ADVERTISEMENT

ಸಸಿ ನೆಡುವ ಅಭಿಯಾನಕ್ಕೆ ಹಿನ್ನಡೆ

ನಾಗರಾಜ ಚಿನಗುಂಡಿ
Published 12 ಜುಲೈ 2017, 5:47 IST
Last Updated 12 ಜುಲೈ 2017, 5:47 IST

ರಾಯಚೂರು: ಪ್ರಸಕ್ತ ವರ್ಷ ಮಳೆಗಾಲ ಆರಂಭವಾಗಿದ್ದರೂ ಜಿಲ್ಲೆಯಾದ್ಯಂತ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ರಮವು ಗೊಂದಲಗಳಿಂದಾಗಿ ಅನುಷ್ಠಾನವಾಗುತ್ತಿಲ್ಲ. ಜಿಲ್ಲೆಯಲ್ಲಿ ಈ ಸಲ ಒಟ್ಟು 6.83 ಲಕ್ಷ ಸಸಿಗಳನ್ನು ನೆಡಲು ಇಲಾಖೆಯು ಗುರಿ ಹೊಂದಿದೆ.

ಸಸಿಗಳನ್ನು ನೆಡುವುದಕ್ಕಾಗಿ ತಾಲ್ಲೂಕುವಾರು ಜಾಗಗಳನ್ನು ಗುರುತಿಸಲಾಗಿದೆ. ಯೋಜನೆಯಂತೆ ಈಗಾಗಲೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಇಲಾಖೆಯಲ್ಲಿ ತಾಂತ್ರಿಕ ತೊಂದರೆಗಳು ಹಾಗೂ ಟೆಂಡರ್‌ನಲ್ಲಿ ಪ್ರಕ್ರಿಯೆ ಗೊಂದಲದಿಂದಾಗಿ ಯೋಜನೆ ಜಾರಿಯಾಗಿಲ್ಲ.

ಈ ವರ್ಷ ಸಸಿ ನೆಡುವ ಕಾಮಗಾರಿ ಗುತ್ತಿಗೆ ವಹಿಸಲು ಸಾಮಾಜಿಕ ಅರಣ್ಯ ಇಲಾಖೆಯಿಂದ ಈಗಾಗಲೇ ಎರಡು ಬಾರಿ ಟೆಂಡರ್‌ ಆಹ್ವಾನಿಸಲಾಗಿತ್ತು. ಕೆಲವು ಗುತ್ತಿಗೆದಾರರು ಭಾಗವಹಿಸಿದ್ದರು. ಗುತ್ತಿಗೆದಾರರು ಷರತ್ತುಗಳಿಗೆ ಅನುಗುಣವಾಗಿಲ್ಲ ಎನ್ನುವ ಕಾರಣದಿಂದ ಎರಡು ಸಲವೂ ಟೆಂಡರ್‌ ರದ್ದುಗೊಂಡಿದೆ.

ADVERTISEMENT

2016–17 ಸಾಲಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಅನುಷ್ಠಾನದಲ್ಲಿ ಅವ್ಯವಹಾರ ನಡೆದ ಬಗ್ಗೆ ಆರೋಪಿಸಲಾಗಿತ್ತು. ಈ ಬಗ್ಗೆ ಸರ್ಕಾರದಿಂದ ತನಿಖೆಗೆ ಆದೇಶಿಸಲಾಗಿತ್ತು. ತನಿಖೆ ಆಧರಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಂಡಿದ್ದಾರೆ. ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ನಿಯಮಾನುಸಾರ ಟೆಂಡರ್‌ ವಹಿಸುವುದಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. ಆದರೆ ಟೆಂಡರ್‌ ಷರತ್ತುಗಳನ್ವಯ ಅರ್ಹ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ.

‘ಎರಡು ಬಾರಿ ಟೆಂಡರ್‌ ರದ್ದಾದರೆ ಮೂರನೇ ಸಲ ಟೆಂಡರ್‌ ಆಹ್ವಾನಿಸುವುದಕ್ಕೆ ಇಲಾಖೆಗೆ ಅವಕಾಶವಿಲ್ಲ. ಇಂತಹ ಕಾಮಗಾರಿಗಳನ್ನು ಇಲಾಖೆಯಿಂದಲೆ ಮಾಡಿಸಬೇಕಾಗುತ್ತದೆ. ಹೀಗಾಗಿ ಇಲಾಖೆಯ ಮೂಲಕ ಸಸಿ ನೆಡುವುದಕ್ಕೆ ಕ್ರಮ ವಹಿಸಲಾಗುತ್ತಿದೆ’ ಎಂದು ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಈಚೆಗೆ ತಿಳಿಸಿದ್ದರು.

‘ಸಾಮಾಜಿಕ ಅರಣ್ಯ ಇಲಾಖೆಯಿಂದ ನಡೆಸುವ ಕಾಮಗಾರಿಗಳಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದಾರೆ. ಕಳೆದ ವರ್ಷ ನಡೆದ ಅವ್ಯವಹಾರ ಇದಕ್ಕೆ ಸಾಕ್ಷಿ. ಅಧಿಕಾರಿಗಳು ಷರತ್ತುಗಳನ್ನು ಸಡಿಲಿಸಿ ಸಸಿ ನೆಡುವುದಕ್ಕೆ ಮುಂದಾಗುತ್ತಿಲ್ಲ. ಹೇಗಾದರೂ ಮಾಡಿ ಟೆಂಡರ್‌ ರದ್ದು ಮಾಡುವುದೇ ಇಲಾಖೆಯ ಅಧಿಕಾರಿಗಳು ಸಂಚಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಯೋಜನೆಗಳು ಹಾಗೂ ಹಣಕಾಸು ಸ್ಥಾಯಿ ಸಮಿತಿ ಸದಸ್ಯ ಅಮರಗೌಡ ಮಾಲಿಪಾಟೀಲ ಅವರ ಆರೋಪ.

ಉದ್ಯೋಗ ಖಾತರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸಸಿಗಳನ್ನು ಬೆಳೆಸುವುದಕ್ಕೆ ಸಾಮಾಜಿಕ ಅರಣ್ಯ ವಿಭಾಗ ನೆರವು ನೀಡುತ್ತದೆ. ನೆಡುತೋಪು ಬೆಳೆಸುವುದು, ಸಸಿಗಳನ್ನು ಪೋಷಿಸುವುದು, ನೆಡುತೋಪು ಘೋಷಣೆ, ಮುಂಗಡವಾಗಿ ಕಾಮಗಾರಿ ಕೈಗೊಳ್ಳುವುದು, ಮುಂಗಡ ಸಸಿಗಳನ್ನು ಬೆಳೆಸುವುದು ಹಾಗೂ ಭೂಮಿ ಮತ್ತು ಜಲ ಸಂರಕ್ಷಣೆಗಾಗಿ ಕಾಮಗಾರಿ ಕೈಗೊಳ್ಳುವುದು ಸಾಮಾಜಿಕ ಅರಣ್ಯ ಇಲಾಖೆಯ ಜವಾಬ್ದಾರಿ. ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಈಗಾಗಲೇ ಅನುದಾನ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.