ADVERTISEMENT

ಮರಳು ನೀತಿಯಲ್ಲಿ ಬದಲಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:06 IST
Last Updated 17 ಜುಲೈ 2017, 5:06 IST

ರಾಯಚೂರು: ‘ಮರಳು ನೀತಿ ಉಲ್ಲಂಘಿಸಿ ಅಕ್ರಮ ಮರಳು ಸಾಗಣೆ ನಡೆಯುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ’ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಭಂಗಿ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವೈಜ್ಞಾನಿಕ ಮರಳು ನೀತಿಯಿಂದ ಕೃಷ್ಣಾ ನದಿಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದು ಪರಿಸರಕ್ಕೆ ಹಾನಿಯಾಗುತ್ತಿದೆ. ನದಿಯ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಅಂತರ್ಜಲಮಟ್ಟ ಕುಸಿಯುತ್ತಿದೆ. ಕುಡಿಯುವ ನೀರಿಗೂ ತೊಂದರೆ ಉಂಟಾಗುವ ಸಂಭವವಿದೆ’ ಎಂದು ದೂರಿದರು.

‘ಮರಳು ನೀತಿಯಲ್ಲಿ ಸಮಗ್ರವಾಗಿ ಬದಲಾವಣೆ ತಂದು ಕೂಲಿಕಾರ್ಮಿಕರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಸುಲಭವಾಗಿ ಮರಳು ದೊರೆಯುವಂತಾಗಬೇಕು. ಪ್ರಭಾವಿ ಗುತ್ತಿಗೆದಾರರು ಜೆಸಿಬಿ ಯಂತ್ರಗಳ ಮೂಲಕ ಮರಳು ಗಣಿಗಾರಿಕೆ ನಡೆಸುತ್ತಿದ್ದು, ಯಂತ್ರಗಳ ಮೂಲಕ ಮರಳು ಗಣಿಗಾರಿಕೆ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮರಳು ಸಾಗಣೆಯನ್ನು ಆಯಾ ಜಿಲ್ಲೆಗೆ ಸೀಮಿತಗೊಳಿಸಬೇಕು. ರಾತ್ರಿ ವೇಳೆ ಮರಳು ಗಣಿಗಾರಿಕೆಗೆ ನಿಷೇಧ ಹೇರಬೇಕು. ನೂರಾರು ಮರಳು ಲಾರಿಗಳು ಸಂಚರಿಸುತ್ತಿದ್ದು, ಮಿತಿ ಹೇರಬೇಕು. ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.