ADVERTISEMENT

ಸಂಗೀತ ಸುಧೆಯಲ್ಲಿ ತೇಲಿದ ಮಂತ್ರಾಲಯ

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಗುರು ವೈಭವೋತ್ಸವ ಸಂಪನ್ನ: ಕ್ಷೇತ್ರದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 7:19 IST
Last Updated 6 ಮಾರ್ಚ್ 2017, 7:19 IST
ಮಂತ್ರಾಲಯ: ಶ್ರೀರಾಘವೇಂದ್ರಸ್ವಾಮಿ ಅವರ 396ನೇ ಪಾದುಕಾಪಠಾ­ಭೀಷೇ­ಕ­ದಿಂದ ಫೆ. 28ರಂದು  (ಗುರು­ರಾಯರು ಪೀಠಾರೋಹಣ ಮಾಡಿದ ಪಾಲ್ಗುಣ ಶುದ್ಧ ಬಿದಿಗೆ) ಆರಂಭವಾದ ಶ್ರೀರಾಘವೇಂದ್ರ ಗುರು ವೈಭವೋತ್ಸವ  ಭಾನುವಾರ ನಾದಹಾರ ಸೇವೆಯೊಂದಿಗೆ ಸಂಪನ್ನಗೊಂಡಿತು.
 
ಗುರುರಾಯರ 422ನೇ ಜನ್ಮದಿನದ ಅಂಗವಾಗಿ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ತಿರುಪತಿಯ ವೆಂಕಟೇಶ್ವರ­ಸ್ವಾಮಿಯ ಶೇಷವಸ್ತ್ರ ಸಮಪರ್ಣೆ ನಡೆಯಿತು. ಚೆನ್ನೈನ ನಾದಹಾರಂ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ನಾದಹಾರ ಸಂಗೀತ ಸೇವೆ ನಡೆಯಿತು. 
 
ಗುರುರಾಯರ ಬೃಂದಾವನದ ಬಂಗಾರದ ಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವದ ಮುಂದೆ ಮಂತ್ರಾಲಯದ ಬಾಲಹನುಮ ಭಜನಾ ಮಂಡಳಿಯ ಹೆಣ್ಣುಮಕ್ಕಳು ಕೋಲಾಟ, ಗಿರಿಗಿಟ್ಲೆ ಆಡಿದರು. ಇದೇ ಸಂದರ್ಭದಲ್ಲಿ ಗುರು ರಾಯರ ಜೀವನ ಕುರಿತ ಶ್ರೀರಾಘ ವೇಂದ್ರ ವಿಜಯ ಗ್ರಂಥದ 10 ಸರ್ಗಗಳ ಪ್ರವಚನ ಹಾಗೂ  ಶ್ರೀರಾಮಚರಿತ್ರೆ ಮಂಜರಿ ಪ್ರವಚನ ಮಂಗಳ ನಡೆಯಿತು.
 
ಸಂಜೆ ನಡೆದ ದಾಸವಾಣಿ ಕಾರ್ಯಕ್ರಮದಲ್ಲಿ ಬಳ್ಳಾರಿಯ ವಿಭಾ ಆರ್‌.ಕುಲಕರ್ಣಿ ಅವರಿಂದ ಗಾಯನ, ಗದ್ವಾಲ್‌ನ ಪ್ರವಲ್ಲಿಕಾ ಅವರಿಂದ ಕೂಚುಪುಡಿ ನೃತ್ಯ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸನ್ಮಾನಿಸಿದರು.
ಶ್ರೀಮಠದ ವ್ಯವಸ್ಥಾಪಕ ಎಸ್‌.ಕೆ. ಶ್ರೀನಿವಾಸ ರಾವ್‌, ಆಡಳಿತಾಧಿಕಾರಿ ಮಾಧವಶೆಟ್ಟಿ, ರಾಜಾ ಎಸ್‌. ಗಿರಿಯಾಚಾರ್‌, ವೇದಪಾಠಶಾಲೆಯ ಕುಲಪತಿ ವಿ.ಆರ್‌.ಪಂಚಮುಖಿ, ಪ್ರಾಂಶುಪಾಲ ಎನ್‌.ವಾದಿರಾಜಾಚಾರ್‌, ಸಹಾಯ ವ್ಯವಸ್ಥಾಪಕ ಐ.ಪಿ.­ನರಸಿಂಹಮೂರ್ತಿ, ಕರ್ನಾಟಕದ ವಸತಿ ಸಚಿವ ಕೃಷ್ಣಪ್ಪ, ಕಿರುತೆರೆಯ ಕಲಾವಿದ  ಕಾರ್ತಿಕ ಜಯರಾಂ (ಜೆಕೆ) ಸೇರಿದಂತೆ  ಅನಕರು ಇದ್ದರು.
 
ವಿದ್ಯಾರ್ಥಿಗಳಿಗೆ ಹಾಸ್ಟೆಲ್‌: ‘ಬೆಂಗಳೂ ರಿನ ಚಾಮರಾಜಪೇಟೆಯಲ್ಲಿ 48 ಕೊಠಡಿಗಳ ವಿದ್ಯಾರ್ಥಿನಿಯಲಯವನ್ನು ನಿರ್ಮಿಸಲಾಗಿದೆ. 
2017–18ರ ಶೈಕ್ಷಣಿಕ ಸಾಲಿನಿಂದ ಹರಿಹರದಲ್ಲಿ ಪೂರ್ವಪ್ರಾಥ ಮಿಕದಿಂದ ಎಸ್ಸೆಸ್ಸೆಲ್ಸಿ ವರೆಗೆ ಶಾಲೆ ಆರಂಭಿಸಲಾಗುವುದು’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.
 
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಠದ ಮೇಲುಭಾಗದಲ್ಲಿ ಸ್ವರ್ಣ ಲೇಪಿತ ಬೃಂದಾವನದ ಪ್ರತಿರೂಪ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ನಮ್ಮ ಗುರುಗಳ ಆರಾಧನೆ (ಶ್ರೀಸುಯತೀಂದ್ರ ತೀರ್ಥ) ಹೊತ್ತಿಗೆ ಅದನ್ನು ಅರ್ಪಿಸಲಾಗುವುದು’ ಎಂದರು.
 
‘ಮಂತ್ರಾಲಯದಲ್ಲಿ ಒಳಚರಂಡಿ ಮತ್ತು ತುಂಗಭದ್ರಾ ನದಿಗೆ ಬ್ಯಾರೇಜ್‌ ನಿರ್ಮಿಸುವ ಪ್ರಸ್ತಾವಗಳು ಕೇಂದ್ರ ಸರ್ಕಾರದ ಮುಂದಿವೆ. ಕರ್ನಾಟಕ, ಆಂಧ್ರ ಮತ್ತು ಕೇಂದ್ರ ಸರ್ಕಾರಗಳು ಸಹಯೋಗದಲ್ಲಿ ಈ  ಯೋಜನೆ ಆಗಬೇಕಿದೆ ಎಂದು ಅವರು ಹೇಳಿದರು.
 
13 ವರ್ಷಗಳಿಂದ ನಡೆಯುತ್ತಿರುವ ನಾದಹಾರ ಸೇವೆ
ಮಂತ್ರಾಲಯ:
‘ತಿರುವಾಯೂರಿನಲ್ಲಿ ತ್ಯಾಗರಾಜರ ಆರಾಧನೆ ದಿನ ನಡೆಯುವ ಸಂಗೀತ ಸೇವೆಯಂತೆ ಗುರುರಾಯರ ಜನ್ಮದಿನದ ದಿವಸ ಮಂತ್ರಾಲಯದಲ್ಲಿ ನಾದಹಾರ ಸೇವೆಯನ್ನು ನಮ್ಮ ಟ್ರಸ್ಟ್‌ 2005ರಿಂದ ನಡೆಸಿಕೊಂಡು ಬಂದಿದೆ. ಮೊದಲು ನೂರು ಸಂಗೀತಗಾರರು ಬರುತ್ತಿದ್ದರು. ಈ ಸಾರಿ 200 ಗಾಯಕರು, 30ರಿಂದ 40 ಪಿಟೀಲು ವಾದಕರು, 50ರಿಂದ 60 ಮೃದಂಗವಾದಕರು, ಘಟಂ, ಮೋರ್ಚಿಂಗ್, ಮ್ಯಾಂಡಲಿನ್‌ ಖಂಜಿರ ವಾದಕರು ಸೇರಿ 200 ವಾದನ ಕಲಾವಿದರು ತಂಡದಲ್ಲಿ ಇದ್ದಾರೆ.  ತಂಡದಲ್ಲಿ 50ರಿಂದ 60 ಮಹಿಳೆಯರು ಇರುವುದು ವಿಶೇಷ’ ಎಂದು ಚೈನ್ನೈನ ನಾದ ಹಾರಂ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಕುಭಂಕೋಣಂನ ವಿ.ಸುಂದರ ರಾಘ ವನ್‌ ತಿಳಿಸಿದರು.

‘ಸಂಗೀತ ಅಭ್ಯಾಸ ಮಾಡಿರುವ ವಿವಿಧ ಕ್ಷೇತ್ರಗಳ ಉದ್ಯೋಗಿಗಳು ಈ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರು ವಿವಿಧೆಡೆ ಸಂಗೀತ ಕಾರ್ಯಕ್ರಮ ಕೊಟ್ಟಾಗ ದೊರೆಯುವ ಹಣವನ್ನು ಸಂಗ್ರಹಿಸಿ ಗುರುರಾಯರ ವರ್ಧಂತಿ ದಿನ ಕೊಡುಗೆಯೊಂದನ್ನು ನೀಡುತ್ತಿದ್ದೇವೆ. ಈ ಸಾರಿ ಬಂಗಾರದ ಕಮಂಡಲು ನೀಡಿದ್ದೇವೆ’ ಎಂದರು.

‘ಶನಿವಾರದ ದಿನ ನಾದಸ್ವರ ಸೇವೆಯನ್ನು ನಮ್ಮ ತಂಡದ ಸದಸ್ಯರು ನಡೆಸಿಕೊಟ್ಟರು. ಭಾನುವಾರ ಸಂಜೆ ದಾಸವಾಣಿಯಲ್ಲಿ ನೂರು ಕೀರ್ತನೆಗಳನ್ನು ಹಾಡುವ ಆಲೋಚನೆ ಇದೆ’ ಎಂದರು. ‘ಪ್ರತಿ ವರ್ಷ ಈ ಸೇವೆ ಸಲ್ಲಿಸುವುದ ರಿಂದ ಮನಸ್ಸಿಗೆ ಒಂದು ರೀತಿಯ ನೆಮ್ಮದಿ, ಸಂತೋಷ ದೊರೆಯುತ್ತಿದೆ. ನಿರಂತರವಾಗಿ ಈ ಸೇವೆಯಲ್ಲಿ ಭಾಗವಹಿಸುವೆ’ ಎಂದು ಡಾ.ಗಣೇಶನ್‌ ಹೇಳಿದರು.
 
* ಗುರುರಾಯರು ತಮಿಳುನಾಡಿನಲ್ಲಿ ಜನಿಸಿ ಅಲ್ಲೆ ವಿದ್ಯಾಭ್ಯಾಸ ಮಾಡಿ, ಆಶ್ರಮ ಸ್ವೀಕರಿಸಿದವರು. ರಾಯರಿಗೆ  ಇಷ್ಟವಾದ ಸಂಗೀತೆ ಸೇವೆಯನ್ನು ನಾದಹಾರಂ ಟ್ರಸ್ಟ್‌ ನಡೆಸಿಕೊಟ್ಟಿದೆ.
-ಶ್ರೀಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಪೀಠಾಧಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.