ADVERTISEMENT

‘ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ ಪೂರಕ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 9:29 IST
Last Updated 2 ಜನವರಿ 2017, 9:29 IST

ಸಿಂಧನೂರು: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಎನ್ಎಸ್ಎಸ್‌ನಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾಧವರಾವ್ ಕೇಶವರಾವ್ ಗಾದಗೆ ಹೇಳಿದರು.

ತಾಲ್ಲೂಕಿನ ಜವಳಗೇರಾ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ಉದ್ಯೋಗ, ಅಧಿಕಾರ ಪಡೆಯಬಹದು. ಆದರೆ ವ್ಯಕಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಮಹತ್ತರ ಮಾತ್ರ ವಹಿಸಲಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿ, ಕೌಶಲ್ಯ, ಶ್ರಮ, ಕ್ರೀಡೆ, ನಾಯಕತ್ವ ಬೆಳವಣಿಗೆ, ವ್ಯಕ್ತಿತ್ವ ವಿಕಸನ, ಸಾಂಸ್ಕೃತಿಕ ಚಟುವಟಿಕೆಗಳ ಅರಿವು ಮೂಡಿಸಿ ವಿದ್ಯಾರ್ಥಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜಾಗೃತಿ ಮೂಡಿಸುತ್ತದೆ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರುಭೂಪಾಲ ನಾಡಗೌಡ ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ ಮತ್ತು ಸೇವಾ ಮನೋಭಾವನೆ ಬೆಳೆಸಲು ಎನ್ಎಸ್ಎಸ್ ಶಿಬಿರ ಸಹಕಾರಿಯಾಗಿದೆ. ಇಂತಹ ಶಿಬಿರ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರುವಂತೆ ನೋಡಿಕೊಂಡರೆ ಸಾಕು. ದೇಶದ ಸ್ವಚ್ಛತೆ ತಾನಾಗಿಯೇ ಆಗುತ್ತದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರೀಯತೆ ಮತ್ತು ಸೇವಾ ಮನೋಭಾವನೆ ಬೆಳೆಸಲು ಶಿಬಿರ ಪೂರಕವಾಗಿದೆ. ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಏಳು ದಿನಗಳ ಕಾಲ ಜನರೊಟ್ಟಿಗೆ ಬೆರತು ಕಾಲ ಕಳೆಯುವುದು ನಿಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳಾಗಿರುತ್ತವೆ. ಶಿಬಿರದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಪೂರ್ಣಪ್ರಮಾಣದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕಲಬುರ್ಗಿ ವಿಭಾಗದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಎಸ್.ಶಿವರಾಜ ಮಾತನಾಡಿ, ಗಾಂಧೀಜಿಯವರ ಕನಸಿನ ಕೂಸು ಎನ್ಎಸ್ಎಸ್‌ಗೆ ಪಂಡಿತ್ ನೆಹರೂ ಹಾಗೂ ರಾಧಾಕೃಷ್ಣನ್‌ರ ದೂರದೃಷ್ಟಿಯಿಂದ 1969 ರಲ್ಲಿ ಸ್ಥಾಪನೆಯಾಯಿತು. ಕೇವಲ 40 ಸಾವಿರ ವಿದ್ಯಾರ್ಥಿ ಸ್ವಯಂ ಸೇವಕರಿದ್ದ ಯೋಜನೆ, ಇಂದು 38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂ ಸೇವಕರನ್ನು ಹೊಂದಿದ ರಾಷ್ಟ್ರದ ಬಹುದೊಡ್ಡ ಸಂಸ್ಥೆ. ವಿದ್ಯಾರ್ಥಿಗಳಲ್ಲಿ ಈ ಶಿಬಿರವು ಭಾವೈಕ್ಯತೆ, ಬಾಂಧವ್ಯ ಮತ್ತು ಸಾಮರಸ್ಯ ಮನೋಭಾವನೆ ಬೆಳೆಸುವ ಜೊತೆಯಲ್ಲಿ ಅಂಧಕಾರ, ಮೌಢ್ಯ ಹೋಗಲಾಡಿಸಲು ಅದಮ್ಯ ಗುರಿ ಹೊಂದಿದೆ ಎಂದು ವಿವರಿಸಿದರು. 

ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶಂಕರಪ್ಪ ವೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸಂಜೀವರಡ್ಡಿ, ಶಿವರಡ್ಡಿ, ಮುಖಂಡ ಕಳಕಪ್ಪ, ಮುಖ್ಯಶಿಕ್ಷಕರಾದ ಚಂದ್ರು ಕೆ.ರಾಠೋಡ್, ಕಪಲಪ್ಪ ಇದ್ದರು. ಚೈತ್ರಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.