾರವು ತನ್ನ ಪಾಲಿನ ರೈತರ ಸಾಲಮನ್ನಾ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಹೇಳಿದರು.

*

ದಲಿತರು ಮತ್ತು ಹಿಂದುಳಿದವರನ್ನು ತಾತ್ಸಾರದಿಂದ ನೋಡದೆ ಅವರಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು
ಕೆ.ಎಸ್‌.ಈಶ್ವರಪ್ಪ
ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.