ADVERTISEMENT

ಎಪಿಎಂಸಿಗಳ ಸಾಮರ್ಥ್ಯ ಹೆಚ್ಚಿಸಬೇಕು

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 6:45 IST
Last Updated 20 ಜುಲೈ 2017, 6:45 IST
ರಾಯಚೂರು ಕೃಷಿ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗವು ಬುಧವಾರದಿಂದ ಆಯೋಜಿಸಿದ 10 ದಿನಗಳ ‘ಐಸಿಎಆರ್‌ ಅಲ್ಪಾವಧಿ ಕೋರ್ಸ್‌’ನ್ನು  ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಉದ್ಘಾಟಿಸಿದರು
ರಾಯಚೂರು ಕೃಷಿ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗವು ಬುಧವಾರದಿಂದ ಆಯೋಜಿಸಿದ 10 ದಿನಗಳ ‘ಐಸಿಎಆರ್‌ ಅಲ್ಪಾವಧಿ ಕೋರ್ಸ್‌’ನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಉದ್ಘಾಟಿಸಿದರು   

ರಾಯಚೂರು: ಕೃಷಿ ಉತ್ಪನ್ನಗಳನ್ನು ರೈತರು ಯೋಗ್ಯ ದರದಲ್ಲಿ ಮಾರಾಟ ಮಾಡಿಕೊಳ್ಳುವುದಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಆಧುನಿಕ ಮಾರುಕಟ್ಟೆ ವ್ಯವಸ್ಥೆ ಅಳವಡಿಸಬೇಕು. ಎಲ್ಲ ಎಪಿಎಂಸಿಗಳ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಸಲಹೆ ನೀಡಿದರು.

ರಾಯಚೂರು ಕೃಷಿ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗವು ಬುಧವಾರದಿಂದ ಆರಂಭಿಸಿದ 10 ದಿನಗಳ ‘ಐಸಿಎಆರ್‌ ಅಲ್ಪಾವಧಿ ಕೋರ್ಸ್‌’ನ್ನು ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆ ಬದಲಾಗಿದೆ. ಎನ್‌ ಸ್ಪಾಟ್‌ ಮಾರ್ಕೆಟಿಂಗ್‌, ಫ್ಯುಚರ್‌ ಮಾರ್ಕೆಟಿಂಗ್‌, ಆನ್‌ಲೈನ್‌ ಮಾರ್ಕೆಟಿಂಗ್‌ ಈಚೆಗೆ ಜನಪ್ರಿಯವಾಗುತ್ತಿವೆ. ಆಧುನಿಕ ಮಾರುಕಟ್ಟೆಯಲ್ಲಿ ಮಾರಾಟ ಹಾಗೂ ಖರೀದಿಯನ್ನು ಒಪ್ಪುವ ಅಥವಾ ಕೈ ಬಿಡುವ ಸ್ವಾತಂತ್ರ್ಯ ಇರುತ್ತದೆ. ಸ್ಪರ್ಧಾತ್ಮಕ ದರ ಪಡೆಯುವುದಕ್ಕೆ ಆಧುನಿಕ ಮಾರುಕಟ್ಟೆ ಅವಕಾಶ ನೀಡಿದೆ ಎಂದರು.

ADVERTISEMENT

ರೈತರಿಗೆ ಸಾಲ ಕೊಡುವ ವ್ಯವಸ್ಥೆ ಮುಖ್ಯವಾಗಿ ಸುಧಾರಿಸಬೇಕಿದೆ. ಶೇ 76 ರಷ್ಟು ರೈತರು ಮಾತ್ರ ಸಾಂಸ್ಥಿಕ ಸಾಲ ಪಡೆಯುತ್ತಿದ್ದಾರೆ. ಲೇವಾದೇವಿ ಅಥವಾ ಸಂಬಂಧಿಗಳಿಂದ ರೈತರು ಸಾಲ ಪಡೆಯುವುದು ತಪ್ಪುತ್ತಿಲ್ಲ. ಬೆಳೆಗಳನ್ನು ಬೆಳೆಯುವ ಹಂತದಲ್ಲೆ ಅದನ್ನು ಮಾರಾಟದ ವಿಧಾನದ ಬಗ್ಗೆಯೂ ಯೋಜಿಸಬೇಕು. ಹವಾಮಾನ ವೈಪರೀತ್ಯದಲ್ಲಿ ಬೆಳೆಗಳನ್ನು ಬೆಳೆಯುವುದು ದೊಡ್ಡ ಸವಾಲು ಎಂದು ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಿಂದ ಯಾವುದೇ ಉತ್ಪನ್ನವನ್ನು ಖರೀದಿಸುವುದಿಲ್ಲ. ಆದರೆ, ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವುದು ಎಪಿಎಂಸಿ ಕೆಲಸ. ಬಹಳ ಕಡೆಗಳಲ್ಲಿ ರೈತರಿಂದ ಅನಗತ್ಯ ಕಮಿಷನ್‌ ವಸೂಲಿ ಮಾಡಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ವ್ಯಾಪಾರ ನಡೆಸಬಾರದು ಎನ್ನುವುದನ್ನು ಕನಿಷ್ಠ ಎಪಿಎಂಸಿಯಲ್ಲಿಯಾದರೂ ಜಾರಿಯಾಗಬೇಕು. ಈ ಸಂಬಂಧ ಕಾನೂನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಂ.ಸಾಲಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಲಸಚಿವ ಡಾ.ಡಿ.ಎಂ. ಚಂದರಗಿ, ಡಾ.ಎಂ.ಜಿ.ಪಾಟೀಲ, ಡಾ.ಎ.ಎಸ್‌. ಹಳೇಪ್ಯಾಟಿ, ಡಾ. ಬಸಪ್ಪಾ ಇದ್ದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಜಾಗೃತಿ ಬಿ.ದೇಶಮಾನ್ಯ ಸ್ವಾಗತಿಸಿದರು. ಪ್ರಾಧ್ಯಾಪಕ ಲೋಕೇಶ ಎಚ್‌. ನಿರೂಪಿಸಿದರು.

ಸರ್ಕಾರಿ ಯೋಜನೆಗಳ ಸದ್ಬಳಕೆಗೆ ಸಲಹೆ(ಸಿರವಾರ ವರದಿ): ‘ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸುವುದೇ ನಮ್ಮ ಗುರಿ’ ಎಂದು  ಕೃಷಿ ಬೆಲೆ ಆಯೋಗದ ರಾಜ್ಯ ಅಧ್ಯಕ್ಷ  ಡಾ.ಟಿ.ಎನ್‌.ಪ್ರಕಾಶ ಕಮ್ಮರೆಡ್ಡಿ ಹೇಳಿದರು.

ಸಮೀಪದ ಜಕ್ಕಲದಿನ್ನಿ ಗ್ರಾಮದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ  ಮತ್ತು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ರೈತರ ಆದಾಯ ಮತ್ತು ಕಲ್ಯಾಣವೃದ್ಧಿ ಕಾರ್ಯ ಯೋಜನೆಯ’  ಫಲಾನುಭವಿ ರೈತರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ನೆಮ್ಮದಿಯಿಂದ ಜೀವನ ನಡೆಸುವುದು ಮುಖ್ಯ. ಅದಕ್ಕೆ ಅನುಕೂಲವಾಗುವಂತೆ ರೈತರ ಹೊಲಗಳ ಮಣ್ಣು, ಇಳುವರಿಗಳ ಸಮೀಕ್ಷೆ  ಮಾಡಿ ಅದರಲ್ಲಿರುವ ಕೊರತೆ ನಿವಾರಿಸಿ ಅನುಕೂಲ ಮಾಡಿಕೊಡಲಾಗುವುದು’ ಎಂದರು.

ರೈತರ ಆದಾಯ ಕಲ್ಯಾಣಕ್ಕೆ ಸರ್ಕಾರದಿಂದ 52 ಯೋಜನೆಗಳನ್ನು ರೂಪಿಸಲಾಗಿದೆ. ಆಯೋಗದಿಂದ ಕೃಷಿ ಜೊತೆಗೆ ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಇಲಾಖೆ ಸೇರಿದಂತೆ ಸರ್ಕಾರ ಅನುದಾನಗಳ ಸಮಗ್ರ ಮಾಹಿತಿ ನೀಡಿ ರೈತರ ಕಲ್ಯಾಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಇದಕ್ಕೆ ಎಲ್ಲ ರೈತರ ಸಹಕಾರ ಅಗತ್ಯ ಎಂದರು.

ರಾಯಚೂರು ಕೃಷಿ ಇಲಾಖೆ ವಿಜ್ಞಾನಿ ಡಾ.ಎಂ.ವಿ. ರವಿ ಮಾತನಾಡಿ, ರೈತರ ಆದಾಯ ಹೆಚ್ಚಿಸಲಿಕ್ಕೆ ನಮ್ಮ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿ ರೈತರಿಗೆ ಅನುಕೂಲ ಮಾಡಲಾಗುವುದು ಎಂದರು.  ಕೃಷಿ ವಿಜ್ಞಾನಿ ಡಾ.ಬದರಿ ಪ್ರಸಾದ್, ರಾಯಚೂರು ಕೃಷಿ ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷ ಎಸ್.ಎಂ ಸಿದ್ಧಾರೆಡ್ಡಿ, ತೋಟಗಾರಿಕೆ ಇಲಾಖೆಯ ಹೇಮಲತಾ, ಕೃಷಿ ವಿಜ್ಞಾನಿ ಶ್ವೇತಾ, ಇಲಾಖೆ ಅಧಿಕಾರಿಗಳು, ರೈತರು ಇದ್ದರು.

**

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದು  ಮುಖ್ಯ. ಕೌಶಲ ಸುಧಾರಿಸುವ ಉದ್ದೇಶದಿಂದ ಈ ಕೋರ್ಸ್‌ ಆಯೋಜಿಸಲಾಗಿದೆ.
ಡಾ.ಜಾಗೃತಿ ದೇಶಮಾನ್ಯ
ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.