ADVERTISEMENT

ಬೆಳೆಹಾನಿ: ಸಮರ್ಪಕ ಪರಿಹಾರಕ್ಕೆ ಆಗ್ರಹ

ರಾಯಚೂರು: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ರೈತರ ಸಂಕಷ್ಟ ಪ್ರಸ್ತಾಪಿಸಿದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 7:24 IST
Last Updated 23 ಮಾರ್ಚ್ 2017, 7:24 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ ಸೇರಿದಂತೆ ಸದಸ್ಯರೆಲ್ಲ ಬಹಿಷ್ಕರಿಸಿ ಹೊರಬಂದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ ಸೇರಿದಂತೆ ಸದಸ್ಯರೆಲ್ಲ ಬಹಿಷ್ಕರಿಸಿ ಹೊರಬಂದರು.   

ರಾಯಚೂರು: ಜಿಲ್ಲೆಯಲ್ಲಿ ಮುಂಗಾರು  ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಹಾನಿ ಅನುಭವಿಸಿದ ರೈತರಿಗೆಲ್ಲ ಸೂಕ್ತ ಮತ್ತು ಶೀಘ್ರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು.
ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ರೈತರನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆದಿದ್ದರೆ ಎಲ್ಲವೂ ಸರಿಯಾಗಿ ಇರುತ್ತಿತ್ತು.

ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಬರುವಂತೆ ರೈತರಿಗೇ ಅಧಿಕಾರಿಗಳು ಸೂಚಿಸುತ್ತಿರುವುದರಿಂದ ರೈತರು ಬಸವಳಿದು ಹೋಗಿದ್ದಾರೆ. ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಹಾಗೂ ಇತ್ಯಾದಿಗಳಲ್ಲಿ ಸಣ್ಣ ದೋಷಗಳನ್ನು ಸರಿಪಡಿಸಿಕೊಳ್ಳಲು ರೈತರು ಪರಿಹಾರ ಮೊತ್ತಕ್ಕಿಂತ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್‌.ಕೇಶವರೆಡ್ಡಿ, ಸಂಗಪ್ಪ ಸೇರಿದಂತೆ ಅನೇಕರು ರೈತರ ಸಂಕಷ್ಟಗಳನ್ನು ಪ್ರಸ್ತಾಪಿಸಿದರು.

ಅಸಮರ್ಪಕ ಬೆಳೆಹಾನಿ ಸಮೀಕ್ಷೆ ಆಗಿರುವುದರಿಂದ ಮಾಹಿತಿ ಹೊಂದಾಣಿಕೆ ಆಗುತ್ತಿಲ್ಲ. ಗರಿಷ್ಠ 2 ಹೆಕ್ಟೇರ್‌ ಬೆಳೆಹಾನಿಗೆ ಪರಿಹಾರ ಕೊಟ್ಟರೆ, ಹೆಚ್ಚು ಬೆಳೆಹಾನಿ ಅನುಭವಿಸಿದ ರೈತರ ಪರಿಸ್ಥಿತಿ ಏನು? ಗೊಂಚಲು ಗ್ರಾಮ ಯೋಜನೆಯಡಿ ಗ್ರಾಮಗಳನ್ನು ಆಯ್ಕೆ ಮಾಡಿ ಒಂಭತ್ತು ತಿಂಗಳಾದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಯಾವ ಸೌಲಭ್ಯವನ್ನು ಕೊಟ್ಟಿಲ್ಲ. ಕೃಷಿ ಸಲಕರಣೆಗಳ ವಿತರಣೆ ಅಗುತ್ತಿಲ್ಲ ಎಂದು ಸದಸ್ಯರು ಆಕ್ಷೇಪಿಸಿದರು.

ಜಿಲ್ಲೆಯ ವಿವಿಧೆಡೆ ಬಣವೆಗಳಿಗೆ ಬೆಂಕಿ ಬಿದ್ದಿರುವ ಪ್ರಕರಣಗಳು ದಾಖಲಾಗಿವೆ. ಗರಿಷ್ಠ ₹10 ಸಾವಿರ ಮಾತ್ರ ಪರಿಹಾರ ಕೊಟ್ಟರೆ, ಅದು ರೈತರು ಬಳಸಿದ ವಾಹನದ ಬಾಡಿಗೆ ಕೂಡಾ ಆಗುವುದಿಲ್ಲ. ಈ ಪರಿಹಾರ ತುಂಬಾ ಕಡಿಮೆ ಇದೆ. ಆಹಾರ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರವು ರೈತರಿಗೆ ಪ್ರೋತ್ಸಾಹಧನ ನೀಡುತ್ತಿದೆ. ಈ ಯೋಜನೆ ಜಿಲ್ಲೆಯಲ್ಲಿ ಬಳಸಿಕೊಳ್ಳುವ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಶಾಲಾ ಪೀಠೋಪಕರಣಗಳ ಖರೀದಿಗಾಗಿ ಸರ್ಕಾರವು ಒದಗಿಸಿದ್ದ ₹5 ಕೋಟಿ ಅನುದಾನವನ್ನು ಇನ್ನೂ ಏಕೆ ಬಳಸಿಲ್ಲ. ಈಚೆಗೆ ಬಿದ್ದಿರುವ ಮಳೆಯಿಂದ ಅನೇಕ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು, ಕೂಡಲೇ ಅವುಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪರಿಹಾರ ವಿತರಣೆ: ಸರ್ಕಾರದಿಂದ ಒಟ್ಟು ₹6.3 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆಯಾಗಿದೆ. ಆಧಾರ್‌ ಕಾರ್ಡ್‌ ಲಿಂಕ್‌ ಆಗಿರುವ 10,807 ರೈತರಿಗೆ ಈಗಾಗಲೇ ಪರಿಹಾರವನ್ನು ಆರ್‌ಟಿಜಿಎಸ್‌ ಮೂಲಕ ಜಮಾ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕಿರಣಕುಮಾರ್‌ ಸಭೆಯಲ್ಲಿ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅವರು ಶಾಲಾ ಕೊಠಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ನೀಡಿದರು.

ನೀರಿಗಾಗಿ ಸಭೆ ಬಹಿಷ್ಕಾರ
ಬರಗಾಲದಿಂದ ಜಿಲ್ಲೆಯಲ್ಲಿ ಜನರು ನೀರಿಗಾಗಿ ತತ್ತರಿಸುತ್ತಿದ್ದು, ಕೂಡಲೇ ಅಧಿಕಾರಿಗಳು ಸರ್ಕಾರ ಕೊಟ್ಟಿರುವ ಅನುದಾನ ಬಳಸಿ ನೀರು ಒದಗಿಸಬೇಕು. ಶುದ್ಧ ನೀರಿನ ಘಟಕ ಏಜೆನ್ಸಿಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೇರಿದಂತೆ ಬಹುತೇಕ ಸದಸ್ಯರು ಸಭೆಯನ್ನು ಆರಂಭದಲ್ಲೆ ಬಹಿಷ್ಕರಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ADVERTISEMENT

ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಆನಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾ ರಾವ್‌ ಅವರು ಪ್ರತ್ಯೇಕ ಸಭೆ ನಡೆಸಿ ಮನವೊಲಿಸಿದರು. ಸಭೆಯು ಎರಡು ಗಂಟೆ ತಡವಾಗಿ ಆರಂಭವಾಯಿತು.

ನಿಯಮಾನುಸಾರ ಕ್ರಮ: ಸಿಇಒ
ಸರ್ಕಾರದ ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಬ್ಯಾಂಕ್‌ ಖಾತೆ, ಆಧಾರ್‌ ಮತ್ತು ಇತರೆ ದಾಖಲೆಗಳನ್ನು ಲಿಂಕ್‌ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಬೆಳೆಹಾನಿಯಾದ ರೈತರಿಗೆ ಸರ್ಕಾರದಿಂದ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಪರಿಹಾರ ನೀಡಲಾಗುವುದು.

ಪ್ರಧಾನ್‌ ಮಂತ್ರಿ ಫಸಲ್‌ ಬೀಮಾ ಯೋಜನೆಯಲ್ಲಿ ಮಾತ್ರ ಬೆಳೆಹಾನಿ ಎಲ್ಲ ಜಮೀನಿಗೂ ಪರಿಹಾರ ಸಿಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾ ರಾವ್‌ ಹೇಳಿದರು.

ತಾಂತ್ರಿಕ ದೋಷಗಳನ್ನು ಸರಿಪಡಿಸುವುದಕ್ಕೆ ಅಧಿಕಾರಿಗಳು ರೈತರನ್ನು ಅಲೆಯುವಂತೆ ಮಾಡಿದ ಪ್ರಸಂಗಗಳು ಗಮನಕ್ಕೆ ಬಂದಿವೆ. ದೋಷ ಸರಿಪಡಿಸುವುದು ಅಧಿಕಾರಿಗಳ ಕೆಲಸ. ಕೂಡಲೇ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕು. ದಾಖಲೆಗಳನ್ನು ಹೊಂದಾಣಿಕೆ ಮಾಡಿ, ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಇದೇ ಮೊದಲ ಬಾರಿಗೆ ಬೆಳೆ ಕಟಾವು ಪ್ರಯೋಗವನ್ನು ವಿಡಿಯೋ ಹಾಗೂ ಜಿಪಿಎಸ್‌ ಮೂಲಕ ಮಾಡಲಾಗಿದೆ. ಶೇ 75 ರಷ್ಟು ರೈತರು ಬೆಳೆವಿಮೆ ಮಾಡಿಸಿದ್ದಾರೆ. ವಿವಿಧ ಪರಿಹಾರ ಮೊತ್ತ ಹೆಚ್ಚಿಸಬೇಕೆನ್ನುವ ಸದಸ್ಯರ ಅಭಿಮತವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು.  ಜಿಲ್ಲೆಯಲ್ಲಿ ಪರಿಸ್ಥಿತಿ ಬೇರೆ ಇದ್ದು, ಈ ಬಗ್ಗೆ ಪತ್ರ ಬರೆದು ವಿಶೇಷ ಅನುದಾನ ಕೋರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.