ADVERTISEMENT

ಭಾರಿ ಗಾಳಿ, ಮಳೆ: ನೆಲಕ್ಕುರುಳಿದ 80 ವಿದ್ಯುತ್‌ ಕಂಬ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 5:20 IST
Last Updated 17 ಮಾರ್ಚ್ 2017, 5:20 IST
ಮಸ್ಕಿ ಸಮೀಪದ ಜಮೀನೊಂದರಲ್ಲಿ ವಿದ್ಯುತ್‌ ಕಂಬ ಮುರಿದು ಬಿದ್ದಿರುವುದು.
ಮಸ್ಕಿ ಸಮೀಪದ ಜಮೀನೊಂದರಲ್ಲಿ ವಿದ್ಯುತ್‌ ಕಂಬ ಮುರಿದು ಬಿದ್ದಿರುವುದು.   

ಮಸ್ಕಿ: ಮಸ್ಕಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬುಧವಾರ ರಾತ್ರಿ ಭಾರಿ ಗಾಳಿಯಿಂದ ಕೂಡಿದ ಗುಡುಗು, ಸಿಡಿಲಿನ ಮಳೆಯಾಗಿದೆ. ಇದರಿಂದಾಗಿ ಮಸ್ಕಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ 80ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್‌ ಪೂರೈಕೆಯಲ್ಲಿ ಅಸ್ತವ್ಯಸ್ಥ ಉಂಟಾಗಿದೆ.

ರಾತ್ರಿ 9 ಗಂಟೆ ವೇಳೆಗೆ ಪಟ್ಟಣದಲ್ಲಿ ಉಂಟಾದ ಭಾರಿ ಗಾಳಿಗೆ ಅಂಗಡಿಗಳ ಮುಂಭಾಗದ ಚಾವಣಿಗಳು ಹಾರಿ ಹೋಗಿವೆ. ಮುಖ್ಯ ರಸ್ತೆಯ ಪಕ್ಕದಲ್ಲಿ ಹಾಕಲಾಗಿದ್ದ ನಾಟಕ ಕಂಪೆನಿಯ ಮೇಲ್ಛಾವಣಿಯ ತಗಡುಗಳು ಕಿತ್ತು ಹೋಗಿವೆ.

ಗುಡುಗು, ಸಿಡಿಲು ಸಹಿತ ಮಳೆಗೆ ಹೆದ್ದಾರಿ ಪಕ್ಕದ ಕೆಲ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡುವಂತಾಯಿತು. ಕೆಲ ವಾರ್ಡ್‌ಗಳ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯವರು ರಾತ್ರಿ ಇಡೀ ನೀರು ಹೊರ ಹಾಕಲು ಶ್ರಮ ಪಡಬೇಕಾಯಿತು.

ADVERTISEMENT

ಗಾಳಿ ಮಳೆಯಿಂದಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 80ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಮೂರು ವಿದ್ಯುತ್‌ ಪರಿವರ್ತಕಗಳು ನೆಲಕ್ಕೆ ಬಿದ್ದಿದ್ದು ವಿದ್ಯುತ್‌ ಪೂರೈಕೆಗೆ ತೊಂದರೆಯಾಗಿದೆ ಎಂದು ಜೆಸ್ಕಾಂನ ಮಸ್ಕಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿ ಯರ್‌ ಸೈಯದ್‌ ರಿಯಾಜ್‌ ತಿಳಿಸಿದ್ದಾರೆ.

ಬುಧವಾರ ಇಡೀ ರಾತ್ರಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಜೆಸ್ಕಾಂ ಸಿಬ್ಬಂದಿ ಕೆಲಸ ಮಾಡಿದೆ. ಮೂರು ನಾಲ್ಕು ದಿನಗಳಲ್ಲಿ ಮುರಿದ ಕಂಬಗಳನ್ನು ಬದಲಾಯಿಸಿ ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದಾದ ಉಂಟಾದ ನಷ್ಟದ ಬಗ್ಗೆ ಗ್ರಾಮ ಲೆಕ್ಕಾಧಿ ಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವುದು ಎಂದು ವಿಶೇಷ ತಹಶೀಲ್ದಾರ ಅನೀಲ ಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.