ADVERTISEMENT

₹140 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:01 IST
Last Updated 24 ಮೇ 2017, 6:01 IST
ಶಕ್ತಿನಗರದ ಕೃಷ್ಣಾನದಿ ಹಳೆಯ ಸೇತುವೆ
ಶಕ್ತಿನಗರದ ಕೃಷ್ಣಾನದಿ ಹಳೆಯ ಸೇತುವೆ   

ಶಕ್ತಿನಗರ: ರಾಯಚೂರು ಮತ್ತು ಹೈದರಾಬಾದ್ ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗದಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ₹140 ಕೋಟಿ ವೆಚ್ಚದಲ್ಲಿ ಅಮೆರಿಕದ ಬೋಸ್ಟನ್ ಸೇತುವೆಯನ್ನೇ ಹೋಲುವ ಹೊಸ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಹೈದರಾಬಾದ್ ನಿಜಾಮರ ಆಡಳಿತದಲ್ಲಿ ನಿರ್ಮಿಸಲಾಗಿರುವ ದೇವಸೂಗೂರಿನ ಕೃಷ್ಣಾನದಿಯ ಹಳೆಯ ಸೇತುವೆ 35 ಕಮಾನುಗಳನ್ನು ಹೊಂದಿದೆ. 20 ಅಡಿ ಅಗಲ, 2,488 ಅಡಿ ಉದ್ದ, 60 ಅಡಿ ಎತ್ತರದ ಸೇತುವೆಯನ್ನು ಅಂದಿನ ಹೈದರಾಬಾದ್ ನಿಜಾಮರಾಗಿದ್ದ ಮೀರ್ ಉಸ್ಮಾನ್ ಅಲೀಖಾನ್ ಬಹದ್ದೂರ್ ನಿರ್ಮಾಣ ಮಾಡಿದ್ದರು.

ನಿತ್ಯ ಸಾವಿರಾರು ವಾಹನಗಳ ಓಡಾಟದಿಂದ 70 ವರ್ಷಗಳಷ್ಟು ಹಳೆಯ ಸೇತುವೆ ಶಿಥಿಲಗೊಂಡಿತ್ತು. ಕಾರಣ ಕಳೆದ ವರ್ಷ ಜೂನ್ 24ರಿಂದ ಆಗಸ್ಟ್‌ 2ನೇ ವಾರದ ವರೆಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಒಟ್ಟು ₹4.50 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಹಾಗೂ ಸೇತುವೆ ಮೇಲ್ಭಾಗದ 800 ಮೀಟರ್ ಉದ್ದ ಡಾಂಬರೀಕರಣ ಕಾಮಗಾರಿಯನ್ನು ಮುಂಬೈ ಮೂಲದ ರಿಬಿಲ್ಟ್ ಸ್ಟಕ್ಟರ್ ಸಂಸ್ಥೆ ನಿರ್ವಹಿಸಿತ್ತು.

ADVERTISEMENT

ಆದರೆ, ಮತ್ತೆ ಸೇತುವೆಯ ಮೇಲ್ಭಾಗದಲ್ಲಿ ಮೂರು ಕಡೆ ಮಧ್ಯೆ ಭಾಗದಲ್ಲಿ ಕಾಂಕ್ರಿಟ್ ಹಾಕಲು ಬಳಸಿದ್ದ ಕಬ್ಬಿಣದ ಸರಳು ಕಿತ್ತು ಹೋಗುತ್ತಿದ್ದು, ದಿನದಿಂದ ದಿನಕ್ಕೆ ಸೇತುವೆ ರಸ್ತೆ ಶಿಥಿಲಾವಸ್ಥೆ ಕಂಡು ಬರುತ್ತಿದೆ. ಇದರಿಂದ ಈ ಸೇತುವೆ ಮೇಲಿನ ಸಂಚಾರ ಅಪಾಯಕಾರಿ ಎಂಬುದು ಮನವರಿಕೆಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೊಸ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಿದೆ.

ಹಾಲಿ ಸೇತುವೆ ಪಕ್ಕದಲ್ಲಿಯೇ ಚತುಷ್ಪಥ ರಸ್ತೆ ಹೊಂದಿರುವ ಅಮೆರಿಕದ ಬೋಸ್ಟನ್ ಸೇತುವೆಯನ್ನೇ ಹೋಲುವ ಹೊಸ ಸೇತುವೆ ನಿರ್ಮಾಣಕ್ಕೆ ಶೀಘ್ರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಈ ಭಾಗದ ಹೊಸ ಸೇತುವೆ ಪ್ರಮುಖ ಆಕರ್ಷಣೀಯವಾಗಲಿದೆ.

‘ಈ ಸೇತುವೆಯಲ್ಲಿ 760 ಮೀಟರ್ ಉದ್ದ, 10ಕ್ಕೂ ಹೆಚ್ಚು ಕಂಬಗಳು ಅಳವಡಿಸಲಾಗುವುದು. ಹಳೆಯ ಸೇತುವೆಯನ್ನು ಸ್ಮಾರಕವಾಗಿ ಸಂರಕ್ಷಿಸಲೂ ಯೋಜಿಸಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸಪೇಟೆ ವಿಭಾಗದ ಎಂಜಿನಿಯರ್ ಮಹಾದೇವಯ್ಯ ತಿಳಿಸಿದರು.

ಅಂಕಿ–ಅಂಶ
* 35 ಹಳೆಯ ಸೇತುವೆಯ  ಕಮಾನುಗಳು

* 10ಕ್ಕೂ  ಹೆಚ್ಚು ಕಂಬಗಳು ಹೊಸ ಸೇತುವೆಗೆ ಅಳವಡಿಕೆ

* 8–9ತಿಂಗಳಲ್ಲಿ ಸೇತುವೆ ಕಾಮಗಾರಿ ಆರಂಭ

* * 

ಹೊಸ ಸೇತುವೆ ನಿರ್ಮಾಣಕ್ಕೆ ಚಿತ್ರದುರ್ಗ ವಿಭಾಗದಲ್ಲಿ ಬುಧವಾರ ಟೆಂಡರ್ ಕರೆಯಲಾಗಿದೆ. 8–9 ತಿಂಗಳಲ್ಲಿ ಸೇತುವೆ ಕಾಮಗಾರಿ ಆರಂಭಿಸಲಾಗುವುದು
ಮಹಾದೇವಯ್ಯ, ಎಂಜಿನಿಯರ್, ಹೊಸಪೇಟೆ ವಿಭಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.