ADVERTISEMENT

ಶಾಸಕರಿಗೆ ಅಂಗನವಾಡಿ ನೌಕರರ ಮನವಿ

ಅಂಗನವಾಡಿ ನೌಕರರ ಬೇಡಿಕೆ: ಅಧಿವೇಶನದಲ್ಲಿ ಧ್ವನಿ ಎತ್ತಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:45 IST
Last Updated 16 ಫೆಬ್ರುವರಿ 2017, 6:45 IST
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ ಅವರಿಗೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ ಅವರಿಗೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.   
ರಾಯಚೂರು: ಅಂಗನವಾಡಿ ನೌಕರರಿಗೆ ಮುಂದಿನ ಬಜೆಟ್‌ನಲ್ಲಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಕುರಿತು ಅಧಿವೇಶದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಶಾಸಕ ತಿಪ್ಪರಾಜು ಹವಾಲ್ದಾರ ಅವರಿಗೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಒತ್ತಾಯಿಸಿದರು.
 
ಶಾಸಕರಿಗೆ ಬುಧವಾರ ಮನವಿ ಪತ್ರಸಲ್ಲಿಸಿದ ಅಂಗನವಾಡಿ ನೌಕರ ಸಂಘದವರು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ 2016ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಜಾರಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಸುಮಾರು 40 ವರ್ಷಗಳಿಂದ ಮಹಿಳೆಯರ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಅಂಗನವಾಡಿ ನೌಕರರು ಶ್ರಮಿಸುತ್ತಿದ್ದಾರೆ. ಇದುವರೆಗೂ ಕನಿಷ್ಠ ವೇತನ ಸೇರಿದಂತೆ ಯಾವುದೇ ಸೌಕರ್ಯಗಳನ್ನು ನೀಡದೆ ವಂಚಿಸಲಾಗಿದೆ. ಶೋಷಿತ ನೌಕರರ ಪರವಾಗಿ ಸದನದಲ್ಲಿ ಧ್ವನಿ ಎತ್ತುವ ಮೂಲಕ ಅಂಗನವಾಡಿ ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.
 
ತಮಿಳುನಾಡು, ಗೋವಾ, ಕೇರಳ ಪುದುಚೇರಿ ರಾಜ್ಯಗಳಲ್ಲಿ ₹ 10 ರಿಂದ 14 ಸಾವಿರ ವೇತನ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇವಲ ₹ 6 ಸಾವಿರ ಗೌರವಧನ, ಸಹಾಯಕರಿಗೆ ₹ 3750 ಭತ್ಯೆಯನ್ನು ಮಾತ್ರ ನೀಡಲಾಗುತ್ತಿದೆ. ಫೆ.1ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲೂ ವೇತನ ಹೆಚ್ಚಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
2017-18ನೇ ಸಾಲಿನ ರಾಜ್ಯ ಬಜೆಟ್ ನಂತರ ಕನಿಷ್ಠ ವೇತನ  ಜಾರಿ ಸೇರಿದಂತೆ  45ನೇ ಐಎಲ್‌ಸಿ ಶಿಫಾರಸಿನಂತೆ ನೌಕರರೆಂದು ಪರಿಗಣಿಸಿ  ನಿವೃತ್ತಿ ಸೌಲಭ್ಯ ನೀಡಬೇಕು ಎಂಬುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
 
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ  ಎಚ್.ಪದ್ಮಾ, ಕಾರ್ಯದರ್ಶಿ ವರಲಕ್ಷ್ಮಿ,ಪದಾಧಿಕಾರಿಗಳಾದ ಪಾರ್ವತಿ ಮನ್ಸಲಾಪುರ, ಮಹಾಲಕ್ಷ್ಮಿ, ಕೆ.ವಿಜಯ, ಪಾರ್ವತಿ, ಪದ್ಮಾವತಿ, ತಿಮಲಮ್ಮ, ಪುಷ್ಪಾವತಿ, ಸರೋಜಾ, ಗಂಗಮ್ಮ,ಪಾರ್ವತಿ.ಎಸ್, ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.