ADVERTISEMENT

ಸಿ.ಸಿ ರಸ್ತೆ: ತ್ವರಿತ ಕಾಮಗಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:58 IST
Last Updated 20 ಏಪ್ರಿಲ್ 2017, 5:58 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ‘ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ’ ಕಾರ್ಯಕರ್ತರು  ನಗರಸಭೆ ಎದುರು ಬುಧವಾರ ಘೋಷಣೆ ಕೂಗಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ‘ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ’ ಕಾರ್ಯಕರ್ತರು ನಗರಸಭೆ ಎದುರು ಬುಧವಾರ ಘೋಷಣೆ ಕೂಗಿದರು   

ರಾಯಚೂರು: ನಗರದಲ್ಲಿರುವ ಝಾಕೀರ್‌ ಹುಸೇನ್‌ ವೃತ್ತದಿಂದ ಭಗತ್‌ಸಿಂಗ್‌ ವೃತ್ತದವರೆಗಿನ ಸಿಸಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ‘ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ’ ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಬುಧವಾರ ಘೋಷಣೆ ಕೂಗಿದರು.

‘ಈಚೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ಮುಂಚಿತವಾಗಿಯೇ ಅಂಬೇಡ್ಕರ್‌ ವೃತ್ತದಿಂದ ಭಗತ್‌ಸಿಂಗ್‌ ವೃತ್ತದವರೆಗಿನ ಸಿ.ಸಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಜನರು ಪರದಾಡುವಂತಾಗಿದೆ’ ಎಂದು ಆರೋಪಿಸಿದರು.‘ಪ್ರಮುಖ ರಸ್ತೆಯ ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದರಿಂದ  ತೀವ್ರ ತೊಂದರೆ ಆಗಿದೆ.  ಸ್ಟೇಷನ್‌ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ಅಂಗವಿಕಲರು ಹಾಗೂ ವೃದ್ಧರು ಸಂಚರಿಸುವುದು ಅಸಾಧ್ಯ ಎನ್ನುವಂತಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಯಿಂದ ಆರ್‌ಟಿಒ ವೃತ್ತದವರೆಗಿನ ಚತಷ್ಪಥ ರಸ್ತೆ ಸಂಪೂರ್ಣವಾಗಿ ಹಾಳಾ ಗಿದೆ. ಜನರು ಭೀತಿಯಲ್ಲಿ ಸಂಚರಿಸುವಂತಾಗಿದೆ’ ಎಂದು ದೂರಿದರು.

‘ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿಪಡಿಸಿರುವ ರಸ್ತೆಯು ಕೇವಲ ಮೂರು ವರ್ಷಗಳಲ್ಲಿ ಹಾಳಾಗಿದೆ. ತೀನ್‌ ಕಂದಿಲ್‌ ಚೌಕ್‌ನಿಂದ ಅಂಬಿಗರ ಚೌಡಯ್ಯ ವೃತ್ತದವರೆಗಿನ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಶಾಲಾ– ಕಾಲೇಜುಗಳಿರುವ ಈ ರಸ್ತೆಯಲ್ಲಿ ಕಾಮಗಾರಿ ನಿಲ್ಲಿಸಲು ಕಾರಣ ಏನೆಂದು ತಿಳಿಯದಂತಾಗಿದೆ. ಕೂಡಲೇ ಈ ರಸ್ತೆಯ ವಿಸ್ತರಣೆ ಕೈಗೊಂಡು ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನಗರದ ವಿದ್ಯಾಭಾರತಿ ಶಾಲೆ ಹತ್ತಿರದ ರೈಲ್ವೆ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡು ಸೇತುವೆಯನ್ನು ಸಂಚಾರ ಮುಕ್ತಗೊಳಿಸಲಾಗಿದೆ. ಆದರೆ, ಈ ಸೇತುವೆಯಲ್ಲಿ ಮಳೆ ನೀರು, ಚರಂಡಿ ನೀರು ನಿಲ್ಲುತ್ತಿದ್ದು ಜನರು ತೊಂದರೆ ಅನುಭವಿಸುವುದು ತಪ್ಪಿಲ್ಲ. ನೀರು ನಿಲ್ಲದಂತೆ ಕ್ರಮ ಜರುಗಿಸಬೇಕು. ನಗರ ದಲ್ಲಿ ದೂಳಿನ ಸಮಸ್ಯೆಯೂ ಗಂಭೀರ ವಾಗಿದೆ. ದೂಳು ಹಾಗೂ ಬಿಸಿಲಿನ ತಾಪ  ಕಡಿಮೆ ಮಾಡಲು ರಸ್ತೆಗೆ ನೀರು ಹಾಕಿಸಬೇಕು. ನಗರಸಭೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಜನರ ಸಮಸ್ಯೆಗೆ ಶೀಘ್ರ ಸ್ಪಂದಿಸಿ ಅನುಕೂಲ ಮಾಡಿಕೊಡಬೇಕು’ ಎಂದು ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಬಿ.ಆರ್.ಅಪರ್ಣಾ, ಎನ್‌. ಮಹಾವೀರ್‌, ಚಂದ್ರಗಿರೀಶ, ಆಂಜನೇಯ, ಎನ್‌.ಹುಸೇನಪ್ಪ, ಹಿರೇಮಠ, ರುದ್ರಯ್ಯ ಗುಣಾರಿ, ನಿಸಾರ್‌ ಅಹಮ್ಮದ್‌, ನೂರ್‌ಪಾಷ, ಮಹಾಂತೇಶ, ಗೋವಿಂದ, ರಾಮಣ್ಣ, ಚೇತನಾ ಬನಾರೆ,  ಸಲೀಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.