ADVERTISEMENT

ಹೆಚ್ಚಿದ ಹಾರುಬೂದಿ ಸಾಗಣೆ: ಸಂಚಾರ ಸಂಕಟ

ಆರ್‌ಟಿಪಿಎಸ್ ಮೇಲಧಿಕಾರಿಗಳ ನಿರ್ಲಕ್ಷ್ಯ: ದೂರು

ಉಮಾಪತಿ ಬಿ.ರಾಮೋಜಿ
Published 23 ಜನವರಿ 2017, 9:41 IST
Last Updated 23 ಜನವರಿ 2017, 9:41 IST
ಹೆಚ್ಚಿದ ಹಾರುಬೂದಿ ಸಾಗಣೆ: ಸಂಚಾರ ಸಂಕಟ
ಹೆಚ್ಚಿದ ಹಾರುಬೂದಿ ಸಾಗಣೆ: ಸಂಚಾರ ಸಂಕಟ   

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಹಾರುಬೂದಿಯನ್ನು ನಿಯಮ ಉಲ್ಲಂಘಿಸಿ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುತ್ತಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ ಎಂಬುದು ಸ್ಥಳೀಯರ  ಆರೋಪ.

‘ಲಾಭಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿನ ಹಾರುಬೂದಿ ಸಾಗಣೆ ಮಾಡುತ್ತಿರುವುದರಿಂದ ರಸ್ತೆಗಳು ಹದಗೆಟ್ಟಿದ್ದು, ಬೈಕ್‌ ಸವಾರರ ಕಣ್ಣಿಗೆ ಬೂದಿ ಬಿದ್ದು ಅಪಘಾತಗಳು ಸಂಭವಿಸುತ್ತಿವೆ’ ಎಂದು ಆರೋಪಿಸುತ್ತಾರೆ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಸುರೇಶ ಮಡಿವಾಳ.

‘10 ಗಾಲಿಯ ಟ್ಯಾಂಕರ್ 25 ಟನ್‌, 12 ಗಾಲಿ 31 ಟನ್, 14 ಗಾಲಿ 37 ಟನ್ ಮತ್ತು  22 ಗಾಲಿಯ ಟ್ಯಾಂಕರ್‌ನಲ್ಲಿ 49 ಟನ್‌ರಷ್ಟು ಹಾರುಬೂದಿ ಒಯ್ಯುಬೇಕು. ಇದಕ್ಕಿಂತ ಹೆಚ್ಚಿನ ಟನ್‌ ಹಾರುಬೂದಿ ಲೋಡ್‌ಮಾಡಿಕೊಂಡು ಹೋಗುತ್ತಿದ್ದಾರೆ. ನೀಡದಿದ್ದರೆ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಪ್ರಕರಣಗಳು ನಡೆದಿವೆ’ ಎನ್ನುತ್ತಾರೆ ಅವರು.

‘ನಿಯಮ ಪ್ರಕಾರ ಬೂದಿ ಇಟ್ಟಿಗೆ ತಯಾರಿಸುವ ಕಂಪೆನಿಗಳು ಅಥವಾ ಎಜೆನ್ಸಿಗಳು ಆರ್‌ಟಿಪಿಎಸ್‌ನಿಂದ ಹಾರುಬೂದಿ ಪಡೆದುಕೊಳ್ಳಬೇಕು. ತಿಂಗಳಿಗೆ ಒಟ್ಟು 200 ಟನ್‌ ರಷ್ಟು ಹಾರು ಬೂದಿ ಟ್ಯಾಂಕರ್‌ ಮಾಲೀಕರು ತೆಗೆದುಕೊಂಡು ಹೋಗಬೇಕು.  ಕೆಲ ಟ್ಯಾಂಕರ್ ಮಾಲೀಕರು ಅಧಿಕಾರಿಗಳನ್ನು ಬೆದರಿಸಿ 600 ಟನ್‌ರಷ್ಟು ಹಾರುಬೂದಿ ಒಯ್ಯುತ್ತಿದ್ದಾರೆ. ಅದನ್ನು ಕಂಪೆನಿಗಳಲ್ಲದವರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ದೂರುತ್ತಾರೆ.

‘ಈ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಾಯಚೂರು –ಹೈದರಾಬಾದ್ ಮುಖ್ಯ ರಸ್ತೆಯಲ್ಲಿ ಟ್ಯಾಂಕರ್‌ಗಳು ಓವರ್ ಲೋಡ್ ಹಾರುಬೂದಿಯನ್ನು ತುಂಬಿಕೊಂಡು ಬರುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚಾರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಟ್ಯಾಂಕರ್‌ಗಳಿಂದ ಹೊರ ಬೀಳುವ ಬೂದಿ ರಸ್ತೆ ಮೇಲೆ ಬೀಳುವುದರಿಂದ ದ್ವಿಚಕ್ರವಾಹನ ಸವಾರರ ಕಣ್ಣಲ್ಲಿ ಬೂದಿ ಬಿದ್ದು ಅಪಘಾತ ಸಂಭವಿಸಿ ಮೃತಪಟ್ಟಿರುವ ಪ್ರಕರಣಗಳು ನಡೆದಿವೆ’ ಎನ್ನುತ್ತಾರೆ  ಸ್ಥಳೀಯ  ಸೂಗಪ್ಪ ವಗ್ಗಯ್ಯನವರ್.

‘ತಮ್ಮ ಲಾಭಕ್ಕಾಗಿ ಜನರ ಆರೋಗ್ಯದ ಮೇಲೆ ದುಷ್ಟಾರಿಣಾಮ ಬೀರುವುದನ್ನು ಲೆಕ್ಕಿಸದೆ, ಓವರ್ ಲೋಡ್ ಹಾಕಿಕೊಂಡು ಹಾರುಬೂದಿ ಸಾಗಣೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಓವರ್ ಲೋಡ್ ಮೂಲಕ ಹಾರುಬೂದಿ ಒಯ್ಯುವ ಟ್ಯಾಂಕರ್‌ಗಳನ್ನು ಆರ್‌ಟಿಓ ಅಧಿಕಾರಿಗಳು ತಪಾಸಣೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ  ವಹಿಸಿದರೆ ಹೋರಾಟ ಮಾಡುವುದಾಗಿ ವೆಂಕಟೇಶನಾಯಕ ಎಚ್ಚರಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.