ADVERTISEMENT

ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ

ಕಂದಾಯ ಅದಾಲತ್‌, ಪಹಣಿ ತಿದ್ದುಪಡಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 9:21 IST
Last Updated 29 ಜುಲೈ 2016, 9:21 IST

ಕನಕಪುರ: ಪಹಣಿಯಲ್ಲಿನ ಲೋಪದೋಷ ಸರಿಪಡಿಸಲು ಕಂದಾಯ ಕಚೇರಿಗೆ ಅಲೆಯುವ ಬದಲು ಅಧಿಕಾರಿಗಳೇ ನಿಮ್ಮ ಮನೆಬಾಗಿಲಿಗೆ ಬಂದಿದ್ದಾರೆ. ಸಾರ್ವಜನಿಕರು ಈ ಸದಾವಕಾಶ  ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾತನೂರು ಜಿಲ್ಲಾ ಪಂಚಾಯಿತಿ ಸದಸ್ಯ ಕುರುಬಳ್ಳಿ ಶಂಕರ್‌ ಹೇಳಿದರು. 

ತಾಲ್ಲೂಕಿನ ಚೂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಂದಾಯ ಅದಾಲತ್‌, ಪಹಣಿ ತಿದ್ದುಪಡಿ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಲಾಖೆಯಲ್ಲಿ ದಾಖಲಾತಿಗಳನ್ನು ಕಂಪ್ಯೂಟರೀಕರಣಗೊಳಿಸುವ ಸಂದರ್ಭ ದಲ್ಲಿ ಹಾಗೂ ಅಧಿಕಾರಿಗಳ ಕೈತಪ್ಪಿನಿಂದ ಜಮೀನುಗಳ ದಾಖಲಾತಿ ಗಳಲ್ಲಿ ಲೋಪದೋಷಗಳಿವೆ. ಅದನ್ನು ಸರಿಪಡಿಸಲು ಪ್ರತಿಯೊಬ್ಬ ರೈತರು ಕಂದಾಯ ಇಲಾಖೆ ಕಚೇರಿಗೆ ಹೋಗಿ ಹಣಕಟ್ಟಿ ತಿಂಗಳಾನುಗಟ್ಟಲೆ ಕಾಯ್ದು ಸರಿಪಡಿಸಿಕೊಳ್ಳಬೇಕಿದೆ, ಸರ್ಕಾರವೇ ಇಂದು ನಿಮ್ಮ ಬಳಿಗೆ ಅಧಿಕಾರಿಗಳನ್ನು ಕಳಿಸಿ ಸರಿಪಡಿಸುವ ಕೆಲಸ ಮಾಡುತ್ತಿದೆ ಎಂದರು.

ಸಾತನೂರು ಉಪತಹಸೀಲ್ದಾರ್‌ ಗಾಯತ್ರಿ ಮಾತನಾಡಿ ಭೂದಾಖಲೆಗಳ ತಿದ್ದುಪಡಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ಅದಾಲತ್‌ ಕಾರ್ಯಕ್ರಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಮಾಡಲಾಗುತ್ತಿದೆ, ರೈತರು ಪಹಣಿಯಲ್ಲಿನ ಲೋಪದೋಷ, 3 ಮತ್ತು 9 ಕಾಲಂ ತಾಳೆ ಇಲ್ಲದಿರುವುದು, ವಿಸ್ತೀರ್ಣದಲ್ಲಿ ವ್ಯತ್ಯಾಸ, ಖಾತೆ ಆಗಿದಿರುವುದು. ಅದಲು–ಬದಲು ಆಗಿರುವುದನ್ನು ಸರಿಪಡಿಸಲು ಅರ್ಜಿ ನೀಡಬೇಕಿದೆ ಎಂದರು.

ಸಾತನೂರು ರಾಜಸ್ವ ನಿರೀಕ್ಷಕ(ಆರ್‌.ಐ) ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರುತ್ತಿದ್ದು ಮುಂದಿನ ದಿನಗಳಲ್ಲಿ ಮಾಲಿಕರ ಭಾವಚಿತ್ರದೊಂದಿಗೆ, ಗ್ರಾಮ ಲೆಕ್ಕಾಧಿಕಾರಿಗಳ ಡಿಜಿಟಲ್‌ ಸಹಿಯೊಂದಿಗೆ ಪಹಣಿಗಳು ಬರುತ್ತವೆ, ಪಹಣಿದಾರರು ತಮ್ಮ ಭಾವಚಿತ್ರಗಳನ್ನು ಕಂದಾಯ ಇಲಾಖೆಗೆ ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಆರ್‌.ಸಂಜಯ್‌ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮೇಲ್ಮಟ್ಟ ಅಧಿಕಾರಿಗಳಿಂದ ಕೆಲಸ ಮಾಡಿಸಬಹುದು, ಆದರೆ ತಳಮಟ್ಟದ ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸುತ್ತಾರೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕುರುಬಳ್ಳಿನಾಗೇಶ್‌, ಗೇರಳ್ಳಿ ರವೀಶ್‌, ಚೂಡಳ್ಳಿ ಗ್ರಾಮ ಪಂಚಾಯಿತಿ ಪಿ.ಡಿ.ಒ ಕೃಷ್ಣ, ಕಾರ್ಯದರ್ಶಿ ರಮೇಶ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಹರ್ಷಿತಾ, ವಿಶ್ವನಾಥ್‌, ಮಂಜುಳಾ, ಜ್ಯೋತಿ ಸೇರಿದಂತೆ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

ಅದಾಲತ್‌ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ರೈತರು ಆಗಮಿಸಿ ಪಹಣಿ ಸಂಬಂಧಿತ ಸಮಸ್ಯೆಗಳ 15 ಅರ್ಜಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.