ADVERTISEMENT

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶೇ 43 ಶೌಚಾಲಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 7:04 IST
Last Updated 7 ಫೆಬ್ರುವರಿ 2018, 7:04 IST
ರಾಯಚೂರು ಜಿಲ್ಲಾ ಪಂಚಾಯಿತಿ ಜಲನಿರ್ಮಲ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ.ನಂಜಯ್ಯಮಠ ಅವರು ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದರು
ರಾಯಚೂರು ಜಿಲ್ಲಾ ಪಂಚಾಯಿತಿ ಜಲನಿರ್ಮಲ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ.ನಂಜಯ್ಯಮಠ ಅವರು ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದರು   

ರಾಯಚೂರು: ‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಲ್ಲಿಯವರೆಗೂ ಶೇ 43 ರಷ್ಟು ಮಾತ್ರ ಶೌಚಾಲಯ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗಿದೆ. ಇದು ಸಮಾಧಾನ ತರುವ ಅಂಕಿ–ಅಂಶವಲ್ಲ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ.ನಂಜಯ್ಯಮಠ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಜಲನಿರ್ಮಲ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಷಯಕ್ಕೆ ಸಂಬಂಧಿಸಿದಂತೆ ಆರು ತಿಂಗಳಿನ ಹಿಂದೆ ರಾಯಚೂರು ಜಿಲ್ಲೆಗೆ ಭೇಟಿ ನೀಡಿ ಅಂಕಿ ಅಂಶ ಪರಿಶೀಲನೆ ಮಾಡಲಾಗಿತ್ತು. ಅಂದು ಶೇ 36 ರಷ್ಟಿದ್ದ ಗ್ರಾಮೀಣ ಭಾಗದ ಶೌಚಾಲಯ ನಿರ್ಮಾಣವು ಶೇ 7 ರಷ್ಟು ಮಾತ್ರ ಏರಿಕೆ ಕಂಡಿದೆ. ಈ ಸಾಧನೆಯು ನನಗೆ ಸಮಾಧಾನ ತಂದಿಲ್ಲ’ ಎಂದರು.

ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಒದಗಿಸಲು ಅನುದಾನದ ಕೊರತೆಯಿಲ್ಲ. ಅಧಿಕಾರಿಗಳು ಸಹ ಜನರ ಮನವೊಲಿಸುವ ಕೆಲಸವನ್ನು ನಿರಂತರ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ಜನರು ಸಾಂಪ್ರದಾಯಿಕ ಮನಸ್ಸಿನಿಂದ ಹೊರಗೆ ಬರುತ್ತಿಲ್ಲ ಎನ್ನುವ ಅಂಶ ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಅಧಿಕಾರಿಗಳು ತಮ್ಮ ಪ್ರಯತ್ನ ಸ್ಥಗಿತಗೊಳಿಸಬಾರದು. ಶೌಚಾಲಯ ನಿರ್ಮಾಣದ ಮಹತ್ವವನ್ನು ಮನದಟ್ಟು ಮಾಡಿಕೊಟ್ಟು ಗ್ರಾಮಗಳನ್ನು ಬಯಲು ಶೌಚಮುಕ್ತಗೊಳಿಸಬೇಕು ಎಂದು ತಿಳಿಸಿದರು.

ADVERTISEMENT

ರಾಯಚೂರು ಜಿಲ್ಲೆಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪರಿಸ್ಥಿತಿ ತುಂಬಾ ಸುಧಾರಿಸಬೇಕಾಗಿದೆ. ಅಧಿಕಾರಿಗಳಿಗೆ ಸೌಲಭ್ಯಗಳನ್ನು ಕೊಟ್ಟು ಕೆಲಸ ಕೇಳಿದರೆ ಅರ್ಥ ಇರುತ್ತದೆ. ಅಧಿಕಾರಿಗಳು ತಕ್ಕಮಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಫೆಬ್ರುವರಿ ಅಂತ್ಯದೊಳಗೆ ಶೌಚಾಲಯ ನಿರ್ಮಾಣದ ಗುರಿ ಶೇ 50 ಕ್ಕೆ ತಲುಪಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 16 ಜಿಲ್ಲೆಗಳು ಬಯಲು ಶೌಚ ಮುಕ್ತ (ಒಡಿಎಫ್‌) ಎಂದು ಘೋಷಿಸಲಾಗಿದೆ. ಶೀಘ್ರದಲ್ಲೆ ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳು ಕೂಡಾ ಬಯಲು ಶೌಚ ಮುಕ್ತ ಜಿಲ್ಲೆಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ತಿಳಿಸಿದರು.

ಶುದ್ಧ ನೀರು ಕೊಡಿ: ರಾಯಚೂರು ಜಿಲ್ಲೆಯಲ್ಲಿ ಆರ್ಸೇನಿಕ್‌ ಹಾಗೂ ಫ್ಲೊರೈಡ್‌ಯುಕ್ತ ನೀರು ಇರುವುದರಿಂದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕೆ ಸರ್ಕಾರವು ಮುತೂವರ್ಜಿ ವಹಿಸಿದೆ. ಜಿಲ್ಲೆಯಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. 65 ನೀರಿನ ಘಟಕಗಳನ್ನು ಗುತ್ತಿಗೆ ಪಡೆದಿದ್ದ ಕಂಪೆನಿಯೊಂದು ನಿರ್ವಹಣೆಯನ್ನು ಬಿಟ್ಟು ಹೋಗಿದ್ದರಿಂದ ಸಮಸ್ಯೆ ಆಗಿತ್ತು. ಅವುಗಳನ್ನು ಬೇರೆಯವರಿಗೆ ವಹಿಸಲು ಮೂರು ಸಲ ಟೆಂಡರ್‌ ಮಾಡಿದರು ಯಾರೂ ಬಂದಿರಲಿಲ್ಲ. ಎರಡು ದಿನಗಳ ಹಿಂದೆ ಒಂದು ಗುತ್ತಿಗೆದಾರ ಕಂಪೆನಿಯೊಂದಿಗೆ ಒಪ್ಪಂದವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ 36 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 18 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ. ಇನ್ನುಳಿದ ಯೋಜನೆಗಳು ವಿವಿಧ ಹಂತಗಳಲ್ಲಿ ಅನುಷ್ಠಾನವಾಗುತ್ತಿವೆ. ಒಂದು ಸಾವಿರ ಪರಿಶಿಷ್ಟ ವರ್ಗದ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಮತ್ತೊಂದು ಶುದ್ಧೀಕರಣ ಘಟಕ ಸ್ಥಾಪಿಸುವುದಕ್ಕೆ ಸರ್ಕಾರವು ಈಚೆಗೆ ಅನುಮೋದನೆ ನೀಡಿದೆ. ಗ್ರಾಮಕ್ಕೆ ಮತ್ತೊಂದು ಶುದ್ದೀಕರಣ ಘಟಕ ದೊರೆತರೆ ಎಲ್ಲ ಜನರಿಗೆ ಅನುಕೂಲ. ಎಲ್ಲ ಜನರು ನೀರು ಪಡೆಯುವುದಕ್ಕೆ ಸಾಧ್ಯವಾಗುವ ಜಾಗದಲ್ಲಿ ಎರಡೂ ಘಟಕಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮೊಹ್ಮದ್‌ ಯೂಸುಫ್‌, ಪಂಚಾಯತ್‌ರಾಜ್‌ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಇದ್ದರು.

* * 

ಬಹಿರ್ದೆಸೆಯಿಂದ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದರ ತಿಳಿವಳಿಕೆಯನ್ನು ಜನರಿಗೆ ನೀಡಬೇಕು. ಮನಸ್ಸು ಪರಿವರ್ತನೆಯಾದರೆ ಶೌಚಾಲಯ ಕಟ್ಟಿಕೊಳ್ಳುತ್ತಾರೆ.
ಎಸ್‌.ಜಿ.ನಂಜಯ್ಯಮಠ
ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.