ADVERTISEMENT

ಅನುದಾನ ವಾಪಸ್‌ ಹೋದರೆ ಅಧಿಕಾರಿಗಳೇ ಹೊಣೆ

ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ರಾಜಣ್ಣ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 7:00 IST
Last Updated 1 ಮಾರ್ಚ್ 2017, 7:00 IST
ಚನ್ನಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷ ಎಚ್.ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು
ಚನ್ನಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷ ಎಚ್.ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು   

ಚನ್ನಪಟ್ಟಣ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ₹41 ಲಕ್ಷ ಅನುದಾನ ಬಂದಿದ್ದು, ಆದರೆ ಇಲಾಖೆ ಅಧಿಕಾರಿಗಳು ಇದನ್ನು ಬಳಕೆ ಮಾಡಿಕೊಂಡಿಲ್ಲ. ಅನುದಾನ ವಾಪಸ್ ಹೋದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನುದಾನ ಬಂದು ಏಳು ತಿಂಗಳು ಕಳೆದಿದೆ. ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇಷ್ಟಿದ್ದರೂ ಅನುದಾನ ಬಳಕೆ ಏಕೆ ಮಾಡಿಲ್ಲ ಎಂದು ಸಮಾಜ ಕಲ್ಯಾಣಾಧಿಕಾರಿಯನ್ನು ಅವರು ತರಾಟೆಗೆ ತೆಗೆದುಕೊಂಡರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತ್ಯಭಾಮ ಪ್ರತಿಕ್ರಿಯಿಸಿ, ಈಗ ಬಂದಿರುವ ಅನುದಾನ ಯೋಜನೇತರ ಅನುದಾನವಾಗಿದೆ. ಇದನ್ನು ವಿಶೇಷ ಅನುಮತಿ ಪಡೆದು ವಿದ್ಯಾರ್ಥಿನಿಲಯಗಳ ಯೋಜನೇತರ ಸೌಲಭ್ಯಕ್ಕೆ ಬಳಸಿಕೊಳ್ಳಬೇಕು. ಹಾಗಾಗಿ ಅನುದಾನವನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಜಣ್ಣ, ಅನುದಾನ ಬಂದು ಏಳು ತಿಂಗಳು ಕಳೆದಿದ್ದರೂ ಅದರ ಬಗ್ಗೆ ಚಿಂತಿಸದೆ ಈಗ ಯೋಜನೆ, ಯೋಜನೇತರ ಎನ್ನುತ್ತಿದ್ದೀರಿ, ಶೀಘ್ರ ಅದರ ಬಗ್ಗೆ ಕ್ರಮ ಕೈಗೊಳ್ಳಿ, ಒಂದು ವೇಳೆ ಅನುದಾನ ವಾಪಸ್ ಹೋದರೆ  ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸದಸ್ಯೆ ಮೀರಾ ಮಾತನಾಡಿ, ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅಧಿಕಾರಿಗಳು ತಮ್ಮಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ.

ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡುವಾಗಲೂ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ. ಎಷ್ಟು ಮಂದಿ ಫಲಾನುಭವಿಗಳಿಗೆ ಯೋಜನೆ ತಲುಪಿಸಿದ್ದೀರಿ, ಬರ ಪರಿಹಾರ ಕಾಮಗಾರಿಯಡಿ ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂಬುದನ್ನು ಸಭೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಎಚ್.ರಾಜಣ್ಣ ಮಾತನಾಡಿ, ಸವಲತ್ತು ಹಂಚಿಕೆ ಕಾರ್ಯಕ್ರಮಕ್ಕೆ ತಾ.ಪಂ. ಸದಸ್ಯರನ್ನು ಆಹ್ವಾನಿಸಬೇಕು ಎಂದು ಈ ಹಿಂದೆಯೇ ಸೂಚಿಸಿದ್ದರೂ ಅಧಿಕಾರಿಗಳು ಗಮನ ನೀಡುತ್ತಿಲ್ಲ. ಮುಂದೆ ಹೀಗಾದರೆ ಸದಸ್ಯರ ಅಧಿಕಾರ ತೋರಿಸುತ್ತೇವೆ ಎಂದು ಕಿಡಿಕಾರಿದರು.

ತಾಲ್ಲೂಕಿನಲ್ಲಿ ಬರದಿಂದಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪಶುಸಂಗೋಪನಾ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಸದಸ್ಯರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ‘ಬರ ಪರಿಹಾರದಡಿ ಮೇವು ಖರೀದಿಸುವ ಅಧಿಕಾರ ನಮಗಿಲ್ಲ. ಮೇವು ಖರೀದಿಸಲು ಟಾಸ್ಕ್ ಫೋರ್ಸ್ ಗೆ ₹20 ಲಕ್ಷ ಅನುದಾನ ಬಿಡುಗಡೆಯಾಗಿದೆ. ತಹಶೀಲ್ದಾರ್ ಅವರು ಮೇವು ಖರೀದಿಸುವ ಅಧಿಕಾರ ಹೊಂದಿದ್ದಾರೆ’ ಎಂದರು.

ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಮುಖ್ಯ ಚರ್ಚೆಗಳು ನಡೆಯಲಿಲ್ಲ. ಪ್ರತಿ ಸಭೆಗಳಲ್ಲೂ ಸುಮ್ಮನೆ ಕುಳಿತಿರುತ್ತಿದ್ದ ಮಹಿಳಾ ಸದಸ್ಯರು ಈ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದು ಕಂಡುಬಂತು. ಉಪಾಧ್ಯಕ್ಷೆ ಸಾಕಮಾದಮ್ಮ,  ಕಾರ್ಯನಿರ್ವಣಾಧಿಕಾರಿ ಲೋಕೇಶ್ ಇದ್ದರು.

*
ಜನರಿಗೆ ನೀಡುವ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಜನಪ್ರತಿನಿಧಿಗಳ ಶಿಫಾರಸು ಪಡೆದು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
-ಮೀರಾ,
ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT