ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆ ಅಗತ್ಯ: ವೀರಲಕ್ಷ್ಮೀ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 8:51 IST
Last Updated 14 ನವೆಂಬರ್ 2017, 8:51 IST

ರಾಯಚೂರು: ‘ಶಾಲಾ ಮಕ್ಕಳು ಓದುವ ಕಡೆಗೆ ಗಮನ ಹರಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿದರೆ ವ್ಯಕ್ತಿತ್ವ ವಿಕಾಸ ಆಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅವರು ಶಾಲಾ ಮಕ್ಕಳಿಗೆ ಸಲಹೆ ನೀಡಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನದಿಂದ ಸೋಮವಾರ ಏರ್ಪಡಿಸಿದ್ದ ‘ಮಕ್ಕಳ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಓದುವ ಶಾಲೆ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸಬೇಕು. ಶಿಕ್ಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗುತ್ತದೆ. ಸಾಹಿತ್ಯ, ಕಲೆ ಅಭಿರುಚಿಯನ್ನು ಮಕ್ಕಳಿಗೆ ಕೊಡಬೇಕು. ವೇದಿಕೆ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಹೇಳಿದರು.

ADVERTISEMENT

ಮಕ್ಕಳ ಪ್ರತಿಭೆ ಗುರುತಿಸಲು ವೇದಿಕೆ ನಿರ್ಮಿಸುವ ಕೆಲಸ ಶ್ಲಾಘನೀಯ. ಜಾನಪದ ನೃತ್ಯ, ಸಮೂಹ ಗಾಯನ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿರುವುದರಿಂದ ಮಕ್ಕಳು ನಿಜವಾಗಿಯೂ ಸಂಭ್ರಮ ಪಡುತ್ತವೆ. ಈ ಮೂಲಕ ಮಕ್ಕಳನ್ನು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸುವ ಕಾರ್ಯದಲ್ಲಿ ತೊಡಗಿಸಿದಂತಾಗುತ್ತದೆ ಎಂದರು.

ಮಕ್ಕಳ ಹಬ್ಬ ಕಾರ್ಯಕ್ರಮದ ಸಂಚಾಲಕ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಹೈದರಾಬಾದ್‌ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಹಬ್ಬ ಮಾಡಲಾಗುತ್ತಿದೆ. ರಾಯಚೂರಿನ ಮಕ್ಕಳ ಪ್ರತಿಭೆ ನಿಜಕ್ಕೂ ಶ್ಲಾಘನೀಯ. ಮಕ್ಕಳನ್ನು ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡು ಅವರ ಪ್ರತಿಭೆಯನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ವಿವಿಧ ಶಾಲೆಗಳಿಂದ ಭಾಗವಹಿಸಿದ್ದ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದರು. ಹಬ್ಬದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆಲ್ಲ ಪ್ರಮಾಣಪತ್ರ ನೀಡಲಾಯಿತು.
ಕಾರ್ಯಕ್ರಮದ ಸಹ ಸಂಚಾಲಕ ಶರಣಪ್ಪ ಗೋನಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎ. ಬಿರಾದಾರ, ಮಕ್ಕಳ ರಕ್ಷಣಾ ಅಧಿಕಾರಿ ಶೇಖ್‌ ಆಶ್ರರ್‌, ಸುರೇಶ ಧಾರವಾಡಕರ್‌, ಮಂಗಳಾ ಹೆಗಡೆ, ಮಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.