ADVERTISEMENT

ವಿದ್ಯಾರ್ಥಿನಿಯರ ಪ್ರತಿಭಟನೆ

ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಮೂಲಸೌಲಭ್ಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 6:35 IST
Last Updated 21 ಜನವರಿ 2017, 6:35 IST
ಲಿಂಗಸುಗೂರು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು
ಲಿಂಗಸುಗೂರು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು   

ಲಿಂಗಸುಗೂರು: ಇಲ್ಲಿನ ಸರ್ಕಾರಿ ತೋಟದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದ ಮೇಲ್ವಿಚಾರಣೆ ಮತ್ತು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದೆ ಎಂದು ಗುರುವಾರ  ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಅಗತ್ಯ ಸೌಲಭ್ಯವಿಲ್ಲದೆ ಸಮಸ್ಯೆಯಾಗಿದ್ದು, ಮೇಲ್ವಿಚಾರಕರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರ, ಅಸಮರ್ಪಕ ವಿದ್ಯುತ್‌ ಸೌಲಭ್ಯದಿಂದ ಸಮಸ್ಯೆಯಾಗಿದೆ. 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇರುವ ವಸತಿ ನಿಲಯದಲ್ಲಿ ಕೇವಲ ಎರಡು ಶೌಚಾಲಯ, ಸ್ನಾನಗೃಹ ಇವೆ. ಅವುಗಳು  ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತಿವೆ. ಕಂಪೌಂಡ್‌ ಇಲ್ಲದೆ ರಕ್ಷಣೆ ಭಯ ಕಾಡುತ್ತಿದೆ ಎಂದು ದೂರಿದರು.

ಶುದ್ಧ ಕುಡಿಯುವ ನೀರಿಲ್ಲ. ಕೊಠಡಿಗಳ ಮತ್ತು ಆವರಣದ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬರುತ್ತಿದೆ. ನಿಯಮಾನುಸಾರ ನೀಡುವ ಯಾವ ಸೌಲಭ್ಯಗಳು ತಮಗೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಮುಖಂಡರಾದ ಕಾವೇರಿ, ಬಸಲಿಂಗಮ್ಮ, ಜ್ಯೋತಿ, ಪಾರ್ವತಿ, ಸುಲೋಚನಾ, ಅಮರಮ್ಮ, ಮಲ್ಲಿಕಾ ಭಾಗವಹಿಸಿದ್ದರು. ಪ್ರತಿಭಟನೆ ಬೆಂಬಲಿಸಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಅಂಬಣ್ಣ ಬೆನಕನಾಳ, ಹುಲಗಪ್ಪ ಕುಣಿಕೆಲ್ಲೂರು, ಮೌನೇಶ ಐದನಾಳ, ಬಸವರಾಜ ಕುಣಿಕೆಲ್ಲೂರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.