ADVERTISEMENT

ಸೇವಾ ಭಾವ ಬೆಳೆಸಲು ಉಪ ಸಮನ್ವಯಾಧಿಕಾರಿ ಸಲಹೆ

ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 5:58 IST
Last Updated 11 ಮಾರ್ಚ್ 2017, 5:58 IST
ರಾಯಚೂರು:  ಕರ್ತವ್ಯದ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಉಪ ಸಮನ್ವಯಾಧಿಕಾರಿ ಈರಣ್ಣ ಕೋಸಗಿ ಹೇಳಿದರು.
 
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನಿಂದ ಶುಕ್ರವಾರ ಆಯೋಜಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
 
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಪರಿಸರ ಕಾಪಾಡಿಕೊಂಡು ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಕಾರ್ಯ ಅಭಿನಂದನೀಯ. ಶಾಲೆಗೆ ಕೀರ್ತಿ ತರುವಲ್ಲಿ ಶಿಕ್ಷಕರಿಗಿಂತ ವಿದ್ಯಾರ್ಥಿಗಳ ಶ್ರಮವೇ ಪ್ರಮುಖವಾಗಿದ್ದು, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರೂವಾರಿಗಳಂತೆ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.
 
ಸರ್ಕಾರಿ ಶಾಲೆಗಳು ಸೌಕರ್ಯಗಳ ಕೊರತೆಯ ನಡುವೆಯೂ ಖಾಸಗಿ ಶಾಲೆಗಳಿಗಿಂತ ಉತ್ತಮವಾದ ಸಾಧನೆ ತೋರುತ್ತಿವೆ. ಎಲೆ ಮರೆ ಕಾಯಿಯಂತೆ ಶ್ರಮಿಸುವ ಶಿಕ್ಷಕರ ಕಾರ್ಯವನ್ನು ಸಮಾಜ ಗುರುತಿಸುವ ಕಾರ್ಯ ನಡೆಸಬೇಕು ಎಂದು ಹೇಳಿದರು.
 
ಭಾರತೀಯ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಹಫೀಜುಲ್ಲಾ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುವ ಬಹಳಷ್ಟು ವಿದ್ಯಾರ್ಥಿಗಳ ಕಲಿಕಾಮಟ್ಟ ಉತ್ತಮವಾಗಿದೆ. ಅವರಿಗೆ ಸೂಕ್ತವಾದ ಪ್ರೋತ್ಸಾಹ ದೊರಕಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
 
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಂ.ಎಸ್‌.ನಟೇಶ ಪ್ರಾಸ್ತಾವಿಕ ಮಾತನಾಡಿದರು.  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯ ಪರಿಸರ ಅಧಿಕಾರಿ ಡಿ.ಆರ್‌.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
 
ಸಿಂಧನೂರು ತಾಲ್ಲೂಕಿನ ಕೋಳಬಾಳ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಸಾಲುಮರದ ತಿಮ್ಮಕ್ಕ ಪಾತ್ರದಲ್ಲಿ ಸಂವಾದ ನಡೆಸಿ ಗಮನ ಸೆಳೆದರು. ವಿಷಯ ಪರಿವೀಕ್ಷಕಿ ಹೀರಾಬಾಯಿ, ಸಹಾಯಕ ಪರಿಸರ ಅಧಿಕಾರಿ ಎಸ್‌.ಪವನ್‌, ಕೊಟ್ರೇಶ ಉಪಸ್ಥಿತರಿದ್ದರು.
 
ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪದಾನ
2016–17ನೇ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ತಾಲ್ಲೂಕಿನ ಪುಚ್ಚಲದಿನ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರದಾನ ಮಾಡಲಾಯಿತು.

ಹಸಿರು ಶಾಲೆ ಪ್ರಶಸ್ತಿ:  ರಾಯಚೂರು ತಾಲ್ಲೂಕಿನ ದುಗನೂರು ಹಾಗೂ ಜುಲಮಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾನ್ವಿ ತಾಲ್ಲೂಕಿನ ಬಸಾಪುರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿಂಧನೂರು ತಾಲ್ಲೂಕಿನ ರೈತನಗರ ಕ್ಯಾಂಪ್‌, ಮುಳ್ಳೂರು ಇಜೆ ಹಾಗೂ ಮಾವಿನಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಳಬಾಳ ಸರ್ಕಾರಿ ಪ್ರೌಢ ಶಾಲೆ, ಲಿಂಗಸೂಗುರು ತಾಲ್ಲೂಕಿನ ಈಚನಾಳ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದೇವದುರ್ಗ ತಾಲ್ಲೂಕಿನ ಗುಂಡೇರದೊಡ್ಡಿ, ಮಾನಶಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸಿರು ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಳದಿ ಶಾಲೆ ಪ್ರಶಸ್ತಿ: ರಾಯಚೂರು ತಾಲ್ಲೂಕಿನ ಕೆಎಂಸಿ ಗುಂಜಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿಂಗನೋಡಿ ಸರ್ಕಾರಿ ಪ್ರೌಢಶಾಲೆ, ಮಾನ್ವಿ ತಾಲ್ಲೂಕಿನ ತಮ್ಮಾಪುರ, ಲಕ್ಷ್ಮೀ ನಾರಾಯಣ ಕ್ಯಾಂಪ್‌ ಹಾಗೂ ಶಾಸ್ತ್ರೀ ಕ್ಯಾಂಪ್‌ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾಡಗಿರಿ ಸರ್ಕಾರಿ ಪ್ರೌಢ ಶಾಲೆ, ಪಾಮನಕಲ್ಲೂರು ಶಾಸಕರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಸಿಂಧನೂರು ತಾಲ್ಲೂಕಿನ ಕೃಷ್ಣಾನಗರ ಹಾಗೂ ತಾತಪ್ಪಕ್ಯಾಂಪ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದೇವದುರ್ಗ ತಾಲ್ಲೂಕಿನ ಕಂಪೇರದೊಡ್ಡಿ ಶಾಲೆಗೆ ಹಳದಿ ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.