ADVERTISEMENT

ವೈದ್ಯರ ಕೊರತೆ: ರೋಗಿಗಳ ಪರದಾಟ 

ಚಿಕಿತ್ಸೆಗಾಗಿ ಕಾಯುತ್ತಿದೆ ಆನ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:08 IST
Last Updated 16 ಜನವರಿ 2017, 8:08 IST
ವೈದ್ಯರ ಕೊರತೆ: ರೋಗಿಗಳ ಪರದಾಟ 
ವೈದ್ಯರ ಕೊರತೆ: ರೋಗಿಗಳ ಪರದಾಟ    

ಹಟ್ಟಿ ಚಿನ್ನದ ಗಣಿ: ಸಮೀಪದ ಆನ್ವರಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೆ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಆದ್ದರಿಂದ, ಅನಿವಾರ್ಯ ವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ.

ಆನ್ವರಿ ಗ್ರಾಮವುದಲ್ಲಿ ಸುಮಾರು 10 ಸಾವಿರ ಜನ ಸಂಖ್ಯೆ ಇದೆ. ಇಲ್ಲಿ ಮೂರು ದಶಕದ ಹಿಂದೆ ಆರು ಹಾಸಿಗೆಗಳ ಆರೋಗ್ಯ ಕೇಂದ್ರ ಆರಂಭಿ­ಸಲಾಗಿದೆ. ಈ ಆರೋಗ್ಯ ಕೇಂದ್ರಕ್ಕೆ ಆನ್ವರಿ ಸೇರಿದಂತೆ ಹಿರೇ ನಗನೂರು, ಚುಕನಟ್ಟಿ, ರೋಡಲಬಂಡಾ, ತವಗ, ಕಡ್ಡೋಣಿ, ಮಲ್ಲಾಪುರ, ಮಲ್ಲಾಪುರ ಕ್ಯಾಂಪ್‌, ವಂದಲಿಹೊಸೂರು ಗ್ರಾಮ ಗಳಿಂದ ನಿತ್ಯ 60 ರಿಂದ 80 ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ, ಆರು ತಿಂಗಳಿಂದ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೆ ಬಡಜನರು ಉಚಿತ ಚಿಕಿತ್ಸೆಯಿಂದ ವಂಚಿತರಾಗಿ ದ್ದಾರೆ.  ಉಳ್ಳವರು ಸಮೀಪದ ಹಟ್ಟಿ ಚಿನ್ನದ ಗಣಿಯಲ್ಲಿರುವ ಖಾಸಗಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಬಡವರ ಸ್ಥಿತಿ ಏನು ಎಂಬುದು ಸ್ಥಳೀಯರ ಪ್ರಶ್ನೆ.

‘ಪ್ರತಿ ಗುರುವಾರ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗಾಗಿ ವಿಶೇಷ ತಪಾಸಣೆ ನಡೆಯುತ್ತದೆ. ಕಳೆದ ಐದಾರು ತಿಂಗಳುಗಳಿಂದ ಆರೋಗ್ಯ ಸಹಾಯಕಿ­ಯರು ಗರ್ಭಿಣಿಯರಿಗೆ ತಪಾಸಣೆ ಮಾಡುತ್ತಿದ್ದಾರೆ. ಕೇವಲ ಮೂವರು ಆರೋಗ್ಯ ಸಹಾಯಕಿಯರು ಮಾತ್ರ ಇದ್ದು, ಅವರಿಂದ ಉತ್ತಮ ಚಿಕಿತ್ಸೆ ನಿರೀಕ್ಷಿಸಿಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಗರ್ಭಿಣಿಯೊಬ್ಬರ ತಾಯಿ.

‘ರೋಡಲಬಂಡಾ, ತವಗ, ಕಡ್ಡೋಣಿ ಗ್ರಾಮದಿಂದ ರೋಗಿಗಳು ಬರುವ ರೋಡಲಬಂಡಾ ಆನ್ವರಿ ರಸ್ತೆ  ತಗ್ಗು ದಿಮ್ಮೆಗಳಿಂದ ಕೂಡಿದೆ ಗರ್ಭಿಣಿ ಯರು ಪ್ರಯಾಣಿಸಲು ಯೋಗ್ಯವಿಲ್ಲ. ಆದ್ದರಿಂದ, ಸುತ್ತಿಬಳಸಿ ಬರಬೇಕು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕನಕಮ್ಮ, ಹನುಮಂತಿ.
ಗ್ರಾಮದಲ್ಲಿ ನಿರ್ಮಿಸಿದ ಹೈಟೆಕ್‌ ಆಸ್ಪತ್ರೆಯ ಕೆಲಸ ಮುಗಿದು ಆರು ತಿಂಗಳಾದರೂ ಇಲಾಖೆ ಇನ್ನೂ ಉದ್ಘಾಟನೆಯಾಗಿಲ್ಲ. ಆರೋಗ್ಯ ಕೇಂದ್ರ ದಲ್ಲಿ ಪ್ರಯೋಗಾಲಯ ಇಲ್ಲ. ರಕ್ತ ಪರೀಕ್ಷೆ ಗಾಗಿ ಹಟ್ಟಿ ಆರೋಗ್ಯ ಕೇಂದ್ರಕ್ಕೆ  ಕಳುಹಿ ಸಲಾಗುತ್ತಿದೆ. ಗ್ರಾಮದಲ್ಲಿ ಸರ್ಕಾರದ ಆಸ್ಪತ್ರೆ ಇದ್ದರೂ ಇಲ್ಲದಂತಾಗಿದೆ ಎಂದು ಸಿದ್ದಪ್ಪ, ನಾಗಲಿಂಗಪ್ಪ, ಗಂಗಪ್ಪ, ಅಮರೇಗೌಡ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.