ADVERTISEMENT

ಅವಳಿ ನಗರದಲ್ಲೂ ನೀರಿನ ಬವಣೆ

ಕೆಲವೆಡೆ ವಾರಕ್ಕೊಮ್ಮೆ ನೀರು ಪೂರೈಕೆ: ಟ್ಯಾಂಕರ್‌ ಮೊರೆ ಹೋಗಲು ನಗರಸಭೆ ಸಿದ್ಧತೆ

ಆರ್.ಜಿತೇಂದ್ರ
Published 6 ಮೇ 2017, 8:41 IST
Last Updated 6 ಮೇ 2017, 8:41 IST

ರಾಮನಗರ: ಕಾವೇರಿ ಕಣಿವೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಇಳಿಕೆಯಾಗುತ್ತಿದ್ದಂತೆಯೇ ರಾಮನಗರ–ಚನ್ನಪಟ್ಟಣ ಅವಳಿನಗರಕ್ಕೂ ಕುಡಿಯುವ ನೀರಿನ ಕೊರತೆ ಎದುರಾಗ ತೊಡಗಿದೆ. ಅನಿವಾರ್ಯ ಪರಿಸ್ಥಿತಿ ಎದುರಾದಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ನಗರಸಭೆ ಸಿದ್ಧತೆ ನಡೆಸಿದೆ.

ಅವಳಿ ನಗರಕ್ಕೆ ನಿತ್ಯ ಸುಮಾರು 22 ಎಂಎಲ್‌ಡಿಯಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ. ಇದರಲ್ಲಿ ರಾಮನಗರ ಹಾಗೂ ಚನ್ನಪಟ್ಟಣಕ್ಕೆ ತಲಾ 6.5 ಎಂಎಲ್‌ಡಿ ಹಾಗೂ ಸುತ್ತಲಿನ ಗ್ರಾಮಗಳಿಗೆ ಮತ್ತು ಸೋರಿಕೆಯಾಗುವ ನೀರಿನ ಪ್ರಮಾಣವೂ ಸೇರಿದೆ.

ಬೆಂಗಳೂರು ಜಲಮಂಡಳಿಯು ಮಹಾನಗರಕ್ಕೆ ಪೂರೈಸುತ್ತಿರುವ ನೀರಿನ ಮೂಲವನ್ನೇ ಆಧರಿಸಿ ಟಿ.ಕೆ. ಹಳ್ಳಿ ಬಳಿಯ ಸಂಗ್ರಹಾಗಾರದಿಂದ ನಮ್ಮ ಅವಳಿ ನಗರಕ್ಕೂ ಕಾವೇರಿ ನೀರನ್ನು ಪಡೆದುಕೊಳ್ಳಲಾಗುತ್ತಿದೆ.

ಬೆಂಗಳೂರಿಗೆ ಸರಬರಾಜಾಗಿ ಉಳಿಯುವ ನೀರನ್ನೇ ನೈಸರ್ಗಿಕವಾಗಿ ಮರು ಶುದ್ಧೀಕರಿಸಿ ನಿತ್ಯ ಪೂರೈಕೆ ಮಾಡಲಾಗುತ್ತಿದೆ. ಬೃಹತ್‌ ಬೆಂಗಳೂರಿಗೆ ನೀರು ಪೂರೈಕೆಯಗುವವರೆಗೂ ನಮಗೆ ನೀರಿನ ಆತಂಕ ಇಲ್ಲ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ಆದರೆ ಇಡೀ ಕಾವೇರಿ ಕಣಿವೆಯೇ ಬರಿದಾಗುತ್ತಿರುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಈಗಾಗಲೇ ಕೆಆರ್‌ಎಸ್‌ ಜಲಾಶಯದ ಡೆಡ್‌ ಸ್ಟೋರೇಜ್‌ ನೀರನ್ನೂ ಹೀರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಸಹ ನೀರನ್ನು ಮಿತವಾಗಿ ಬಳಕೆ ಮಾಡಲು ಆರಂಭಿಸಿದೆ.

ಹೀಗಾಗಿ ನಮ್ಮ ಪಾಲಿಗೆ ಸಿಗುತ್ತಿರುವ ನೀರಿನ ಪ್ರಮಾಣವೂ ಕಡಿಮೆಯಾಗುತ್ತಾ ಬರತೊಡಗಿದೆ. ಕಾವೇರಿ ಕೊಳ್ಳ ಬತ್ತಿದ ಹಿನ್ನೆಲೆಯಲ್ಲಿ ಸದ್ಯ ನಿತ್ಯ ಟಿ.ಕೆ. ಹಳ್ಳಿ ಸಂಗ್ರಹಾಕಾರದಿಂದ 18 ಎಂಎಲ್‌ಡಿಯಷ್ಟು ನೀರು ಮಾತ್ರ ಲಭ್ಯವಾಗುತ್ತಿದೆ. ಉಳಿದ 4 ಎಂಎಲ್‌ಡಿಯಷ್ಟು ನೀರನ್ನು ಅರ್ಕಾವತಿ ನದಿಯಿಂದ ಶುದ್ಧೀಕರಿಸಿ ರಾಮನಗರದ 1ರಿಂದ 10ನೇ ವಾರ್ಡುಗಳ ಜನರಿಗೆ ಪೂರೈಕೆ ಮಾಡಲಾಗುತ್ತಿದೆ.

ಕೊಳವೆ ಬಾವಿ ನೀರು ಬಳಕೆ: ಅನಿವಾರ್ಯ ಸಂದರ್ಭಗಳಲ್ಲಿ ಜಲಮಂಡಳಿಯು ಕೊಳವೆ ಬಾವಿಗಳ ಮೂಲಕ ನೀರನ್ನು ಮೇಲಕ್ಕೆತ್ತಿ ನಗರದ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಅವಳಿನಗರ ವ್ಯಾಪ್ತಿಯಲ್ಲಿ ಈ ಉದ್ದೇಶಕ್ಕಾಗಿ ತಲಾ 100 ಬೋರ್‌ವೆಲ್‌ ಈಗಾಗಲೇ ಕೊರೆಯಿಸಲಾಗಿದೆ. ಇವುಗಳಿಂದ ನಿತ್ಯ ಸುಮಾರು 2.5 ಎಂಎಲ್‌ಡಿಯಷ್ಟು ನೀರನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಘುನಾಥ್ ಶೆಟ್ಟಿ.

ವಾರಕ್ಕೆ ಒಮ್ಮೆ ನೀರು: ಚನ್ನಪಟ್ಟಣದಲ್ಲಿ ಎರಡು ದಿನಕ್ಕೆ ಒಮ್ಮೆ ಹಾಗೂ ರಾಮನಗರದಲ್ಲಿ 4–5 ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡುತ್ತಿರುವುದಾಗಿ ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕೆಲವು ವಾರ್ಡ್‌ಗಳಲ್ಲಿ ವಾಸ್ತವ ಸ್ಥಿತಿಯೇ ಬೇರೆಯಾಗಿದೆ. ರಾಮನಗರದ 1ರಿಂದ 10ನೇ ವಾರ್ಡ್‌ ವ್ಯಾಪ್ತಿಯಲ್ಲಿ ಕೆಲವೊಮ್ಮೆ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಅದೂ ಅರ್ಕಾವತಿ ನೀರಾದ ಕಾರಣ ನಿತ್ಯ ಬಳಕೆಗೂ ಜನರು ಹಿಂಜರಿಯುತ್ತಿದ್ದಾರೆ.

ಟ್ಯಾಂಕರ್‌ ನೀರು ಪೂರೈಕೆ: ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವ ವಾರ್ಡುಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ನಗರಸಭೆ  ಮುಂದಾಗಿದೆ.

‘ನಗರದ 18, 22, 23, 24 ವಾರ್ಡುಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಹೀಗಾಗಿ ಇಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ನಗರಸಭೆ ಆಯುಕ್ತ ಕೆ. ಮಾಯಣ್ಣ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಸಭೆಯಲ್ಲಿರುವ ಎರಡು ಟ್ಯಾಂಕರ್‌ ಜೊತೆಗೆ ಮೂರು ಟ್ಯಾಂಕರ್‌ ಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ. ಸದ್ಯ ಬಾಡಿಗೆ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ

ನಡೆದಿದ್ದು, ಸೋಮವಾರದಿಂದ ವಾರ್ಡುಗಳಿಗೆ ನೀರು ಪೂರೈಕೆ ಸಾಧ್ಯವಾಗಲಿದೆ. ನಿತ್ಯ ಸುಮಾರು 20–25 ಟ್ಯಾಂಕರ್‌ನಷ್ಟು ನೀರು ಪೂರೈಕೆ ಗುರಿ ಹೊಂದಲಾಗಿದೆ’ ಎಂದು ಅವರು ಹೇಳಿದರು.

*
ಬಿಡಬ್ಲ್ಯುಎಸ್‌ಎಸ್‌ಬಿಯಿಂದ ನಮಗೆ ನೀರು ಸಿಗುತ್ತಿರುವ ಕಾರಣ ಬೆಂಗಳೂರಿಗೆ ನೀರು ಪೂರೈಕೆಯಾಗುವವರೆಗೂ ಸಮಸ್ಯೆ ಇಲ್ಲ. ಒಂದು ವೇಳೆ ಮಹಾನಗರಿಗೆ ನೀರು ಪೂರೈಕೆ ಸ್ಥಗಿತಗೊಂಡರೆ ನಮಗೂ ತೊಂದರೆ ಆಗಲಿದೆ.
-ರಘುನಾಥ ಶೆಟ್ಟಿ,
ಎಇಇ, ಜಲಮಂಡಳಿ

*
ರಾಮನಗರದ ನಾಲ್ಕು ವಾರ್ಡುಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಪ್ರದೇಶಗಳಿಗೆ ಸೋಮವಾರದಿಂದ ಟ್ಯಾಂಕರ್ ನೀರು ಪೂರೈಕೆ ಆರಂಭವಾಗಲಿದೆ.
-ಕೆ. ಮಾಯಣ್ಣ ಗೌಡ,
ಆಯುಕ್ತ, ರಾಮನಗರ ನಗರಸಭೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.