ADVERTISEMENT

‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:30 IST
Last Updated 19 ಮೇ 2017, 5:30 IST

ಲಿಂಗಸುಗೂರು: ಕಡ್ಡಾಯ ಮತ್ತು ಉಚಿತ ಶಿಕ್ಷಣ ಯೋಜನೆಯಡಿ ಮಕ್ಕಳನ್ನು  ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಹೇಳಿದರು.

ನೀರಲಕೇರಿ ಗ್ರಾಮದಲ್ಲಿ ವಿಶೇಷ ಮತ್ತು ಸಾಮಾನ್ಯ ದಾಖಲಾತಿ ಆಂದೋಲನ ಉದ್ಘಾಟಿಸಿ ಈಚೆಗೆ ಮಾತನಾಡಿ, ‘5ವರ್ಷ 10 ತಿಂಗಳ ಪ್ರತಿಯೊಂದು ಮಗುವನ್ನು ಕಡ್ಡಾಯವಾಗಿ ಶಾಲೆಗೆ ದಾಖಲಾತಿ ಮಾಡಬೇಕು. ಶಾಲೆಯಿಂದ ದೂರ ಉಳಿದ, ಬಾಲ ಕಾರ್ಮಿಕ ಸೇರಿದಂತೆ ಶಿಕ್ಷಣದಿಂದ ವಂಚಿತ ಎಲ್ಲ ಮಕ್ಕಳನ್ನು ಗುರುತಿಸಬೇಕು’ ಎಂದು ಹೇಳಿದರು.

ಬಿಆರ್‌ಪಿ ಶರಣಬಸವ ಮಾತನಾಡಿ, ‘ಸರ್ಕಾರ   ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಪಾಲಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು’ ಎಂದು ಕೋರಿದರು.

ADVERTISEMENT

ಮನೆ ಮನೆಗೆ ಭೇಟಿ: ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ವಿಶೇಷ ದಾಖಲಾತಿ ಆಂದೋಲನ  ಕುರಿತು ಜಾಗೃತಿ ಮೂಡಿಸಲಾಯಿತು.

ಶಿಕ್ಷಣ ಸಂಯೋಜಕ ಶರಣಪ್ಪ ಗುಳೆದ, ಸಿಆರ್‌ಪಿ ವಿನಯಕುಮಾರ, ಗ್ರಾಮ ಪಂಚಾಯಿತಿ ಸದಸ್ಯ ಅಮರೇಶಪ್ಪ ದಳಪತಿ, ಮುಖಂಡರಾದ ಚಂದ್ರಶೇಖರ ದೇಶಮುಖ, ಬಸವರಾಜ ಭೂಪುರ, ಮುಖ್ಯ ಶಿಕ್ಷಕ ಮಹಾಂತೇಶ ಸುರಪುರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.