ADVERTISEMENT

ಶರಣ ಬಸವೇಶ್ವರ ಜಾತ್ರಾ ಮಹೋತ್ಸವ

ಹನುಮಸಾಗರ: 1001 ಕುಂಭಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:33 IST
Last Updated 19 ಏಪ್ರಿಲ್ 2017, 4:33 IST
ಹನುಮಸಾಗರ: ಶರಣ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಳವಾರ 1001 ಕುಂಭಗಳ ಮೆರವಣಿಗೆ, ಈಶ್ವರ ಲಿಂಗಕ್ಕೆ ಕುಂಭಾಭಿಷೇಕ ಹಾಗೂ ಶರಣ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ನಡೆಯಿತು.
 
ಸಮೀಪದ ಗವಿಸಿದ್ದೇಶ್ವರ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಕುಂಭಗಳನ್ನು ಪೂಜಿಸಲಾಯಿತು. ಬಳಿಕ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಶರಣಬಸವೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. 
 
ಈಶ್ವರ ದೇವಸ್ಥಾನದಲ್ಲಿ 1001 ಕುಂಭಗಳ ನೀರಿನಿಂದ ಈಶ್ವರ ಲಿಂಗಕ್ಕೆ ಕುಂಭಾಭಿಷೇಕ, ಮಹಾ ಮಂಗಳಾರತಿ, ಶರಣ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ಸಮರ್ಪಿಸಲಾಯಿತು. ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ  ಮಹಿಳೆಯರಿಗೆ ಉಡಿ ತುಂಬಿ ಗೌರವಿಸಲಾಯಿತು.
 
ಜಾತ್ರಾ ಮಹೋತ್ಸವ ನಿಮಿತ್ತ ಒಂದು ವಾರದಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಕುಂಭ ಮೆರವಣಿಗೆಯಲ್ಲಿ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಯಲ್ಲಪ್ಪ ಗೋಧಿ, ಕಾರ್ಯದರ್ಶಿ ದೊಡ್ಡಬಸವರಾಜ ತಲೆಮಟ್ಟಿ, ಪ್ರಮುಖರಾದ ವಿರುಪಾಕ್ಷಕಗೌಡ ಮ್ಯಾಗೇರಿ, ಶಿವರಾಜ ರಾಮವಾಡಗಿ, ಶರಣಪ್ಪ ಬಾದವಾಡಗಿ, ದೊಡ್ಡನಗೌಡ ಮಾಲಿಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಪ್ಪ ಕುದರಿ, ಅಕ್ಕಮಹಾದೇವಿ, ಯಂಕಮ್ಮ ಪಾಲ್ಗೊಂಡಿದ್ದರು.
 
ಬುಧವಾರ ಸಾಮೂಹಿಕ ವಿವಾಹ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಉಚ್ಛಾಯ ಉತ್ಸವ ಜರುಗಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.