ADVERTISEMENT

ನಿರ್ಭಯದಿಂದ ಸತ್ಯವನ್ನು ಹೇಳಿದ ಶಿವಶರಣ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 6:50 IST
Last Updated 2 ಫೆಬ್ರುವರಿ 2018, 6:50 IST

ರಾಯಚೂರು: ‘ನೇರ, ನಿಷ್ಠುರ ನುಡಿಗಳ ಶಿವಶರಣ ಮಡಿವಾಳ ಮಾಚಿದೇವ ಸತ್ಯವನ್ನು ನಿರ್ಭಯದಿಂದ ಹೇಳುತ್ತಿದ್ದರು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜಕ್ಕೆ ಮಡಿವಾಳ ಮಾಚಿದೇವರ ಕೊಡುಗೆ ಅಪಾರವಾಗಿದ್ದು, ನೇರ ನುಡಿಗಳ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಮಹಿಳೆಯರು ಕೂಡ ಹಿಂದೆ ಉಳಿದಿಲ್ಲ ಎಂಬುದು ತೋರಿಸಿರುವುದು ಶ್ಲಾಘನೀಯ’ ಎಂದು ತಿಳಿಸಿದರು.

ADVERTISEMENT

ಸಮಾರಂಭ ಉದ್ಘಾಟಿಸಿದ ಶಾಸಕ ತಿಪ್ಪರಾಜು ಹವಾಲ್ದಾರ ಮಾತನಾಡಿ, ‘ಮಡಿವಾಳ ಸಮಾಜದವರು ಜಯಂತಿ ಆಚರಣೆಗೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಅದ್ಧೂರಿಯಾಗಿ ಜಯಂತಿ ಆಚರಿಸಿ ಇತರೆ ಸಮಾಜಗಳಿಗೆ ಮಾದರಿ ಆಗಿದ್ದಾರೆ’ ಎಂದು ಹೇಳಿದರು.

ಮಡಿವಾಳ ಮಾಚಿದೇವ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸರಾಜ ಮಾತನಾಡಿ, ‘ಸಮಾಜದ ಸಂಘಟನೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ.  ಸರ್ಕಾರ ಸಮಾಜದ ಸಂಘಟನೆಗಾಗಿ ಎಲ್ಲ ಸಮಾಜದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಹಿಂದುಳಿದ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳ ಸದುಪಯೋಗ ಪಡೆದು ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ ₹10 ಲಕ್ಷ ಅನುದಾನ ಕಲ್ಪಿಸಲಾಗುವುದು’ ಎಂದರು.

ಸಾಹಿತಿ ವೀರ ಹನುಮಾನ ವಿಶೇಷ ಉಪನ್ಯಾಸ ನೀಡಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಮಾಜದ ಪತ್ರಕರ್ತ ಶಿವಪ್ಪ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಆರ್‌ಡಿಎ ಅಧ್ಯಕ್ಷ ಅಬ್ದುಲ್ ಕರೀಂ, ಮಡಿವಾಳ ಸಮಾಜದ ಅಧ್ಯಕ್ಷ ಜಿ.ಸುರೇಶ, ಹುಸೇನಪ್ಪ, ನಗರಸಭೆ ಸದಸ್ಯರಾದ ನರಸಪ್ಪ ಯಕ್ಲಾಸಪುರ, ಮಹಾಲಿಂಗ ರಾಂಪುರ, ಆಂಜನೇಯ ಯಕ್ಲಾಸಪುರ, ವಿನಯಕುಮಾರ, ರಾಮು ಗಿಲ್ಲೇರಿ, ವೀರೇಶ, ನರಸಪ್ಪ ಜೇಗರಕಲ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ ಸ್ವಾಗತಿಸಿದರು.

* * 

ಮಡಿವಾಳ ಸಮಾಜದವರಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಜರುಗಿಸುತ್ತೇನೆ
ತಿಪ್ಪರಾಜು ಹವಾಲ್ದಾರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.