ADVERTISEMENT

ಭತ್ತದ ನಾಡಲ್ಲಿ ‘ಅಕ್ಷರ ದೀಪ’ ಹಚ್ಚಿದ ಶಿಕ್ಷಣ ಸಂಸ್ಥೆ

ಡಿ.ಎಚ್.ಕಂಬಳಿ
Published 22 ಡಿಸೆಂಬರ್ 2023, 5:07 IST
Last Updated 22 ಡಿಸೆಂಬರ್ 2023, 5:07 IST
ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯ
ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯ   

ಸಿಂಧನೂರು: ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ಹೊರತುಪಡಿಸಿದರೆ ಸಿಂಧನೂರಿನ ಪ್ರಥಮ ದರ್ಜೆ ಸರ್ಕಾರಿ ಮಹಾವಿದ್ಯಾಲಯ ಅತಿ ಹಳೆಯ ಕಾಲೇಜು. ಭತ್ತದ ಬೆಳೆಗೆ ಹೆಸರಾದ ಪ್ರದೇಶದಲ್ಲಿ ಅಕ್ಷರ ದೀಪ ಹಚ್ಚುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರು ವಿದ್ಯಾಲಯಕ್ಕೆ ಈಗ 50ರ ಸಂಭ್ರಮ.

1971ರಲ್ಲಿ ಕೇವಲ 22 ವಿದ್ಯಾರ್ಥಿಗಳಿಂದ ಆರಂಭವಾದ ಕಾಲೇಜಿನಲ್ಲಿ ಪ್ರಸ್ತುತ 3,100 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಂಸ್ಥೆಯ ಆರಂಭದಿಂದ ಇಲ್ಲಿಯವರೆಗೆ 35 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು, ಸರ್ಕಾರಿ ಸೇರಿದಂತೆ ವಿವಿಧ ರಂಗದ ಹಲವು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ಕ್ಷೇತ್ರದ ಮಾಜಿ ಶಾಸಕ ದಿ.ಗದ್ರಟಗಿ ಅಮರೇಗೌಡರ ಶಿಕ್ಷಣ ಪ್ರೇಮ ಮತ್ತು ಅವಿರತ ಹೋರಾಟದ ಪ್ರತಿಫಲವಾಗಿ ಸರ್ಕಾರಿ ಮಹಾವಿದ್ಯಾಲಯ ಜನ್ಮ ತಾಳಿತು ಎಂದು ಹಲವರು ಸ್ಮರಿಸುತ್ತಾರೆ.

ADVERTISEMENT

ಕಾಲೇಜು ಪ್ರಾರಂಭದ ದಿನಗಳಲ್ಲಿ ಪಿಎಲ್‍ಡಿ ಬ್ಯಾಂಕ್‌ನಲ್ಲಿ ತರಗತಿಗಳು ನಡೆಯುತ್ತಿದ್ದವು. ಹಲವು ವರ್ಷಗಳ ಬಳಿಕ ಕುಷ್ಟಗಿ ರಸ್ತೆಯಲ್ಲಿ 32 ಎಕರೆ ಸರ್ಕಾರಿ ಜಮೀನಿನಲ್ಲಿ 1981ರಲ್ಲಿ ಕಟ್ಟಡ ನಿರ್ಮಿಸಲಾಗಿದೆ. 2003ರಲ್ಲಿ ಈ ಕಾಲೇಜು ಕಲಬುರಗಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿತ್ತು. 2021-22 ನೇ ಸಾಲಿನಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರ್ಪಡೆಯಾಗಿದೆ.

70 ಸಾವಿರ ಪುಸ್ತಕ: ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಅಂದರೆ 70 ಸಾವಿರ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಇಲ್ಲಿದೆ. ಎನ್‍ಸಿಸಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ಈ ಸಂಸ್ಥೆಯಲ್ಲಿ ಎನ್‍ಎಸ್‍ಎಸ್, ಸ್ಕೌಟ್ಸ್ ಆಂಡ್ ಗೈಡ್ಸ್ ಸಂಸ್ಥೆಗಳ ಅಡಿಯಲ್ಲಿ ಹಲವಾರು ವಿದ್ಯಾರ್ಥಿಗಳು ಸಾಮಾಜಿಕ ಸೇವಾ ಕೆಲಸಗಳಲ್ಲಿ ತೊಡಗಿದ್ದಾರೆ.

‘ಇದುವರೆಗೆ ಕಾಲೇಜಿನ ವಿದ್ಯಾರ್ಥಿಗಳಿಗೆ 791 ಲ್ಯಾಪ್‍ಟಾಪ್, 819 ಟ್ಯಾಬ್‍ಗಳನ್ನು ವಿತರಿಸಲಾಗಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 2022-23ನೇ ಸಾಲಿನಲ್ಲಿ ಪದವಿ ಕೋರ್ಸ್‍ಗಳಲ್ಲಿ 5 ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಪಡೆದಿದ್ದಾರೆ’ ಎಂದು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ವೆಂಕಟನಾರಾಯಣ ತಿಳಿಸಿದ್ದಾರೆ.

‘ಕಾಲೇಜಿನಲ್ಲಿ ಬಿಎ., ಬಿಕಾಂ., ಬಿಎಸ್‍ಸಿ, ಬಿಬಿಎ, ಬಿಸಿಎ ಪದವಿ ಕೋರ್ಸ್‍ಗಳು, ಎಂಎ, ಎಂಎಸ್‍ಸಿ, ಎಂ.ಕಾಂ ಸ್ನಾತಕೋತ್ತರ ತರಗತಿಗಳನ್ನು ಬೋಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನ್ಯಾಕ್ ಕಮೀಟಿಯಿಂದ ಬಿ+ ಶ್ರೇಣಿ ಪಡೆದಿದ್ದರಿಂದ ಕಾಲೇಜಿಗೆ ₹3 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಿಂದ ಗ್ರಂಥಾಲಯ, ಪ್ರಯೋಗಾಲಯ ಕಟ್ಟಡ ನಿರ್ಮಿಸಲಾಗಿದೆ. ಅಲ್ಲದೇ ವಿಜ್ಞಾನ ಉಪಕರಣಗಳನ್ನು ಖರೀದಿಸಲು ನೆರವಾಗಿದೆ’ ಎನ್ನುತ್ತಾರೆ ಪ್ರಾಚಾರ್ಯ ಪ್ರಹ್ಲಾದರೆಡ್ಡಿ.

ಡಿ.30 ರಂದು ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ 6 ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಿರುವುದು ವಿಶೇಷವಾಗಿದೆ.

ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸರ್ಕಾರಿ ಮಹಾವಿದ್ಯಾಲಯ ವರದಾನವಾಗಿದೆ. ಇಲ್ಲಿನ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಓದಿನ ಹಸಿವು ನೀಗಿಸುತ್ತಿದ್ದಾರೆ. ನಾವು ಓದುತ್ತಿರುವಾಗ ಕಾಲೇಜಿನ ಸುವರ್ಣಮಹೋತ್ಸವ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ
- ಸ್ನೇಹಾ, ವಿದ್ಯಾಶ್ರೀ, ಹರ್ಷಾ ವಿದ್ಯಾರ್ಥಿನಿಯರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಹಂಪನಗೌಡ ಬಾದರ್ಲಿಯವರು ಕಾಲೇಜಿನ ಸುವರ್ಣ ಮಹೋತ್ಸವ ಆಚರಣೆಗೆ ಅತ್ಯಂತ ಮುತುವರ್ಜಿ ವಹಿಸಿದ್ದಾರೆ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಕಾಲೇಜಿಗೆ ಕರೆತರುತ್ತಿರುವುದು ಹಳೆಯ ವಿದ್ಯಾರ್ಥಿಗಳಿಗೆ ಹರ್ಷ ತಂದಿದೆ
- ನಿರುಪಾದೆಪ್ಪ ಗುಡಿಹಾಳ, ಪ್ರಹ್ಲಾದ ಗುಡಿ, ಗಂಗಾಧರ ಗೊರೇಬಾಳ, ಹಳೆಯ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.