ADVERTISEMENT

ಶೌಚಾಲಯದಿಂದ ಶಿಕ್ಷಣದಲ್ಲೂ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:45 IST
Last Updated 8 ಜುಲೈ 2017, 5:45 IST

ರಾಯಚೂರು: ಗ್ರಾಮೀಣ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಶುಚಿತ್ವ ಪರಿಕಲ್ಪನೆ ಮೂಡುತ್ತದೆ. ಇದರಿಂದ ಶಿಕ್ಷಣದ ಕಡೆಗೂ ಮಕ್ಕಳು ಉತ್ತಮ ರೀತಿಯಲ್ಲಿ ಗಮನ ಹರಿಸಿ ಬದಲಾಗುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಕೂರ್ಮಾರಾವ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕ ಎಂ.ರವಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ‘2018 ರೊಳಗೆ ಬಹಿರ್ದೆಸೆ ಮುಕ್ತ ರಾಜ್ಯ ನಿರ್ಮಾಣ ಘೋಷಣೆ’ ಅನುಷ್ಠಾನ ಸಂಬಂಧ ಸಭೆಯಲ್ಲಿ ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳುವ ರೀತಿಯಲ್ಲಿಯೆ ‘ಶೌಚಾಲಯ ಇದೆಯೇ’ ಎನ್ನುವ ಧ್ವನಿಯನ್ನು ಮಕ್ಕಳಿಗೆ ಪ್ರತಿದಿನವೂ ಕೇಳಿಸಬೇಕು. ಶೌಚಾಲಯ ಹೊಂದಿದ ಮಗು ಎದ್ದು ನಿಂತಾಗ ಚೆಪ್ಪಾಳೆ ತಟ್ಟಿ ಪ್ರೋತ್ಸಾಹಿಸಬೇಕು. ಶೌಚಾಲಯವಿಲ್ಲದ ಮಕ್ಕಳು ನಿರುತ್ಸಾಹಿಗಳಾಗದಂತೆ ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಈ ಮೂಲಕ ಶಿಕ್ಷಕರು ಕೂಡಾ ಗ್ರಾಮಗಳನ್ನು ಬಹಿರ್ದೆಸೆ ಮುಕ್ತಗೊಳಿಸುವುದಕ್ಕೆ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಶೌಚಾಲಯ ನಿರ್ಮಿಸುವುದು ಒಳ್ಳೆಯದು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಶೌಚಾಲಯ ನಿರ್ಮಿಸಿ ಬಳಸುವುದಕ್ಕೆ ವರ್ತನೆ ಹಾಗೂ ಸಂಸ್ಕೃತಿ ಸಮಸ್ಯೆ ಅವರನ್ನು ಕಾಡುತ್ತದೆ. ಸೂಕ್ತ ತಿಳಿವಳಿಕೆಯಿಂದ ಇದನ್ನು ಬದಲಾಯಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ನೂರಕ್ಕೆ ನೂರರಷ್ಟು ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಗುರಿ ತಲುಪುವುದಕ್ಕೆ ಸರ್ಕಾರಿ ನೌಕರರು ಕೈಜೋಡಿಸುವುದು ತುಂಬಾ ಅಗತ್ಯವಿದೆ ಎಂದು ಹೇಳಿದರು.

ಶೌಚಾಲಯಗಳ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳದ್ದು ಮುಖ್ಯ ಜವಾಬ್ದಾರಿ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಸರ್ಕಾರಿ ನೌಕರರು ಶೌಚಾಲಯಗಳನ್ನು ಮೊದಲು ನಿರ್ಮಿಸಿಕೊಳ್ಳಬೇಕು. ಇನ್ನೊಬ್ಬರಿಗೆ ಬುದ್ಧಿ ಹೇಳುವುದಕ್ಕೆ ನೈತಿಕತೆ ಹೊಂದಲು ಪಂಚಾಯಿತಿ ಸದಸ್ಯರು ಶೌಚಾಲಯ ನಿರ್ಮಿಸಿಕೊಳ್ಳುವುದು ತುಂಬಾ ಅಗತ್ಯವಿದೆ ಎಂದು  ಅವರು ತಿಳಿಸಿದರು.

ಕಡ್ಡಾಯ ನಿರ್ಮಾಣ: ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಇಲ್ಲದಿದ್ದರೆ ಸೆಕ್ಷೆನ್‌ 12 ರ ಅಡಿಯಲ್ಲಿ ಸದಸ್ಯತ್ವ ರದ್ದುಗೊಳಿಸಬಾರದೇಕೆ ಎನ್ನುವ ಪ್ರಶ್ನೆ ಕೇಳಿ ಈಗಾಗಲೇ ಜಿಲ್ಲೆಯಲ್ಲಿರುವ ಎಲ್ಲ ಪಂಚಾಯಿತಿ ಸದಸ್ಯರಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಅದು ಏನಾಗುತ್ತಿದೆ ಎಂಬುದನ್ನು ನೋಡಿಕೊಂಡು ಮತ್ತೊಂದು ವರದಿ ನೀಡುವುದಕ್ಕೆ ಸೂಚಿಸಲಾಗಿದೆ. ಶೇ 30 ರಷ್ಟು ಸದಸ್ಯರು ಇನ್ನು ಶೌಚಾಲಯ ನಿರ್ಮಿಸಿಕೊಳ್ಳುತ್ತಿಲ್ಲ ಎನ್ನುವ ಮಾಹಿತಿ ಇದೆ. ಸದಸ್ಯರು ಶೌಚಾಲಯ ನಿರ್ಮಿಸಿಕೊಂಡರೆ ಮಾತ್ರ ಗ್ರಾಮದಲ್ಲಿರುವ ಇತರೆ ಜನರಿಗೆ ಅವರು ಬುದ್ಧಿ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.