ADVERTISEMENT

ಸಂಪೂರ್ಣ ಮಾಹಿತಿ, ಜ್ಞಾನ ಇರುವುದು ಅಗತ್ಯ

ವಿವಿ ಪ್ಯಾಟ್‌ ಜೋಡಣೆ ತರಬೇತಿ ಕಾರ್ಯಕ್ರಮದಲ್ಲಿ ವೀರಮಲ್ಲಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 12:23 IST
Last Updated 23 ಏಪ್ರಿಲ್ 2018, 12:23 IST

ರಾಯಚೂರು: ಮತದಾನಕ್ಕೆ ಬಳಕೆ ಮಾಡುವ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್‌ ಬಳಕೆಯ ಸಂಪೂರ್ಣ ಮಾಹಿತಿಯನ್ನು ಪಿಆರ್‌ಒ ಹಾಗೂ ಎಪಿಆರ್‌ಒ ಗಳು ಹೊಂದಿರಬೇಕು ಎಂದು ಉಪವಿಭಾಗಾಧಿಕಾರಿ ವೀರಮಲ್ಲಪ್ಪ ಪೂಜಾರ್ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪಿಆರ್‌ಒ ಹಾಗೂ ಎಪಿಆರ್‌ಒ ಅಧಿಕಾರಿಗಳಿಗೆ ಭಾನುವಾರ ಆಯೋಜಿಸಿದ್ದ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್‌ ಜೋಡಣೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಆತಂಕವಿಲ್ಲದೆ ನಿರ್ಭೀತಿಯಿಂದ ಚುನಾವಣಾ ಕಾರ್ಯಗಳನ್ನು ನಿರ್ವಹಿಸಬೇಕು. ಅಗತ್ಯ ಸೌಲಭ್ಯಗಳನ್ನು ಚುನಾವಣಾ ಆಯೋಗವು ಒದಗಿಸಿದೆ. ಈ ಹಿಂದಿನ ಚುನಾವಣೆಗಳಲ್ಲಿ ಬ್ಯಾಲೆಟ್ ಯುನಿಟ್ ಜೊತೆಗೆ ಕಂಟ್ರೋಲ್ ಯುನಿಟ್‌ ಅನ್ನು ನೇರವಾಗಿ ಜೋಡಣೆ ಮಾಡಿ ಮತಯಂತ್ರಗಳನ್ನು ಮತದಾನಕ್ಕೆ ಬಳಕೆ ಮಾಡಲಾಗುತ್ತಿತ್ತು. ಈ ಬಾರಿ ವಿವಿ ಪ್ಯಾಟ್ ಅಳವಡಿಸಬೇಕಾಗಿದೆ ಎಂದರು.

ADVERTISEMENT

ಮಸ್ಟರಿಂಗ್ ದಿನದಂದು ಮಸ್ಟರಿಂಗ್ ನಂತರ ಪ್ರಿಸೈಡಿಂಗ್ ಅಧಿಕಾರಿಗಳು ಕಡ್ಡಾಯವಾಗಿ ಕಂಟ್ರೋಲ್ ಯುನಿಟ್ ಪ್ರಾರಂಭಿಸಿ ಬ್ಯಾಲೆಟ್ ಪತ್ರದಲ್ಲಿರುವ ಎಲ್ಲ ಅಭ್ಯರ್ಥಿಗಳು ದಾಖಲಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಕಂಟ್ರೋಲ್ ಯುನಿಟ್‌ ಅನ್ನು ಸ್ವಿಚ್ ಆಫ್ ಮಾಡಿ ಮತಗಟ್ಟೆಗಳಿಗೆ ರವಾನಿಸಬೇಕು ಎಂದು ತಿಳಿಸಿದರು.

ಮತದಾನ ದಿನದಂದು ನೈಜ ಮತದಾನ ನಡೆಯುವ ಮುಂಚೆ ಪಕ್ಷದ ಏಜೆಂಟರ ಸಮ್ಮುಖದಲ್ಲಿ 50 ಅಣುಕು ಮತದಾನ ಕೈಗೊಳ್ಳಲು ಅವಕಾಶಗಳಿವೆ. ಈ ಪ್ರಕ್ರಿಯೆ ಕೈಗೊಂಡು ವಿವಿ ಪ್ಯಾಟ್‌ನಲ್ಲಿ ಮತದಾನ ಮಾಡಿದ ಅಭ್ಯರ್ಥಿಗೆ ಮತ ಚಲಾವಣೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ನಂತರ ಕಡ್ಡಾಯವಾಗಿ ಕಂಟ್ರೋಲ್ ಯುನಿಟ್‌ನ್ನು ಕ್ಲೋಸ್-ರಿಜಲ್ಟ್-ಕ್ಲೀಯರ್ ಮೂಲಕ ಕಂಟ್ರೋಲ್ ಯುನಿಟ್‌ನಲ್ಲಿ ದಾಖಲಾದ ಮತಗಳನ್ನು ತೆಗೆದು ಹಾಕಿ ಮತದಾನಕ್ಕೆ ಸಿದ್ಧಗೊಳಿಸಬೇಕು. ಅಣುಕು ಮತದಾನದ ಸಮಯದಲ್ಲಿ ಬ್ಯಾಲೆಟ್ ಯುನಿಟ್‌ ಅಥವಾ ಕಂಟ್ರೋಲ್ ಯುನಿಟ್‌ನಲ್ಲಿ ತೊಂದರೆಗಳು ಕಂಡು ಬಂದಲ್ಲಿ ಎಲ್ಲ ಯಂತ್ರಗಳನ್ನು ಬದಲಿಸಬೇಕು ಎಂದು ವಿವರಿಸಿದರು.

ವಿವಿ ಪ್ಯಾಟ್ ಅತಿ ಸೂಕ್ಷ್ಮ ಸಂವೇದಿ ಯಂತ್ರವಾಗಿದ್ದು, ಮತದಾನದ ಸಮಯದಲ್ಲಿ ಹೆಚ್ಚಿನ ಶಾಖ ಅಥವಾ ಬೆಳಕು ಇದ್ದಲ್ಲಿ ಇಡಬಾರದು. ಯಂತ್ರದ ಬ್ಯಾಟರಿ ಶಕ್ತಿ ಕಡಿಮೆಯಾದಾಗ ಬ್ಯಾಟರಿ ಮಾತ್ರ ಬದಲಿಸಬಹುದು. ಉಳಿದ ತೊಂದರೆಗಳೇನಾದರೂ ಕಂಡು ಬಂದರೆ ವಿವಿ ಪ್ಯಾಟ್ ಯಂತ್ರವನ್ನೇ ಬದಲಿಸಬೇಕು ಎಂದರು.

ಮತದಾನ, ವಿವಿ ಪ್ಯಾಟ್ ಜೋಡಣೆ ಮತ್ತು ಅವುಗಳ ತೊಂದರೆ ನಿವಾರಣೆ ಕುರಿತು ತರಬೇತಿ ನೀಡಿದ ವಿವಿ ಪ್ಯಾಟ್ ನೋಡಲ್ ಅಧಿಕಾರಿ ಶರಣಬಸವ, ಮತದಾನದ ದಿನದಂದು ಮತಗಟ್ಟೆಯ ಅಧಿಕಾರಿಗಳು ಮತಯಂತ್ರಗಳ ಪರಿಶೀಲನೆ ನಡೆಸಿದ ನಂತರ ಪಾರದರ್ಶಕ ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಎ.ಪಾಟೀಲ, ತಹಶೀಲ್ದಾರ್ ರಮೇಶ ಅಳವಂಡಿಕರ್, ವಿವಿ ಪ್ಯಾಟ್ ತರಬೇತಿದಾರ ಸದಾಶಿವಪ್ಪ, ಹನುಮಂತಪ್ಪ ಗವಾಯಿ ಇದ್ದರು.

**

ನ್ಯಾಯಸಮ್ಮತ, ಪಾರದರ್ಶಕ ಮತ್ತು ಆಯೋಗದ ಸೂಚನೆಗಳ ಅನ್ವಯ ಚುನಾವಣೆ ನಡೆಸಲು ಆಯೋಗ ಮತ್ತು ಜಿಲ್ಲಾಡಳಿತ ಸಹಕಾರ ನೀಡುತ್ತದೆ 
-ಶರಣಬಸವ, ವಿವಿ ಪ್ಯಾಟ್ ನೋಡಲ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.