ADVERTISEMENT

‘ಮುಖ್ಯಮಂತ್ರಿ ಗ್ರಾಮ ವಿಕಾಸ’ 26 ಗ್ರಾಮಗಳು ಆಯ್ಕೆ

ಪಿ.ಹನುಮಂತು
Published 22 ನವೆಂಬರ್ 2017, 5:56 IST
Last Updated 22 ನವೆಂಬರ್ 2017, 5:56 IST

ರಾಯಚೂರು: 2017–18ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ ‘ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ’ಗೆ ರಾಯಚೂರು ಜಿಲ್ಲೆಯಿಂದ 26 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯ ಸರ್ಕಾರವು ಗ್ರಾಮಗಳ ಆಯ್ಕೆಯನ್ನು ಅನುಮೋದಿಸಿ ಅನುದಾನವನ್ನೂ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಪ್ರತಿ ಗ್ರಾಮಕ್ಕೆ ಒಂದು ಕೋಟಿ ರೂಪಾಯಿ ಅನುದಾನ ದೊರೆಯಲಿದೆ. ಈ ಯೋಜನೆಯೊಂದಿಗೆ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸಿಕೊಳ್ಳಬೇಕಿದೆ. ಮುಂದಿನ ಎರಡು ವರ್ಷಗಳಲ್ಲಿ ಗ್ರಾಮವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಮಾಡಬೇಕು ಎನ್ನುವ ಗುರಿ ನೀಡಲಾಗಿದೆ.

ರಾಜ್ಯದಾದ್ಯಂತ ಒಂದು ಸಾವಿರ ಗ್ರಾಮಗಳಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಅನುಷ್ಠಾನದ ಹೊಣೆ ವಹಿಸಲಾಗಿದೆ. ಗ್ರಾಮ ಪಂಚಾಯಿತಿಗಳು ವಾರ್ಡ್‌ಸಭೆ/ ಗ್ರಾಮ ಸಭೆಗಳನ್ನು ಮಾಡಿಕೊಂಡು ಗ್ರಾಮಾಭಿವೃದ್ಧಿಗಾಗಿ ಯೋಜನೆಯನ್ನು ತಯಾರಿಸಬೇಕು. ಯೋಜನೆಯ ರೂಪುರೇಷೆಗೆ ಅನುಮೋದನೆ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಯಿಂದ ಬರುವ ಕ್ರಿಯಾ ಯೋಜನೆಯನ್ನು ಯಾವುದೇ ವಿಳಂಬವಿಲ್ಲದೆ ಅನುಮೋದನೆ ನೀಡುವಂತೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ.

ADVERTISEMENT

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೊನಿಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ಪ್ರತ್ಯೇಕವಾಗಿ ಕಡ್ಡಾಯವಾಗಿ ತಯಾರಿಸಬೇಕು. ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಮಾತ್ರ ಅನುದಾನ ವಿನಿಯೋಗಿಸಬೇಕು.

ಅನುದಾನ ಬಿಡುಗಡೆಯ ಆದೇಶವನ್ನು ಪಡೆದ ಕೂಡಲೇ ಖಜಾನೆಯಿಂದ ಅನುದಾನ ಸೆಳೆದು ಖಾತೆಯಲ್ಲಿ ಇಟ್ಟುಕೊಳ್ಳಬೇಕು. ಪ್ರಗತಿ ಆಧರಿಸಿ ಕೂಡಲೇ ಬೇಡಿಕೆ ಪಡೆದು ಗ್ರಾಮ ಪಂಚಾಯಿತಿಗಳಿಂದ ತೆರೆಯಲಾದ ಪ್ರತ್ಯೇಕ ಬ್ಯಾಂಕ್‌ ಖಾತೆಗೆ ವಿಳಂಬವಾಗದಂತೆ ಇಎಫ್‌ಎಂಎಸ್‌/ ಆರ್‌ಟಿಜಿಎಸ್‌ ಮೂಲಕ ಅನುದಾನವನ್ನು ಒಂದು ವಾರದೊಳಗೆ ಕಡ್ಡಾಯವಾಗಿ ಜಮಾ ಮಾಡಬೇಕು.

ಕಾಮಗಾರಿಗಳಿಗೆ ಮೊತ್ತ ಪಾವತಿ ಮಾಡುವಾಗ ಪ್ರಗತಿಯ ಎಲ್ಲ ವಿವರಗಳನ್ನು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸಿ, ಆನಂತರವೇ ಬಿಲ್ಲು ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಯಾವ ಗ್ರಾಮಗಳು ಆಯ್ಕೆಯಾಗಿವೆ: ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಿರ್ಜಾಪುರ, ಗುಂಜಳ್ಳಿ, ಪುರತಿಪ್ಲಿ ಹಾಗೂ ಕಟ್ಲಟ್ಕೂರು, ಮಾನ್ವಿ ಕ್ಷೇತ್ರ ವ್ಯಾಪ್ತಿಯ ಹಿರೆಬಾದರದಿನ್ನಿ, ಅಮರಾವತಿ, ಹಿರೇಕೊಟ್ನೇಕಲ್‌ ಮತ್ತು ಕಾತರಕಿ, ಸಿಂಧನೂರು ಕ್ಷೇತ್ರ ವ್ಯಾಪ್ತಿಯ ದಢೇಸ್ಗೂರು, ಉಪ್ರಾಳ, ಗೋಮರ್ಸಿ ಹಾಗೂ ಗಿಣಿವಾರ, ಲಿಂಗಸುಗೂರು ಕ್ಷೇತ್ರ ವ್ಯಾಪ್ತಿಯ ವಂದಲಿ ಹೊಸೂರು, ಹಾಲಭಾವಿತಾಂಡ, ಮಾಚನೂರು ಮತ್ತು ಮಾಕಾಪುರ, ಮಸ್ಕಿ ಕ್ಷೇತ್ರ ವ್ಯಾಪ್ತಿಯ ಗದ್ರಟಗಿ, ಚಿಲ್ಕರಾಗಿ, ಬುದ್ದಿನ್ನಿ ಮತ್ತು ಹಿರೇಬೇರಗಿ, ದೇವದುರ್ಗ ಕ್ಷೇತ್ರ ವ್ಯಾಪ್ತಿಯ ಬಿ.ಆರ್.ಗುಂಡ, ಗುಂಡಗುರ್ತಿ, ನವಲಿಗುಡ್ಡ, ಮದರಕಲ್‌ ಗ್ರಾಮಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ, ದೇವದುರ್ಗ ಕ್ಷೇತ್ರದಿಂದ ಐದು ಗ್ರಾಮಗಳನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಅದರಲ್ಲಿ ಪಲಕನಮರಡಿ ಗ್ರಾಮಕ್ಕೆ ಅನುಮೋದನೆ ಸಿಕ್ಕಿಲ್ಲ.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಅವರು ಮಾನ್ವಿ ತಾಲ್ಲೂಕಿನ ಜೀನೂರು,  ಬಸವರಾಜ ಪಾಟೀಲ ಇಟಗಿ ಅವರು ಜಾಲಹಳ್ಳಿ ಗ್ರಾಮ ಆಯ್ಕೆ ಮಾಡಿಕೊಂಡಿದ್ದಾರೆ.

ಗ್ರಾಮಗಳ ಆಯ್ಕೆಗೆ ಮಿತಿ
ಈ ಯೋಜನೆಗೆ ಗ್ರಾಮಗಳ ಆಯ್ಕೆಗೆ ವಿಧಾನಸಭಾ ಸದಸ್ಯರಿಗೆ ತಲಾ ನಾಲ್ಕು ಮಿತಿ ನೀಡಲಾಗಿದೆ. ವಿಧಾನ ಪರಿಷತ್‌ ಸದಸ್ಯರಿಗೆ ತಲಾ ಒಂದು ಗ್ರಾಮದ ಆಯ್ಕೆ ಮಿತಿ ನೀಡಲಾಗಿದೆ. ಗ್ರಾಮಗಳ ಸಂಖ್ಯೆ ಕಡಿಮೆ ಮಾಡಿಕೊಂಡಿದ್ದರೂ ದೊರೆಯುವ ಅನುದಾನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎನ್ನುವ ನಿಯಮ ಮಾಡಲಾಗಿದೆ.

* * 

ಗ್ರಾಮಗಳ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು, ಇದಕ್ಕಾಗಿ ಯೋಜನೆ ತಯಾರಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದ್ದು, ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ಕೊಡಲಾಗುವುದು.
 ವೈ.ಎಂ.ಮೊಹಮ್ಮದ್‌ ಯೂಸೂಫ್‌,
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.