ADVERTISEMENT

ಸಿಮೆಂಟ್‌ ರಿಂಗ್‌ಗಳಿಗೆ ಭಾರೀ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:33 IST
Last Updated 20 ಡಿಸೆಂಬರ್ 2017, 5:33 IST

ಶಕ್ತಿನಗರ: ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಕಾರ್ಯ ಇಲ್ಲಿ ಚುರುಕು ಪಡೆದಿದೆ. ‘ಸ್ವಚ್ಛ ಭಾರತ್ ಮಿಷನ್’ ಅಡಿ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಶೌಚದ ಗುಂಡಿಗೆ ಬಳಸುವ ಸಿಮೆಂಟ್‌ ರಿಂಗ್‌ಗಳಿಗೆ ಭಾರಿ ಬೇಡಿಕೆ ಬಂದಿದೆ.

ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಿಗೆ ಒತ್ತಡ ಹೇರುತ್ತಿರುವ ಕಾರಣ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಕಾಣುತ್ತಿದೆ.

ಈ ಹಿಂದೆ ಬಹುತೇಕರು ಶೌಚದ ಗುಂಡಿಯನ್ನು ಕಲ್ಲಿನಿಂದ ಕಟ್ಟಿಸುತ್ತಿದ್ದರು. ಆರು ಅಡಿ ಆಳದ ಶೌಚದ ಗುಂಡಿ ನಿರ್ಮಾಣಕ್ಕೆ ₹ 6 ಸಾವಿರ ಖರ್ಚು ಮಾಡಬೇಕಾಗಿತ್ತು. ಜತೆಗೆ ಗುಂಡಿ ಮೇಲೆ ಮುಚ್ಚಲು ಕಲ್ಲು, ಇತರೆ ಸಾಮಗ್ರಿಗಳಿಗೆ ₹ 3 ಸಾವಿರ, ಗಾರೆ ಕೆಲಸದವರ ಕೂಲಿ ₹ 3 ಸಾವಿರ ಹೀಗೆ ಶೌಚದ ಗುಂಡಿ ನಿರ್ಮಾಣಕ್ಕಾಗಿಯೇ ₹ 12 ಸಾವಿರ ಖರ್ಚಾಗುತ್ತಿತ್ತು.

ADVERTISEMENT

ಶೌಚದ ಗುಂಡಿಯನ್ನು ಕಲ್ಲಿನ ಬದಲು ಸಿಮೆಂಟ್‌ ರಿಂಗ್‌ ಬಳಸಿ ನಿರ್ಮಿಸುವುದು ಸುಲಭ ಮತ್ತು ಖರ್ಚು ಕೂಡ ಕಡಿಮೆ ಎಂದು ಮನಗಂಡಿರುವ ಜನರು ಸಿಮೆಂಟ್‌ ರಿಂಗ್‌ನಿಂದಲೇ ಶೌಚ ಗುಂಡಿ ನಿರ್ಮಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ತಾಲ್ಲೂಕಿನಲ್ಲಿ ಸದ್ಯ ರಿಂಗ್‌ ತಯಾರಿಸುವವರಿಗೆ ಬಿಡುವಿಲ್ಲದ ಕೆಲಸ. ರಿಂಗ್‌ ತಯಾರಕರು ನಾಲ್ಕು, ಮೂರೂವರೆ ಮತ್ತು ಮೂರು ಅಡಿ ಸುತ್ತಳತೆಯ ರಿಂಗ್‌ಗಳನ್ನು ತಯಾರಿಸುತ್ತಿದ್ದಾರೆ.

ನಾಲ್ಕು ಅಡಿ ವ್ಯಾಸಕ್ಕೆ ₹ 550, ಮೂರೂವರೆ ಅಡಿಗೆ ₹ 450 ಮತ್ತು ಮೂರು ಅಡಿ ವ್ಯಾಸದ ರಿಂಗ್‌ಗೆ ₹ 250 ಪಡೆಯುತ್ತಾರೆ. ಆರು ಅಡಿ ಆಳದ ಶೌಚ ಗುಂಡಿಗೆ 6 ರಿಂಗ್‌ಗಳು ಬೇಕಾಗುತ್ತವೆ. ₹ 3 ಸಾವಿರದಲ್ಲಿ ಶೌಚಗುಂಡಿಗೆ ಸಾಕಾಗುವಷ್ಟು ರಿಂಗ್‌ಗಳು ದೊರೆಯುತ್ತವೆ.

ಗುಂಡಿ ಮೇಲೆ ಮುಚ್ಚಲು ಸಾಧಾರಣ ದಪ್ಪ ಕಲ್ಲು ಚಪ್ಪಡಿ, ಕಾರ್ಮಿಕರ ಕೂಲಿ ಲೆಕ್ಕ ಹಾಕಿದರೆ ₹ 4,500 ಶೌಚಗುಂಡಿ ಸಿದ್ಧಗೊಳ್ಳುತ್ತದೆ. ಹೀಗಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಬಯಸುತ್ತಿರುವ ಬಹುತೇಕರು ಸಿಮೆಂಟ್‌ ರಿಂಗ್‌ ಖರೀದಿಗೆ ಮುಂದಾಗಿದ್ದಾರೆ.

‘ಈಗ ತಾಲ್ಲೂಕಿನಲ್ಲಿ ಪ್ರತಿ ಕುಟುಂಬ ಶೌಚಾಲಯ ನಿರ್ಮಿಸಿಕೊಳ್ಳವಂತೆ ಕಡ್ಡಾಯ ಮಾಡಿರುವುದರಿಂದ ನಮ್ಮಲ್ಲಿ ರಿಂಗ್‌ಗೆ ತುಂಬಾ ಬೇಡಿಕೆ ಬರುತ್ತಿದೆ’ ಎಂದು ದೇವಸೂಗೂರಿನ ಪ್ರಸಾದ ತಿಳಿಸಿದರು.

* * 

ಕಲ್ಲು, ಸಿಮೆಂಟ್‌ನಿಂದ ಶೌಚಗುಂಡಿ ನಿರ್ಮಾಣದ ಖರ್ಚು, ಶ್ರಮ, ಸಮಯ ಹೋಲಿಕೆ ಮಾಡಿದರೆ ರಿಂಗ್‌ನಿಂದ ನಿರ್ಮಿಸುವುದು ತುಂಬಾ ಅನುಕೂಲ –
ಸೂಗಪ್ಪ
ದೇವಸೂಗೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.